ADVERTISEMENT

ಮೂಡಿಗೆರೆಯ ಬಕ್ಕಿ ಗ್ರಾಮದಲ್ಲಿ ಹೊಯ್ಸಳರ ಕಾಲದ ವೀರಗಲ್ಲು ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 4:27 IST
Last Updated 20 ಜುಲೈ 2025, 4:27 IST
ಮೂಡಿಗೆರೆ ತಾಲ್ಲೂಕಿನ ಬಕ್ಕಿ ಗ್ರಾಮದಲ್ಲಿ ಪತ್ತೆಯಾಗಿರುವ ಹೊಯ್ಸಳರ ಕಾಲದ ವೀರಗಲ್ಲನ್ನು ಶಾಸನ ಸಂಶೋಧಕ ಮೆಕನಗದ್ದೆ ಲಕ್ಷ್ಮಣಗೌಡ, ಬಿ.ಬಿ.ಸಂಪತ್ ಕುಮಾರ್ ವೀಕ್ಷಿಸಿದರು
ಮೂಡಿಗೆರೆ ತಾಲ್ಲೂಕಿನ ಬಕ್ಕಿ ಗ್ರಾಮದಲ್ಲಿ ಪತ್ತೆಯಾಗಿರುವ ಹೊಯ್ಸಳರ ಕಾಲದ ವೀರಗಲ್ಲನ್ನು ಶಾಸನ ಸಂಶೋಧಕ ಮೆಕನಗದ್ದೆ ಲಕ್ಷ್ಮಣಗೌಡ, ಬಿ.ಬಿ.ಸಂಪತ್ ಕುಮಾರ್ ವೀಕ್ಷಿಸಿದರು   

ಮೂಡಿಗೆರೆ: ತಾಲ್ಲೂಕಿನ ಗ್ರಾಮದ ಸುಗ್ಗಿ ಮಂದಿನಲ್ಲಿ ಹೊಯ್ಸಳರ ಕಾಲದ 2 ವೀರಗಲ್ಲು ಶಾಸನಗಳು ಪತ್ತೆಯಾಗಿವೆ.

ಶಾಸನ ಸಂಶೋಧಕರಾದ ಮೇಕನಗದ್ದೆ ಲಕ್ಷ್ಮಣಗೌಡ ಹಾಗೂ ಬಕ್ಕಿ ಗ್ರಾಮದ ಬಿ.ಬಿ.ಸಂಪತ್ ಕುಮಾರ್ ಅವರು ಅಪ್ರಕಟಿತ ಶಾಸನಗಳ ಅಚ್ಚು ತೆಗೆದು ಶಾಸನ ತಜ್ಞ ಮೈಸೂರಿನ ಎಚ್.ಎಂ.ನಾಗರಾಜರಾವ್ ಅವರಿಗೆ ಕಳುಹಿಸಿ ಕೊಟ್ಟಿದ್ದರು.

ಹೊಯ್ಸಳರ ವೀರಬಲ್ಲಾಳನ ಕಾಲಕ್ಕೆ ಸೇರಿರುವ ಈ ಶಾಸನಗಳ ಪೈಕಿ ಒಂದರಲ್ಲಿ ಸ್ಪಷ್ಟವಾದ ಬರವಣಿಗೆ ಇದೆ. ಇನ್ನೊಂದರಲ್ಲಿ ಅಕ್ಷರಗಳು ಓದಲಾಗದ ಸ್ಥಿತಿಯಲ್ಲಿವೆ. ಮೊದಲನೇ ಶಾಸನದಲ್ಲಿ ಎರಡು ಪಟ್ಟಿಗಳಲ್ಲಿ ಬರವಣಿಗೆ ಇದೆ. ಮೂರು ಪಟ್ಟಿಗಳಲ್ಲಿ ಆಕರ್ಷಕವಾದ ಕೆತ್ತನೆಗಳಿವೆ. ಮೊದಲನೇ ಪಟ್ಟಿಯಲ್ಲಿ 3 ಸಾಲುಗಳಿದ್ದು, ಹೊಯ್ಸಳ ರಾಜ ವೀರಬಲ್ಲಾಳರ ಆಳ್ವಿಕೆಯ ಕಾಲದ ಪ್ಲವ ಸಂವತ್ಸರದಲ್ಲಿ ನಡೆದ ಹೋರಾಟದಲ್ಲಿ ಮಡಿದ ವೀರನ ಉಲ್ಲೇಖವಿದೆ. 2ನೇ ಪಟ್ಟಿಯಲ್ಲಿ 4 ಸಾಲುಗಳಿವೆ. ಕಲ್ಲಿನ ಕೆತ್ತನೆ ಅಕ್ಷರ ಅಳಿಸಿ ಹೋಗಿರುವುದರಿಂದ ವೀರನ ಹೆಸರು ಮತ್ತಿತರ ವಿವರಗಳು ಸ್ಪಷ್ಟವಾಗುತ್ತಿಲ್ಲ. ಕೊನೆಯಲ್ಲಿ ಶಾಸನವನ್ನು ಹಾಳುಮಾಡಿದವರಿಗೆ ಒದಗುವ ಪಾಪದ ಕುರಿತು ಶಾಪಾಶಯ ವಾಕ್ಯಗಳಿವೆ. ಎರಡನೆಯ ಕಲ್ಲಿನಲ್ಲಿ ಅಕ್ಷರಗಳು ಪೂರ್ತಿ ಸವೆದಿರುವುದರಿಂದ ಯಾವ ಮಾಹಿತಿಯೂ ಸ್ಪಷ್ಟವಾಗಿ ಸಿಗುತ್ತಿಲ್ಲ.

ADVERTISEMENT

‘ಪಠ್ಯ ಲಭ್ಯವಾಗಿರುವ ವೀರಗಲ್ಲಿನಲ್ಲಿ ಕೆಳಗಿನ ಪಟ್ಟಿಯಲ್ಲಿ ನೆಲದ ಮೇಲೆ ನಿಂತ ವೀರನೊಬ್ಬ ಕುದುರೆ ಮೇಲೆ ಕುಳಿತು ಯುದ್ಧ ಮಾಡುತ್ತಾ ಎದುರಾಳಿಯೊಂದಿಗೆ ಹೋರಾಡುತ್ತಿರುವ ಕೆತ್ತನೆಯಿದೆ. ಮೇಲಿನ ಪಟ್ಟಿಯಲ್ಲಿ ಅಪ್ಸರೆಯರನ್ನು ಸುರಲೋಕಕ್ಕೆ ಕರೆತರುವ ಚಿತ್ರವಿದೆ. ಮೂರನೆಯ ಪಟ್ಟಿಯಲ್ಲಿ ವೀರನಿಗೆ ವೀರಸ್ವರ್ಗ ಲಭಿಸಿ ಅಲ್ಲಿ ದೇವತೆಗಳಿಂದ ಪೂಜೆಗೊಳ್ಳುತ್ತಿರುವ ಚಿತ್ರಣದೊಂದಿಗೆ ಸೂರ್ಯ, ಚಂದ್ರ, ನಂದಿ, ತ್ರಿಶೂಲಗಳಿವೆ. ವೀರನ ತ್ಯಾಗ ಬಲಿದಾನಗಳು ಚಂದ್ರಾರ್ಕವಾಗಿರಲಿ ಎಂಬುದನ್ನು ವೀರಗಲ್ಲು ಸಂಕೇತಿಸುತ್ತದೆ. ಪಕ್ಕದಲ್ಲಿರುವ ಇನ್ನೊಂದು ವೀರಗಲ್ಲಿನಲ್ಲಿ ಅಕ್ಷರಗಳು ಪೂರ್ಣ ಪ್ರಮಾಣದಲ್ಲಿ ನಶಿಸಿ ಹೋಗಿವೆ. ಅದರಲ್ಲೂ ಆಕರ್ಷಕ ಶಿಲ್ಪಗಳ ಕೆತ್ತನೆಯಿದೆ. ಕೆಳಗಿನ ಪಟ್ಟಿಯಲ್ಲಿ ನೆಲದ ಮೇಲೆ ನಿಂತಿರುವ ವೀರನು ಪದಾತಿಗಳೊಂದಿಗೆ ಹೋರಾಡುತ್ತಿರುವ ಚಿತ್ರವಿದೆ. ವೀರನು ಒಂದು ಕೈಯಲ್ಲಿ ಬಿಲ್ಲನ್ನು ಹಿಡಿದು ಬಾಣ ಪ್ರಯೋಗಿಸಿ ಇನ್ನೊಂದು ಕೈಯಲ್ಲಿ ಒರೆಯಿಂದ ಕತ್ತಿಯನ್ನು ಹಿರಿದು ಮೇಲೆ ಎತ್ತಿ ಹಿಡಿದಿರುವ ಅಪರೂಪದ ಚಿತ್ರವಿದೆʼ ಎಂದು ಶಾಸನ ಸಂಶೋಧಕರಾದ ಮೆಕನಗದ್ದೆ ಲಕ್ಷ್ಮಣಗೌಡ ತಿಳಿಸಿದರು.

‘ಬಕ್ಕಿ ಗ್ರಾಮದ ಸುಗ್ಗಿ ಮಂದಿರದಲ್ಲಿ ತ್ರಿಪುರ ಸಾವಿರದ ಸುಗ್ಗಿ ಹಬ್ಬದ 3 ಹಾಗೂ 4ನೇ ದಿನಗಳಲ್ಲಿ ಸುಗ್ಗಿ ಉತ್ಸವ ನಡೆಯುತ್ತದೆ. ಸುಗ್ಗಿ ಹಬ್ಬ ಆರಂಭವಾದ ನಂತರ ಬರುವ ಮೊದಲ ಬುಧವಾರ ರಾತ್ರಿ ತ್ರಿಪುರ ಸಾವಿರದ ಬಕ್ಕಿ ಹ್ಯಾರಗುಡ್ಡೆ ಹಾಗೂ ಪಟ್ಟದೂರು ಗ್ರಾಮದ ದೇವರುಗಳು ನೆರೆದು ಹನ್ನೆರಡು ಮಹಾಮಂಗಳಾರತಿ ನೆರವೇರಿಸಿ ಇರುಳು ಸುಗ್ಗಿ ನಡೆಸಿ ಹಿಂದಿರುಗುತ್ತಾರೆ. ಮರುದಿನ ಅಪರಾಹ್ನ ಹಗಲು ಸುಗ್ಗಿ ನಡೆಯುತ್ತದೆ. ಶಾಸನ ದೊರೆತಿರುವ ಈ ಸ್ಥಳ ತ್ರಿಪುರ ಸಾವಿರದ ಸುಗ್ಗಿಹಬ್ಬ ನಡೆಯುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ’ ಎಂದು ಗ್ರಾಮದ ಸಂಪತ್ ಕುಮಾರ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.