ADVERTISEMENT

ವಿಮಾ ಕಂಪನಿಯಿಂದ ರೈತರಿಗೆ ಅನ್ಯಾಯ: ತನಿಖೆಗೆ ಒತ್ತಾಯ

ಅವೈಜ್ಞಾನಿಕವಾಗಿ ಮಾನದಂಡ ನಿಗದಿ: ಆರೋಪ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 2:03 IST
Last Updated 24 ಡಿಸೆಂಬರ್ 2021, 2:03 IST
ಎಚ್.ಎಂ.ಸತೀಶ್ 
ಎಚ್.ಎಂ.ಸತೀಶ್    

ಜಯಪುರ (ಬಾಳೆಹೊನ್ನೂರು): ‘ಕಳೆದ ಸಾಲಿನಲ್ಲಿ ರೈತರು ಬೆಳೆ ವಿಮೆಗೆ ಪಾವತಿಸಿದ ಹಣಕ್ಕೆ ವಿಮಾ ಕಂಪನಿ ಸರಿಯಾಗಿ ಪರಿಹಾರ ನೀಡದೆ ಅವೈಜ್ಞಾನಿಕವಾಗಿ ಮಾನದಂಡ ನಿಗದಿ ಪಡಿಸಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಆರೋಪಿಸಿದ್ದಾರೆ.

‘2019-20ನೇ ಸಾಲಿನಲ್ಲಿ ರೈತರು ತಾವು ಬೆಳೆದ ಬೆಳೆಗೆ ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಆಯಾ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಹಾಗೂ ತಮ್ಮಲ್ಲಿರುವ ಜಮೀನಿನ ಆಧಾರದ ಮೇಲೆ ವಿಮಾ ಕಂಪನಿಗಳು ನಿಗದಿಪಡಿಸಿದ ಪ್ರಿಮಿಯಂ ಹಣವನ್ನು ಪಾವತಿಸಿದ್ದರು. 2019ರ ಹಿಂದೆ ರೈತರಿಗೆ ಬೆಳೆ ಹಾನಿಯ ಸಮೀಕ್ಷೆಯ ಆಧಾರದ ಮೇಲೆ ಕಂಪನಿಗಳು ಪರಿಹಾರ ಹಣವನ್ನು ಪಾವತಿಸಲಾಗುತ್ತಿತ್ತು. ಆದರೆ, 2019-20ನೇ ಸಾಲಿನಲ್ಲಿ ಮಳೆಯಿಂದ ಹಾಗೂ ಪ್ರಕೃತಿ ವಿಕೋಪದಿಂದ ರೈತರ ಬೆಳೆ ಹಾನಿಯಾಗಿದ್ದರೂ ವಿಮಾ ಕಂಪನಿ ಮೂರು ಕಾಸಿನ ಪರಿಹಾರವನ್ನು ಬಿಡುಗಡೆ ಮಾಡುತ್ತಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

‘ಕಳೆದ ವರ್ಷ ಕೂಡ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಬೆಳೆ ಹಾನಿ ಬಗ್ಗೆ ನಿಖರವಾದ ಮಾಹಿತಿಯನ್ನು ಸರ್ಕಾರದ ಮೂಲಕ ಸಂಬಂಧಪಟ್ಟ ವಿಮಾ ಕಂಪನಿಗಳಿಗೆ ಕಳುಹಿಸಿದ್ದಾರೆ. ಆದರೆ ವಿಮಾ ಕಂಪನಿ ಅದನ್ನು ಪರಿಗಣಿಸದೆ ಪ್ರತಿ ಗ್ರಾಮ ಪಂಚಾಯಿತಿಗೆ ಒಂದೊಂದು ಮಾನದಂಡ ನಿಗದಿಪಡಿಸಿ, ಅಲ್ಪ ಪ್ರಮಾಣದ ಹಣವನ್ನು ಬಿಡುಗಡೆ ಮಾಡಿದೆ. ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಅವರು ಕಟ್ಟಿದ ಹಣದ ಶೇ 3.71, ಅಗಳಗಂಡಿ ಗ್ರಾಮದ ರೈತರಿಗೆ ಶೇ 2.03, ಹೇರೂರು ಗ್ರಾಮದ ರೈತರಿಗೆ ಶೇ 1.71 ಹೀಗೆ ವಿಮಾ ಹಣವನ್ನು ರೈತರ ಖಾತೆಗಳಿಗೆ ಹಾಕಲಾಗಿದೆ. ಇದು ಆನೆ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದ್ದು ಅವೈಜ್ಞಾನಿಕವಾಗಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಒಂದು ವೇಳೆ ರೈತರಿಗೆ ಆದ ಅನ್ಯಾಯ ಸರಿಹೋಗದೇ ಇದ್ದಲ್ಲಿ ಕಾಂಗ್ರೆಸ್ ಪಕ್ಷ ರೈತರೊಂದಿಗೆ ಸೇರಿ ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಬಹುದು’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.