
ಚಿಕ್ಕಮಗಳೂರು: ನಗರದ ಉಪ್ಪಳ್ಳಿ ಸಮೀಪ ಎ.ಬಿ.ವಾಜಪೇಯಿ ಬಡಾವಣೆಯಲ್ಲಿ ಬಡವರಿಗಾಗಿ ನಿರ್ಮಾಣವಾಗುತ್ತಿರುವ 1,511 ಮನೆಗಳ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಐದು ವರ್ಷಗಳಿಂದ ಫಲಾನುಭವಿಗಳು ಸೂರಿಗಾಗಿ ಕಾದು ಕುಳಿತಿದ್ದಾರೆ.
ವಾಜಪೇಯಿ ಬಡಾವಣೆಯ ಎತ್ತರದ ಪ್ರದೇಶದಲ್ಲಿ ನೆಲಮಹಡಿ ಮತ್ತು ಎರಡು ಮಹಡಿ (ಜಿ+2) ಕಟ್ಟಡಗಳು ನಿರ್ಮಾಣವಾಗುತ್ತಿವೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, 2020ರ ಡಿಸೆಂಬರ್ 25ರಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದೆ.
ಪ್ರತಿ ಮನೆಗೆ ಮೂಲಸೌಕರ್ಯ ವೆಚ್ಚ ಸೇರಿ ₹7.50 ಲಕ್ಷ ನಿಗದಿ ಮಾಡಲಾಗಿದೆ. ಫಲಾನುಭವಿಗಳು ₹3 ಲಕ್ಷ ಭರಿಸಲಿದ್ದು, ಉಳಿದ ಮೊತ್ತವನ್ನು ಸರ್ಕಾರವೇ ಭರಿಸಲಿದೆ. ರಾಜೀವ್ ಗಾಂಧಿ ವಸತಿ ನಿಗಮವು ಖಾಸಗಿ ಕಂಪನಿಯೊಂದಕ್ಕೆ ಕಾಮಗಾರಿ ಗುತ್ತಿಗೆ ನೀಡಿದ್ದು, ಮೂರು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಕಾಲಾವಕಾಶ ನೀಡಲಾಗಿತ್ತು. ಐದು ವರ್ಷ ಸಮೀಪಿಸುತ್ತಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಕೆಲವು ಕಟ್ಟಡಗಳು ಇನ್ನೂ ಮೊದಲ ಆರ್‌ಸಿಸಿ ಹಂತದಲ್ಲಿದ್ದರೆ, ಹಲವು ಮನೆಗಳು ಮೂರನೇ ಆರ್‌ಸಿಸಿ ಹಂತದಲ್ಲಿವೆ, ಇನ್ನೂ ಕೆಲ ಮನೆಗಳ ಫ್ಲಂಬಿಂಗ್ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ಕೂಡ ಬೆರಳೆಣಿಕೆಯಷ್ಟು ಕಾರ್ಮಿಕರು ನಿರ್ವಹಿಸುತ್ತಿದ್ದಾರೆ.
ಅರ್ಧಕ್ಕೆ ನಿಂತಿರುವ ಕಾಮಗಾರಿ ಸ್ಥಳಕ್ಕೆ ಹೋದರೆ ಪಾಳು ಬಿದ್ದಿರುವ ಕಟ್ಟಡಗಳಂತೆ ಗೋಚರಿಸುತ್ತಿವೆ. ಕಾಮಗಾರಿಯ ವೇಗ ಗಮನಿಸಿದರೆ ವಸತಿ ರಹಿತರ ಕನಸು ಸದ್ಯಕ್ಕೆ ಸಾಕಾರಗೊಳ್ಳುವ ಲಕ್ಷಣಗಳಿಲ್ಲ. ಸ್ವಂತ ಸೂರಿನ ಕನಸು ಹೊತ್ತಿರುವ ಜನ ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತಿದ್ದಾರೆ.
ನಗರಸಭೆ ಅಧಿಕಾರಿಗಳನ್ನು ಕೇಳಿದರೆ ರಾಜೀವ್ ಗಾಂಧಿ ವಸತಿ ನಿಗಮ ಕಾಮಗಾರಿ ನಿರ್ವಹಿಸುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಎಂದು ಹೇಳುತ್ತಾರೆ. ಯಾರನ್ನು ಕೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
‘ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಬಡವರು ವಾಸಕ್ಕೆ ಒಪ್ಪಿಸಬೇಕು. ಮನೆಗಾಗಿ ಕಾದು ಕುಳಿತಿರುವ ಜನರಿಗೆ ನ್ಯಾಯ ಒದಗಿಸಬೇಕು’ ಎಂಬುದು ಅವರ ಮನವಿ.
ಡಿಸೆಂಬರ್‌ನಲ್ಲಿ 300 ಮನೆ
‘ಮೊದಲ ಹಂತದಲ್ಲಿ ಡಿಸೆಂಬರ್‌ನಲ್ಲಿ ಕೆಲ ಮನೆಗಳನ್ನು ಬಿಟ್ಟುಕೊಡುವುದಾಗಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ’ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು. ‘300 ಮನೆಗಳಿಗೆ ಬಣ್ಣ ಬಳಿಯಲಾಗುತ್ತಿದ್ದು ಅಷ್ಟು ಮನೆಗಳನ್ನು ಬಿಟ್ಟುಕೊಡುವ ಸಾಧ್ಯತೆ ಇದೆ. ಇನ್ನುಳಿದ ಮನೆಗಳು ಇನ್ನೂ ಸಾಕಷ್ಟು ಕಾಮಗಾರಿ ಇದೆ. ಪೂರ್ಣಗೊಳಿಸಲು ಮೇಲಿಂದ ಮೇಲೆ ಪತ್ರ ಬರೆಯುತ್ತಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.