ADVERTISEMENT

ತರೀಕೆರೆ: ಮೂಲಸೌಕರ್ಯ ಮರೀಚಿಕೆ, ಗೋಳು ಕೇಳುವರಿಲ್ಲ

ತರೀಕೆರೆ ಪಟ್ಟಣದ ಗಾಳಿಹಳ್ಳಿ, ಸುಂದರೇಶ, ಆಶ್ರಯ ಬಡಾವಣೆಯ ನಾಗರಿಕರ ದುಸ್ಥಿತಿ

ದಾದಾಪೀರ್
Published 22 ಡಿಸೆಂಬರ್ 2019, 19:30 IST
Last Updated 22 ಡಿಸೆಂಬರ್ 2019, 19:30 IST
ತರೀಕೆರೆ ಪಟ್ಟಣದ ಆಶ್ರಯ ಬಡಾವಣೆ
ತರೀಕೆರೆ ಪಟ್ಟಣದ ಆಶ್ರಯ ಬಡಾವಣೆ    

ತರೀಕೆರೆ: ಪಟ್ಟಣದ ಗಾಳಿಹಳ್ಳಿ, ಸುಂದರೇಶ, ಆಶ್ರಯ ಬಡಾವಣೆಗಳು ಮೂಲಸೌಕರ್ಯಗಳ ಕೊರತೆಯಿಂದ ಸೊರಗಿವೆ. ರಸ್ತೆ, ನೀರಿನ ಸೌಕರ್ಯ, ಒಳಚರಂಡಿ ಅವ್ಯವಸ್ಥೆಗಳ ಸುಳಿಯಲ್ಲಿ ನಿವಾಸಿಗಳು ಬದುಕಬೇಕಾಗಿದೆ.

ಪುರಸಭೆಯವರು ಫಲಾನುಭವಿಗಳಿಗೆ ನಿವೇಶನ ನೀಡುವುದಕ್ಕೂ ಮೊದಲು ನಕ್ಷೆ ಸಿದ್ಧಪಡಿಸಿ ಬಡಾವಣೆ ಅಭಿವೃದ್ಧಿಪಡಿಸಬೇಕಿತ್ತು. ಆದರೆ, ಈ ಕೆಲಸ ಮಾಡಿಲ್ಲ. ರಸ್ತೆ , ಪಾರ್ಕ್, ಆಳಗುಂಡಿ (ಮ್ಯಾನ್ ಹೋಲ್), ಸಾರ್ವಜನಿಕ ಶೌಚಾಲಯ, ನೀರಿನ ವ್ಯವಸ್ಥೆಗಳು ಇಲ್ಲ. ರಸ್ತೆಗಳು ಒತ್ತುವರಿಯಾಗಿವೆ. ರಸ್ತೆ ಮಧ್ಯದಲ್ಲಿ ನೀರಿನ ತೊಟ್ಟಿಗಳನ್ನು ಇಟ್ಟಿದ್ದು, ವಾಹನ ಸಂಚಾರಕ್ಕೆ ಪಡಿಪಟಾಲುಪಡಬೇಕಾಗಿದೆ.

1992 ರಿಂದ 2002 ರವರೆಗೆ 10 ವರ್ಷಗಳಲ್ಲಿ ಸುಮಾರು 1,750 ಕ್ಕೂ ಹೆಚ್ಚು ನಿವೇಶನಗಳನ್ನು ವಸತಿರಹಿತ ಬಡವರಿಗೆ ನೀಡಲಾಗಿದೆ. ಬಡಾವಣೆಗಳು ಅಸ್ತಿತ್ವಕ್ಕೆ ಬಂದು 25 ವರ್ಷಗಳು ಗತಿಸಿವೆ. ಶೇ 50ರಷ್ಟು ಫಲಾನುಭವಿಗಳು ಸರ್ಕಾರದ ನೆರವು, ಸಾಲ ಪಡೆದು ಮನೆ ನಿರ್ಮಿಸಿಕೊಂಡಿದ್ದಾರೆ. ಇನ್ನು ಅರ್ಧದಷ್ಟು ನಿವೇಶನಗಳು ಹಾಳುಬಿದ್ದಿವೆ.

ADVERTISEMENT

ಬಡಾವಣೆಗಳಿಗೆ ನಾಮಕರಣ ಮಾಡಿ ಕೈತೊಳೆದುಕೊಂಡಿರುವ ಪುರಸಭೆ ಬೀದಿಗಳಿಗೆ ವಿಳಾಸ ಗುರುತಿನ ಫಲಕಗಳನ್ನು ಹಾಕಿಲ್ಲ. ವಿಳಾಸವನ್ನು ಗುರುತಿಸುವುದು ಕಷ್ಟವಾಗುತ್ತದೆ ಎಂದು ಆಟೊ ಚಾಲಕರು ಗೋಳು ತೋಡಿಕೊಳ್ಳುತ್ತಾರೆ. ಇಲ್ಲಿ‌ ಮನೆ ಕಟ್ಟಿಕೊಂಡು ವಾಸ ಶುರು ಮಾಡಿದರೆ, ಅನುಭವಿಸಬೇಕಿರುವ ತಾಪತ್ರಯಗಳ ಅರಿವಿನಿಂದಾಗಿ ಕೆಲವು ಫಲಾನುಭವಿಗಳು ಆ ಗೋಜಿಗೆ ಹೋಗಿಲ್ಲ. ಒಂದೇ ನಿವೇಶನಕ್ಕೆ ಇಬ್ಬರಿಗೆ ಹಕ್ಕುಪತ್ರಗಳನ್ನು ನೀಡಿರುವ ಎಡವಟ್ಟುಗಳು ಆಗಿವೆ. ಈ ಪೈಕಿ ಕೆಲವೊಂದು ನಕಲಿ ಹಕ್ಕುಪತ್ರಗಳಾಗಿದ್ದು, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಈಚೆಗೆ ಖಾತಾ ಪ್ರಕ್ರಿಯೆ ತಡೆಯಲಾಗಿದೆ. ಈ ಕಾರಣದಿಂದಲೂ ಫಲಾನುಭವಿಗಳು ಮನೆಗಳನ್ನು ಕಟ್ಟುಲಾಗುತ್ತಿಲ್ಲ.

‘ಫಲಾನುಭವಿಗಳ ಪಟ್ಟಿ ಮತ್ತು ನಿವೇಶನ ದಾಖಲೆಗಳೂ ಪುರಸಭೆಯಲ್ಲಿ ಲಭ್ಯವಿಲ್ಲ. ನಿವೇಶನ ವಿತರಣೆಯಲ್ಲಿ ಅಕ್ರಮ ಎಸಗಿರುವ ಅನುಮಾನ ಇದೆ’ ಎಂದು ಫಲಾನುಭವಿ ನಾಸೀರಾ ಭಾನು ದೂಷಿಸಿದ್ದಾರೆ.

ಪುರಸಭೆಯು 25 ವರ್ಷಗಳಲ್ಲಿ ₹ 50 ಲಕ್ಷ ಅನುದಾನ ಒದಗಿಸಿದೆ. ಕೆಲವೇ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬೀದಿ ದೀಪದ ವ್ಯವಸ್ಥೆ ಇಲ್ಲ. ಈ ಬಡಾವಣೆಗಳಲ್ಲಿ ರಾತ್ರಿಯಲ್ಲಿ ಓಡಾಡುವುದು ದುಸ್ಸಾಹಸವಾಗಿದೆ. ಈ ಬಡಾವಣೆಗಳು ಬಸ್ ನಿಲ್ದಾಣದಿಂದ ಮೂರು ಕಿಲೋ ಮೀಟರ್‌ ದೂರವಿದೆ. ರಾತ್ರಿ ವೇಳೆ ಈ ಬಡಾವಣೆಗಳಿಗೆ ತಲುಪಲು ಸಾಹಪಡಬೇಕು.

ರಸ್ತೆ ಸರಿಯಿಲ್ಲದಿರುವುದು ಮತ್ತು ಕತ್ತಲೆ ಕಾರಣಕ್ಕೆ ಆಟೊ ರಿಕ್ಷಾದವರು ಈ ಬಡಾವಣೆಗಳಿಗೆ ಬಾಡಿಗೆ ಬರಲು ಹಿಂದೇಟು ಹಾಕುತ್ತಾರೆ. ದುಬಾರಿ ಬಾಡಿಗೆ ಕೇಳುತ್ತಾರೆ. ಇದು ನಾಗರಿಕರಿಗೆ ತಲೆನೋವಾಗಿ ಪರಿಣಮಿಸಿದೆ.

ಗರ್ಭಿಣಿಯರು, ವೃದ್ಧರು, ಅಂಗವಿಕರು ಆಸ್ಪತ್ರೆಗೆ ತೆರಳುವ ಪಡುವ ಪಾಡು ಹೇಳತೀರದಾಗಿದೆ. ರಸ್ತೆ ಸಮಸ್ಯೆ ಕಾರಣದಿಂದಾಗಿ ಅಂಬುಲೆನ್ಸ್‌ನವರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಮಳೆಗಾಲದಲ್ಲಿ ಪಟ್ಟಣಕ್ಕೂ ಈ ಬಡಾವಣೆಗಳಿಗೂ ಸಂಪರ್ಕ ಕಡಿತವಾಗುತ್ತದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ಖಾಲಿ ನಿವೇಶನಗಳಲ್ಲಿ ಕೆಲವು ಉದ್ದಿಮೆದಾರರು ಅಡಿಕೆ ಸಂಸ್ಕರಣೆ ಚಟುವಟಿಕೆ ಸಹಿತ ವಿವಿಧ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಇದು ತ್ಯಾಜ್ಯ ಉತ್ಪಾದನೆಗೆ ಎಡೆಮಾಡಿದ್ದು, ಬಡಾವಣೆಗಳು ತ್ಯಾಜ್ಯ ಕೂಪಗಳಾಗಿವೆ.

ಚರಂಡಿಗಳ ವ್ಯವಸ್ಥೆ ಇಲ್ಲದಿರುವುದು ಬಚ್ಚಲಿನ ನೀರು ಮನೆ ಹಿಂದೆಮುಂದೆ ನಿಲ್ಲುತ್ತದೆ. ಬಡಾವಣೆಯಲ್ಲಿ ಕೊಳಕುನೀರಿನ ರಾಡಿ ನಿರ್ಮಾಣವಾಗಿದೆ. ಹಂದಿಗಳ ಕಾಟ ಹೆಚ್ಚಾಗಿದೆ. ಸೊಳ್ಳೆಗಳ ಹಾವಳಿ ವಿಪರೀತ ಇದೆ. ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದಿವೆ. ಅವುಗಳ ತೆರವಿಗೆ ಕ್ರಮ ವಹಿಸಿಲ್ಲ. ಇದು ಹುಳಹುಪ್ಪಟೆಗಳ ಆವಾಸಕ್ಕೆ ಎಡೆಯಾಗಿದೆ.

ಕೊಳವೆಬಾವಿಗಳ ಮೂಲಕ, ಅಲ್ಲಲ್ಲಿ ಪೈಪ್‌ಲೈನ್ ಮೂಲಕ ನೀರು ಪೂರೈಸಲಾಗುತ್ತಿದೆ. ಇಲ್ಲಿ ಒಂದೇ ಒಂದು ನೀರು ಸಂಗ್ರಹಿಸುವ ಟ್ಯಾಂಕ್‌ ಇದೆ. ಕಡಿಮೆ ಗಾತ್ರದಲ್ಲಿ ಸಂಗ್ರಹವಾಗುವ ಇಲ್ಲಿನ ನೀರನ್ನು ಕೋಡಿ ಕ್ಯಾಂಪ್ ಸಹಿತ ಇತರ ನಾಲ್ಕಾರು ಬಡಾವಣೆಗಳಿಗೆ ಒದಗಿಸಬೇಕಿದೆ. ಮೋಟಾರು ಸಾಮರ್ಥ್ಯ, ವಿದ್ಯುತ್ ಕಣ್ಣಾಮುಚ್ಚಾಲೆ ತೊಡಕಾಗಿದೆ.

ಆಡಳಿತ ನೆರವಿಗೆ ಬರಲಿ
ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿರುವ ಈ ಬಡಾವಣೆಗಳಿಗೆ ನಿವೇಶನ ಎಸ್ಟೇಟ್ ಉದ್ಯಮ ಕಾಲಿಟ್ಟಿದೆ. ಮನೆ ಕಟ್ಟಲಾಗದವರಿಂದ ನಿವೇಶನಗಳನ್ನು ಉಳ್ಳವರು ಖರೀದಿಸಿದ್ದಾರೆ. ಇದರಿಂದಾಗಿ ವಸತಿರಹಿತರು ಮತ್ತೂ ಮನೆ ಕಟ್ಟಿಕೊಳ್ಳಲಾಗದ ಅಪಾಯ ಕಾಡುತ್ತಿದೆ. ಮೂಲಸೌಲಭ್ಯಗಳ ಕೊರತೆಯು ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಬಾಧಿಸುತ್ತಿದೆ. ಕೂಲಿ ಮಾಡಿ ಬದುಕುತ್ತಿರುವ ನಮಗೆ ಇಲ್ಲಿನ ಸಮಸ್ಯೆಗಳ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಆಡಳಿತ ನೆರವಿಗೆ ಬರಲಿ ಎಂದು ಸುಂದರೇಶ್ ಬಡಾವಣೆ ವಾಸಿ ಶಾಂತಾಮೇರಿ ಒತ್ತಾಯಿಸುತ್ತಾರೆ.

**

ಜೂಜಾಟ, ಕಳ್ಳತನ ಜಾಸ್ತಿ
ಈ ಬಡಾವಣೆಗಳಲ್ಲಿ ದಲಿತರು ಹೆಚ್ಚು ಇದ್ದಾರೆ. ಇಲ್ಲಿನ ಸಮಸ್ಯೆಗಳನ್ನು ದಲಿತ ದೌರ್ಜನ್ಯ ಸಮಿತಿ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಜೂಜಾಟ, ಕಳ್ಳತನ ಜಾಸ್ತಿಯಾಗಿವೆ.
-ಎಸ್.ಕೆ.ಸ್ವಾಮಿ,ನಿವಾಸಿ

**
ಸಾಂಕ್ರಾಮಿಕ ರೋಗಗಳ ಭೀತಿ
ಬಡಾವಣೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ನಿವಾಸಿಗಳು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುವಂತಾಗಿದೆ. ನೈರ್ಮಲ್ಯ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕು.
-ಕೆ.ರಂಗಸ್ವಾಮಿ,ನಿವಾಸಿ

**
ಅನೈರ್ಮಲ್ಯದ್ದೇ ದರ್ಬಾರು
ಈ ಬಡಾವಣೆಗಳಲ್ಲಿ ಮಳೆಗಾಲದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತವೆ. ಕೆಸರುಮಯ ಹಾದಿಗಳಲ್ಲಿ ಓಡಾಡಲು ಹರಸಾಹಸಪಡಬೇಕು. ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ಸುತ್ತಲೂ ಅನೈರ್ಮಲ್ಯದ್ದೇ ದರ್ಬಾರು.
-ಮಹಮದ್ ಗೌಸ್,ಪೋಷಕ

**
ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ
ಈ ಬಡಾವಣೆಗಳ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ನಾಗರಿಕರ ಅಭಿವೃದ್ಧಿಯನ್ನು ಮರೆತಿರುವ ಜನಪ್ರತಿನಿಧಿಗಳು ಸಹ ಇದಕ್ಕೆ ಜವಾಬ್ದಾರರಾಗಿದ್ದಾರೆ.
-ಟಿ.ವಿ. ಶ್ರೀನಿವಾಸ್,ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.