ADVERTISEMENT

ಇತಿಹಾಸ ದಾಖಲಿಸುವ ಡಿ.ಇಸ್ಮಾಯಿಲ್

ಕಿರಾಣಿ ವ್ಯಾಪಾರಿಯ ಐತಿಹಾಸಿಕ ಅಧ್ಯಯನ ಕೌತುಕ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 11:22 IST
Last Updated 12 ನವೆಂಬರ್ 2022, 11:22 IST
ಬೀರೂರಿನ ಶಾಸನ ತಜ್ಞ ಡಿ.ಇಸ್ಮಾಯಿಲ್.
ಬೀರೂರಿನ ಶಾಸನ ತಜ್ಞ ಡಿ.ಇಸ್ಮಾಯಿಲ್.   

ಕಡೂರು: ಇತಿಹಾಸ ದಾಖಲೆಯಾಗಬೇಕು. ಒಮ್ಮೆ ನಶಿಸಿದರೆ ನಮ್ಮ ಮುಂದಿನ ಪೀಳಿಗೆ ಮಹತ್ವದ ಸಂಗತಿಗಳಿಂದ ವಂಚಿತವಾಗುತ್ತದೆ ಎಂಬ ಆತಂಕ ಬೀರೂರಿನ ಶಾಸನ ತಜ್ಞ ಡಿ.ಇಸ್ಮಾಯಿಲ್ ಅವರದ್ದು.

ಬೀರೂರಿನಲ್ಲಿ ಹುಟ್ಟಿ ಬೆಳೆದ ಇಸ್ಮಾಯಿಲ್ ಓದಿರುವುದು ದ್ವಿತೀಯ ಪಿಯುಸಿ. ವೃತ್ತಿಯಲ್ಲಿ ಕಿರಾಣಿ ವ್ಯಾಪಾರಿ. ಪ್ರವೃತ್ತಿ ಶಾಸನಗಳ ಅಧ್ಯಯನ. ಪಿಯುಸಿ ಓದುವ ಸಮಯದಲ್ಲಿ ತರೀಕೆರೆ ಎಸ್.ಜೆ.ಎಂ.ಕಾಲೇಜಿನ ಶಂಭುಲಿಂಗಪ್ಪ ಅವರು ಹಿರೇನಲ್ಲೂರು ದೇವಸ್ಥಾನದ ಶಾಸನಗಳನ್ನು ಓದುವ ಸಮಯದಲ್ಲಿ ಇವರಿಗೂ ಆಸಕ್ತಿ ಬಂದು ಅಧ್ಯಯನ ಮಾಡತೊಡಗಿದರು. ಪೂರ್ವ ಹಳೆಗನ್ನಡ ಲಿಪಿಯನ್ನು ಅರ್ಥೈಸಿಕೊಳ್ಳಲು ಪಂಪಭಾರತ ಮುಂತಾದ ಮೂಲ ಪ್ರತಿಗಳ ಅವಲೋಕನದ ಜಿತೆಗೆ ಇತಿಹಾಸ ತಜ್ಞ ಫ್ಲೀಟ್, ಬಿ.ಎಲ್.ರೈಸ್, ಎಂ.ಎಚ್.ಕೃಷ್ಣ ಅವರನ್ನು ಅಧ್ಯಯನ ಮಾಡಿದರು. ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ, ಡಾ.ಎಂ.ಎಂ.ಕಲಬುರ್ಗಿ ಅವರ ಮಾರ್ಗದರ್ಶನ ದೊರೆಯಿತು. ಶಾಸನ ಲಿಪಿಗಳ ಪರಿಚಯವಾದ ನಂತರ ಅಪ್ರಕಟಿತ ಶಾಸನಗಳನ್ನು ಓದಲು ಆರಂಭಿಸಿದರು.

ಸುಮಾರು 32 ಅಪ್ರಕಟಿತ ಶಾಸನಗಳನ್ನು ಓದಿ ಪರಿಚಯಿಸಿದ್ದಾರೆ. ತಾಳೆಗರಿ ಗ್ರಂಥಗಳನ್ನು ಓದಿ ಅವುಗಳ ಮಹತ್ವವನ್ನು ತಿಳಿಸಿದ್ದಾರೆ. ಪ್ರಾಗೈತಿಹಾಸಿಕ ಸ್ಥಳಗಳನ್ನು ಗುರುತಿಸಿದ್ದಾರೆ. ಕಡೂರು ತಾಲ್ಲೂಕಿನ ಇತಿಹಾಸದ ಬಗ್ಗೆ ಸದಾ ಅಧ್ಯಯನಶೀಲರಾಗಿರುವ ಇಸ್ಮಾಯಿಲ್ ಅವರಿಗೆ ಪ್ರತೀ ಗ್ರಾಮದ ಇತಿಹಾಸ ದಾಖಲೆಯಾಗಿ ಉಳಿಯಬೇಕೆಂಬ ಮಹದಾಸೆಯಿದೆ.

ADVERTISEMENT

ಇಸ್ಮಾಯಿಲ್ ಅವರು ಸಂಶೋಧಿಸಿದ ಶಾಸನಗಳಲ್ಲಿ ತಾಲ್ಲೂಕಿನ ಬಂಟಗನಹಳ್ಳಿಯಲ್ಲಿರುವ 47 ಸಾಲುಗಳ ಶಾಸನವು ಹೊಯ್ಸಳ ವಿನಯಾದಿತ್ಯನ ಕಾಲದ್ದು. ಬನ್ನಿಹಟ್ಟಿಯ 53 ಸಾಲುಗಳ ಹೊಯ್ಸಳರ ಶಾಸನ, ಕಾಟಿನಕೆರೆಯಲ್ಲಿರುವ ಹೊಯ್ಸಳರಿಗೆ ಮಾಂಡಲೀಕರಾಗಿದ್ದ ಗಂಗರ ಶಾಸನಗಳು ಮುಖ್ಯವಾದವು.

ಹೇಮಗಿರಿ ತಾಲ್ಲೂಕಿನ ಮಹತ್ವದ ಐತಿಹಾಸಿಕ ಸ್ಥಳ. ಅಲ್ಲಿ ಜೈನ ಬಸ್ತಿಗಳಿರುವ ಕುರುಹುಗಳಿವೆ. ಆದರೆ ಜೈನ ಶಾಸನಗಳಿಲ್ಲ. ಈ ನಿಟ್ಟಿನಲ್ಲಿ ಹುಡುಕಾಟ ಆರಂಭಿಸಿದಾಗ ಇಸ್ಮಾಯಿಲ್ ಅವರಿಗೆ ಒಂದು ನಿಷಧಿ ಶಾಸನ ದೊರೆಯುತ್ತದೆ. ಬಾಚವ್ವೆ ಎಂಬುವವಳು ನಿಷಧಿಯಾದ ಬಗ್ಗೆ ಈ ಶಾಸನ ಬೆಳಕು ಚೆಲ್ಲುತ್ತದೆ. ಜೈನರ ಪ್ರಭಾವವೂ ಈ ಪ್ರದೇಶದಲ್ಲಿತ್ತು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ. ತಾಲ್ಲೂಕಿನಲ್ಲಿ ಹಲವು ತಾಮ್ರ ಶಾಸನಗಳನ್ನೂ ಇಸ್ಮಾಯಿಲ್ ಓದಿದ್ದಾರೆ.

ಇದಲ್ಲದೆ ಇಸ್ಮಾಯಿಲ್ ಅವರು ತಾಲ್ಲೂಕಿನ ಮಲ್ಲೇಶ್ವರದ ಬಳಿ ಪ್ರಾಗೈತಿಹಾಸಿಕ ನೆಲೆಗಳಿರುವುದನ್ನು ಪತ್ತೆ ಹಚ್ಚಿದ್ದಾರೆ. ತಾಳೆಗರಿ ಗ್ರಂಥಗಳನ್ನು ಸಂಶೋಧಿಸಿದ್ದಾರೆ. ಕುರುಬ ಸಮುದಾಯದವರು ಹೆಚ್ಚಿರುವ ಈ ಪ್ರದೇಶದಲ್ಲಿರುವ ಪೂಜಾಸ್ಥಳಗಳ ಬಗ್ಗೆ ಅಧ್ಯಯನ‌ ಮಾಡಿರುವ ಅವರ, ಮಧ್ಯಕರ್ನಾಟಕದಲ್ಲಿ ಬೀರದೇವರು ಎಂಬ ಸಂಶೋಧನಾ ಗ್ರಂಥ ಪ್ರಕಟಣೆಯ ಹೊಸ್ತಿಲಲ್ಲಿದೆ. ಕಡೂರು ಭಾಗದಲ್ಲಿ ಮೋಹನ ತರಂಗಿಣಿ, ಬಸವರಾಜ ರಗಳೆ, ಹರಿಭಕ್ತಿಸಾರ ಮುಂತಾದ ತಾಳೆಓಲೆ ಗ್ರಂಥಗಳು ದೊರೆಯುತ್ತವೆ ಎಂಬ ಅಭಿಪ್ರಾಯ ಅವರದ್ದು.

ಇಸ್ಮಾಯಿಲ್ ಅವರನ್ನು ಕುಂಭಕ ಪ್ರತಿಷ್ಟಾನ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ ಸಾಹಿತ್ಯ ಪರಿಷತ್ ಸನ್ಮಾನಿಸಿದೆ. ಇಸ್ಮಾಯಿಲ್ ಸಂಪರ್ಕಕ್ಕೆ 9611136280.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.