ADVERTISEMENT

ಚಿಕ್ಕಮಗಳೂರು | ಬಿರು ಬಿಸಿಲು: ಬತ್ತಿದ ನದಿಗಳು

ಬರಿದಾಗುತ್ತಿರುವ ಪಂಚನದಿಗಳ ಒಡಲು: ಆತಂಕದಲ್ಲಿ ಜನ

ವಿಜಯಕುಮಾರ್ ಎಸ್.ಕೆ.
Published 23 ಫೆಬ್ರುವರಿ 2024, 5:03 IST
Last Updated 23 ಫೆಬ್ರುವರಿ 2024, 5:03 IST
ತುಂಗಾ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಕಡಿಮೆಯಾಗಿರುವುದು
ತುಂಗಾ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಕಡಿಮೆಯಾಗಿರುವುದು   

ಚಿಕ್ಕಮಗಳೂರು: ಬಿರು ಬಿಸಿಲಿಗೆ ಜಿಲ್ಲೆಯ ಜೀವ ನದಿಗಳು ಬತ್ತುತ್ತಿದ್ದು, ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಪಶ್ಚಿಮ ಘಟ್ಟದ ಗಿರಿಶ್ರೇಣಿಗಳಲ್ಲಿ ಜೀವ ತೆಳೆಯುವ ಹಲವು ನದಿಗಳಿಗೆ ಚಿಕ್ಕಮಗಳೂರು ಜಿಲ್ಲೆಯೇ ತವರು. ತುಂಗಾ, ಭದ್ರ, ಹೇಮಾವತಿ, ನೇತ್ರಾವತಿ, ವೇದಾವತಿ ನದಿಗಳು ಜಿಲ್ಲೆಯಲ್ಲಿಯೇ ಜನ್ಮತಾಳುತ್ತವೆ. ಇವುಗಳ ಜತೆಗೆ ಸಣ್ಣ ಹೊಳೆಗಳು, ಉಪ ನದಿಗಳಿಗೂ ಇದೇ ಉಗಮ ಸ್ಥಾನ. ಆದರೆ, ಈ ನದಿಗಳೆಲ್ಲವೂ ಈಗ ಸಣ್ಣ ಕಾಲುವೆಯಂತೆ ಹರಿಯುತ್ತಿವೆ. 

ವಾಡಿಕೆಯಂತೆ ಮಳೆಯಾಗಿದ್ದರೆ, ನದಿಗಳಲ್ಲಿ ನೀರು ಹರಿಯುವ ಪ್ರಮಾಣ ಹೆಚ್ಚಾಗಿರುತ್ತಿತ್ತು. ಮಳೆಗಾಲದಲ್ಲೆ ಕಿರಿದಾಗ ಹರಿದ ನದಿಗಳಲ್ಲಿ ಈಗ ನೀರೇ ಇಲ್ಲವಾಗಿದೆ. ನದಿಗಳು ಸಣ್ಣ ಹಳ್ಳದ ಮಾದರಿಯಲ್ಲಿ ಹರಿಯುತ್ತಿವೆ. ಬಿಸಿಲಿನ ಝಳ ಇದೇ ರೀತಿ ಮುಂದುವರಿದರೆ ಈ ನದಿಗಳ ಸುತ್ತಮುತ್ತಲ ಹಳ್ಳಿಗಳಲ್ಲಿ ನೀರಿನ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇವುಗಳನ್ನು ನಂಬಿರುವ ಜಲಾಶಯಗಳ ಒಳ ಹರಿವು ಕೂಡ ಕಡಿಮೆಯಾಗಿದೆ. ಭದ್ರಾ ಜಲಾಶಯಕ್ಕೆ 134 ಕ್ಯೂಸೆಕ್ ನೀರು ಬರುತ್ತಿದೆ.

ADVERTISEMENT

ನದಿಗಳು ಮತ್ತು ಅವುಗಳ ಉಪನದಿಗಳಲ್ಲಿ ಮೇಲ್ಮಟ್ಟದಲ್ಲಿ ಕಾಣಿಸುವ ಹರಿವು ಕೆಳಮಟ್ಟಕ್ಕೆ ಹೋಗುತ್ತಾ ಕಡಿಮೆಯಾಗುತ್ತಿದೆ. ನದಿಯ ಬದಿಯಲ್ಲಿರುವ ಕಾಫಿ ಮತ್ತು ಟೀ ತೋಟಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ನದಿಯ ನೀರನ್ನು ಮೇಲೆತ್ತುತ್ತಿದ್ದಾರೆ. ಸಣ್ಣ ಬೆಳೆಗಾರರು ಸಣ್ಣ ಮೋಟರ್‌ಗಳನ್ನು ಇರಿಸಿದ್ದರೆ, ನದಿಗಳ ಪಕ್ಕದಲ್ಲಿರುವ ದೊಡ್ಡ ದೊಡ್ಡ ಕಂಪನಿ ಎಸ್ಟೇಟ್‌ಗಳು ನದಿಗಳಿಗೆ 100 ಎಚ್‌ಪಿ ಮೋಟರ್‌ಗಳನ್ನೂ ಇರಿಸಿ ನೀರು ಮೇಲೆತ್ತುತ್ತಿದ್ದಾರೆ.

ಬಾಳೆಹೊನ್ನೂರಿನಿಂದ ಕೊಪ್ಪ ಸಂಪರ್ಕಿಸುವ ರಸ್ತೆಯಲ್ಲಿ ಸಾಗಿದರೆ ಸೀತಾ ನದಿಯು ಸಣ್ಣ ಕಾಲುವೆಯಂತೆ ಹರಿಯುತ್ತಿದೆ. ಈ ನದಿಗೆ ಅಲ್ಲಲ್ಲಿ ದೊಡ್ಡ ದೊಡ್ಡ ಮೋಟರ್‌ಗಳನ್ನು ಅಳವಡಿಸಿ ನೀರು ಮೇಲೆತ್ತುತ್ತಿರುವುದು ಕಾಣಿಸುತ್ತದೆ. ಹೀಗೆ ನೀರು ಮೇಲೆತ್ತುವುದರಿಂದ ಮುಂದಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗಲಿದೆ ಎಂಬುದು ಸ್ಥಳೀಯರ ಆತಂಕ.

ಈ ನದಿಗಳಲ್ಲಿ ಹರಿಯುವ ನೀರಿನನ್ನು ಆಧರಿಸಿಯೇ ಗ್ರಾಮ ಮತ್ತು ಜನವಸತಿಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ಗ್ರಾಮ ಪಂಚಾಯಿತಿಗಳು ಮಾಡಿವೆ. ನದಿಗಳಲ್ಲಿ ಹರಿವು ನಿಂತರೆ ಎನು ಮಾಡಬೇಕು ಎಂಬ ಆತಂಕ ಅಧಿಕಾರಿಗಳನ್ನು ಕಾಡುತ್ತಿದೆ. ನೀರು ಸಂಪೂರ್ಣ ಖಾಲಿಯಾದರೆ ಮುಂದಿನ ದಿನಗಳಲ್ಲಿ ವನ್ಯಜೀವಿಗಳೂ ನೀರಿಗೆ ಪರದಾಡಬೇಕಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಜಯಪುರದ ಬಳಿ ಸೀತಾ ನದಿಯಲ್ಲಿ ನೀರಿನ ಹರಿವು ಸಂಪೂರ್ಣವಾಗಿ ಕಡಿಮೆಯಾಗಿರುವುದು

ತೋಟ ಉಳಿಸುವ ಸವಾಲು

ನದಿಗಳಲ್ಲಿ ನೀರಿಲ್ಲದಿರುವುದು ಅಂತರ್ಜಲ ಪಾತಾಳಕ್ಕೆ ಸೇರುವಂತೆ ಮಾಡಿದೆ. ಇದರ ನಡುವೆ ಬಿರು ಬಿಸಿಲಿಗೆ ಕಾಫಿ ಮತ್ತು ಟೀ ತೋಟಗಳು ಒಣಗುತ್ತಿದ್ದು ಉಳಿಸಿಕೊಳ್ಳುವುದು ಬೆಳೆಗಾರರಿಗೆ ಸವಾಲಿನ ಕೆಲಸವಾಗಿದೆ. ಕೊಳವೆ ಬಾವಿಗಳಲ್ಲಿ ನೀರು ಬರಿದಾಗುತ್ತಿದ್ದು ಹೊಸದಾಗಿ ಕೊರೆದರೂ ನೀರು ಸಿಗುತ್ತಿಲ್ಲ. ತೋಟಗಳನ್ನು ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಇದೆ. ಮುಂದಿನ ತಿಂಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.