ADVERTISEMENT

ಹೊರನಾಡು ಪಾರ್ಶ್ವನಾಥ ಬಸದಿಯಲ್ಲಿ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 12:22 IST
Last Updated 15 ಮೇ 2025, 12:22 IST
ಕಳಸ ತಾಲ್ಲೂಕಿನ ಹೊರನಾಡಿನ ದೊಡ್ಡಬಸದಿ ಪಾಶ್ರ್ವನಾಥ ಸ್ವಾಮಿ ಸನ್ನಿಧಿಯಲ್ಲಿರುವ ಅನಂತನಾಥ ತೀರ್ಥಂಕರರ ಲೋಹದ ಪ್ರತಿಮೆಯಲ್ಲಿ ಪುರಾತನ ಶಾಸನ ಪತ್ತೆ ಆಗಿದೆ.
ಕಳಸ ತಾಲ್ಲೂಕಿನ ಹೊರನಾಡಿನ ದೊಡ್ಡಬಸದಿ ಪಾಶ್ರ್ವನಾಥ ಸ್ವಾಮಿ ಸನ್ನಿಧಿಯಲ್ಲಿರುವ ಅನಂತನಾಥ ತೀರ್ಥಂಕರರ ಲೋಹದ ಪ್ರತಿಮೆಯಲ್ಲಿ ಪುರಾತನ ಶಾಸನ ಪತ್ತೆ ಆಗಿದೆ.   

ಕಳಸ: ತಾಲ್ಲೂಕಿನ ಹೊರನಾಡಿನಲ್ಲಿರುವ ದೊಡ್ಡ ಬಸದಿ, ಪಾರ್ಶ್ವನಾಥ ಬಸದಿಯ ಗಂಧಕುಟಿಯಲ್ಲಿರುವ ಲೋಹದ ಪ್ರತಿಮೆಯ ಪಾದ ಪೀಠದಲ್ಲಿ ಅಪ್ರಕಟಿತ ಶಾಸನವನ್ನು ಕಳಸದ ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಸಂಶೋಧಿಸಿದ್ದು, ಈ ಶಾಸನವು ಕಳಸ ಸೀಮೆಯ ಜೈನ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.

ವಿಜಯನಗರ ಸಾಮ್ರಾಟ ಸದಾಶಿವರಾಯರ ಮಂಡಲೇಶ್ವರರಾಗಿದ್ದ ಕಳಸ – ಕಾರ್ಕಳ ರಾಜ್ಯದ ವೀರಪಾಂಡ್ಯಪ್ಪ ಒಡೆಯರ ಆಡಳಿತ ಕಾಲದ ಕ್ರಿ.ಶ‌.1543ನೇ ವರ್ಷದ ಶಾಸನ ಇದಾಗಿರಬಹುದು ಎಂದು ಸಂಶೋಧಕ ಎಚ್.ಆರ್.ಪಾಂಡುರಂಗ ಅಭಿಪ್ರಾಯಪಟ್ಟಿದ್ದಾರೆ. ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಬಸದಿಯ ಪುರೋಹಿತ ರವಿರಾಜ ಇಂದ್ರರು ಹಾಗೂ ಮಹಾವೀರ್ ಜೈನ್, ಮೈಸೂರಿನ ಶಾಸನತಜ್ಞ, ಎಚ್.ಎಂ.ನಾಗರಾಜರಾವ್ ಅವರಿಗೆ ಪಾಂಡುರಂಗ ಕೃತಜ್ಞತೆ ಸಲ್ಲಿಸಿದ್ದಾರೆ.

ಅನಂತನಾಥ ತೀರ್ಥಂಕರರ ಲೋಹದ ಪ್ರತಿಮೆಯ ಪಾದಪೀಠದ ನಾಲ್ಕು ಕಡೆಯೂ ವಿಜಯನಗರ ಕಾಲದ ಕನ್ನಡ ಲಿಪಿಯಲ್ಲಿ ಐದು ಸಾಲಿನ ಈ ಶಾಸನ ಬರೆಯಲಾಗಿದೆ. ‘ಶೋಭಕೃತುಸಂವತ್ಸರದ ಶುದ್ಧ ಪಂಚಮಿಯಂದು ಮೇಗುಂದ ಪಟ್ಟಣದ ತಿಪ್ಪಿಸೆಟ್ಟಿಯ ಮಗ ಸೆಟ್ಟಿಯಪ್ಪ ಹಾಗೂ ತಿಪ್ಪಿಸೆಟ್ಟಿಯರು ಸೇರಿಕೊಂಡು ಬಹುಶಃ ಮೇಗುಂದದ ಶಾಂತಿನಾಥ ಬಸದಿಯಲ್ಲಿ ಆನಂತ ನೋಂಪಿಯನ್ನು ಆಚರಿಸಿ ಪಾದಪೂಜೆ ಮಾಡಿ ಆನಂತನಾಥ ತೀರ್ಥಂಕರ ಪ್ರತಿಮೆಯನ್ನು ಇರಿಸಿದರು’ ಎಂಬ ಉಲ್ಲೇಖವನ್ನು  ಶಾಸನ ಒಳಗೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.