ಮೂಡಿಗೆರೆ: ಸರ್ಕಾರದ ಸೌಲಭ್ಯ ಪಡೆಯಲು ಬೇರೆ ಬೇರೆ ಮಾನದಂಡದಲ್ಲಿ ಕುಟುಂಬದ ವಾರ್ಷಿಕ ಆದಾಯ ದೃಢೀಕರಣವನ್ನು ಅಧಿಕಾರಿಗಳು ಕೇಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗೋಣಿಬೀಡು ಗ್ರಾಮ ಪಂಚಾಯಿತಿ ಸದಸ್ಯ ಆನಂದ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಪಿಎಲ್ ಪಡಿತರ ಚೀಟಿ ಪಡೆಯಲು ಸರ್ಕಾರ ಪ್ರತಿ ಕುಟುಂಬಕ್ಕೆ ವಾರ್ಷಿಕ ಆದಾಯ ₹1.20 ಲಕ್ಷ ನಿಗದಿಪಡಿಸಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಕುಟುಂಬದ ವಾರ್ಷಿಕ ಆದಾಯ ₹60 ಸಾವಿರ ನಿಗದಿಪಡಿಸಿದೆ. ಸೌಲಭ್ಯ ಪಡೆಯಲು ಒಂದೇ ರೀತಿಯ ಕುಟುಂಬದ ಆದಾಯ ದೃಢೀಕರಣ ವ್ಯವಸ್ಥೆ ಜಾರಿಗೊಳಿಸಬೇಕು. ಇಲ್ಲವಾದಲ್ಲಿ, ನೈಜ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ’ ಎಂದರು.
ʼಕಾಫಿ ತೋಟ, ಭತ್ತದ ಗದ್ದೆ ಸೇರಿದಂತೆ ಹಲವು ಕಡೆ ಕೂಲಿ ಕೆಲಸಕ್ಕೆ ಪ್ರತಿದಿನ ₹300ಕ್ಕಿಂತ ಹೆಚ್ಚು ದಿನಗೂಲಿ ಇದೆ. ವಾಹನ ಚಾಲಕರಿಗೆ ದಿನಕ್ಕೆ ₹300 ರಿಂದ ₹500 ವೇತನ ದೊರೆಯುತ್ತದೆ. ಆದಾಯ ದೃಢೀಕರಣಕ್ಕೆ ಅರ್ಜಿ ಸಲ್ಲಿಸುವಾಗ ಯಾವ ಸೌಲಭ್ಯಕ್ಕೆ ಎಂದು ಅರ್ಜಿಯಲ್ಲಿ ನಮೂದಿಸಬೇಕು. ಬಿಪಿಎಲ್ ಪಡಿತರ ಚೀಟಿ ಪಡೆಯಲು ಎಂದು ನಮೂದಿಸಿದರೆ ಕಂದಾಯ ಇಲಾಖೆ ಅಧಿಕಾರಿಗಳು ₹1.20 ಲಕ್ಷ ವಾರ್ಷಿಕ ಆದಾಯದ ದೃಢೀಕರಣ ನೀಡುತ್ತಾರೆ. ಈ ಪ್ರಮಾಣಪತ್ರ ಇಟ್ಟುಕೊಂಡು ವಿದ್ಯಾರ್ಥಿ ವೇತನ ಪಡೆಯಲು ಆಗದು. ಎಲ್ಲ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.