ಕೊಪ್ಪ: 'ಶೃಂಗೇರಿ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇದ್ದರೆ, ಶಾಸಕರು ಹಿರೀಕೆರೆ ಬಳಿ ನಡೆಯುತ್ತಿರುವ ಲೇಔಟ್ ಕಾಮಗಾರಿ ತಕ್ಷಣವೇ ನಿಲ್ಲಿಸಬೇಕು' ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಕೆ.ದಿನೇಶ್ ಹೊಸೂರ್ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಹಿರೀಕೆರೆ ಮೇಲ್ಭಾಗದಲ್ಲಿ ಲೇಔಟ್ ಕಾಮಗಾರಿ ಆಗಬಾರದು ಎಂದು ಪಟ್ಟಣದ ಶೇ 90ರಷ್ಟು ಮಂದಿ ಸಹಿ ಮಾಡಿ ಮನವಿ ಕೊಟ್ಟಿದ್ದಾರೆ. ಇದೇ ವಿಷಯವಾಗಿ ಬಂದ್‌ಗೆ ಕರೆ ಕೊಟ್ಟಾಗ ಎಲ್ಲರೂ ಸಹಕರಿಸಿದ್ದರು' ಎಂದರು.
'ಡಯಾಸ್ ಅವರು ಅಂದು ಲೇಔಟ್ ಮಾಡುವುದಿಲ್ಲ ಎಂದು ಹೇಳಿದ್ದರು, ಈಗ ಒಬ್ಬ ವ್ಯಕ್ತಿ ತಾವೇ ಲೇಔಟ್ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದ್ದಾರೆ. ಜನಪರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಯಿತು. ಆದರೆ, ಲೇಔಟ್ ಮಾಡುತ್ತಿರುವ ವ್ಯಕ್ತಿಯಿಂದ ಒಂದು ನಿವೇಶನ ಕೇಳಿದ್ದಾರೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ. ಅದನ್ನು ಕೇಳಿದವರು ಯಾರು ಎಂದು ಸಾರ್ವಜನಿಕವಾಗಿ ಅವರು ಹೇಳಬೇಕು. ಬ್ಲಾಕ್ ಮೇಲ್‌ಗೆ ಬಿಜೆಪಿ ಹೆದರುವುದಿಲ್ಲ' ಎಂದರು.
'ಜೀವರಾಜ್ ಅವರು ಕೆರೆ ಒತ್ತುವರಿ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಒಂದು ವೇಳೆ ಒತ್ತುವರಿಯಾಗಿದ್ದರೆ ಅವರು ಬಿಟ್ಟುಕೊಡುತ್ತಾರೆ. ಶಾಸಕರ ಹೆಸರು ಹೇಳಿಕೊಂಡು ಭ್ರಷ್ಟಾಚಾರ ನಡೆಯುತ್ತಿದೆ. ಇದೇ ವಿಚಾರವಾಗಿ 10 ದಿನಗಳಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತೇವೆ' ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಎಸ್.ಮಹಾಬಲ ರಾವ್ ಮಾತನಾಡಿ, 'ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಪಣ ತೊಟ್ಟಿದೆ. ಪಟ್ಟಣ ಪಂಚಾಯಿತಿಯಿಂದ ಪೂರೈಸಲಾಗುವ ನೀರು ಕುಡಿಯಲು ಯೋಗ್ಯವಿದೆ ಎಂದು ವರದಿ ಬಂದಿದೆ. ಆದರೆ, ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ಹಿಂದೆ ವಾರದಲ್ಲಿ ಎರಡು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು. ಜೀವರಾಜ್ ಶಾಸಕರಾಗಿದ್ದಾಗ ಸಮರ್ಪಕವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಯಿತು' ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪುಣ್ಯಪಾಲ್ ಮಾತನಾಡಿ, 'ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿ ಪ್ರತಿಭಟಿಸಿದೆ. ಪ್ರತಿಭಟನೆಯಲ್ಲಿ ಕುಡಿಯುವ ನೀರಿಗಿಂತ ಬೇರೆ ವಿಚಾರ ಹೆಚ್ಚು ಚರ್ಚೆಯಾಗಿದೆ. ಕಾಂಗ್ರೆಸ್ ಸಾರ್ವಜನಿಕ ಹಿತಾಸಕ್ತಿ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡುವುದನ್ನು ಬಿಡಬೇಕು. ಹಿರೀಕೆರೆ ಬಳಿ ನಿರ್ಮಾಣವಾಗುತ್ತಿರುವ ಲೇಔಟ್‌ನಿಂದ ಮಳೆ ಬಂದಾಗ ಕಲುಷಿತ ನೀರು ಸೇರಿರುವ ಸಾಧ್ಯತೆ ಇದೆ. ಲೇಔಟ್ ಬಗ್ಗೆ ಶಾಸಕರ ನಿಲುವು ಸ್ಪಷ್ಟವಾಗಿಲ್ಲ' ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಇಸ್ಮಾಯಿಲ್ ಮಾತನಾಡಿ, 'ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್‌ಗೆ ಹಾನಿಯಾಗಿದೆ ಎಂದು ಪಟ್ಟಣ ಪಂಚಾಯಿತಿ ಆಕ್ಷೇಪ ವ್ಯಕ್ತಪಡಿಸಿದಾಗ, ಗುತ್ತಿಗೆದಾರರು ಕೆಸುವಿನ ಕೆರೆಯಲ್ಲಿ ಬಾವಿ ತೆಗೆಸಿಕೊಟ್ಟಿದ್ದಾರೆ. ಬಾವಿ ತೆಗೆಯಲು ಕಾಂಗ್ರೆಸ್ ಸದಸ್ಯರೂ ಅನುಮತಿ ಕೊಟ್ಟಿದ್ದಾರೆ. ಇಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ. ವಿದ್ಯುತ್ ಪರಿವರ್ತಕ ಅಳವಡಿಸಿದರೆ, ಇಲ್ಲಿಂದಲೂ ನೀರು ಪೂರೈಕೆ ಸಾಧ್ಯ' ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ದಿವಾಕರ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಚ್.ಆರ್.ರೇಖಾ, ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ, ಸದಸ್ಯರಾದ ಗಾಯತ್ರಿ ವಸಂತ್, ಸುಜಾತಾ, ತಾಲ್ಲೂಕು ಬಿಜೆಪಿ ವಕ್ತಾರ ಎಚ್.ಆರ್.ಜಗದೀಶ್, ಮುಖಂಡರಾದ ಜಯಂತ್, ರೇವಂತ್, ಉಮೇಶ್, ಅರುಣ್ ಶಿವಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.