
ಚಿಕ್ಕಮಗಳೂರು: ‘ನಕ್ಸಲ್ ಮುಕ್ತ ಕರ್ನಾಟಕ’ ಎಂದು ಸರ್ಕಾರ ಘೋಷಿಸಿ ವರ್ಷವಾಗಿದೆ. ಆರು ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಸೇರಿ ಜ.8ಕ್ಕೆ ವರ್ಷವಾಗಿದ್ದು, ಅಷ್ಟೂ ಜನ ಜೈಲಿನಲ್ಲೇ ಇದ್ದಾರೆ.
ನಕ್ಸಲ್ ಪುನರ್ವಸತಿ ಸಮಿತಿ ಮತ್ತು ಶಾಂತಿಗಾಗಿ ನಾಗರಿಕರ ವೇದಿಕೆ ನೇತೃತ್ವದಲ್ಲಿ 2025ರ ಜ.8ರಂದು ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜಿಷಾ ಸೇರಿ ಆರು ನಕ್ಸಲರು ಮುಖ್ಯ ವಾಹಿನಿಗೆ ಮರಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಷ್ಟೂ ಜನರನ್ನು ಬರ ಮಾಡಿಕೊಂಡರು. ನಕ್ಸಲ್ ಮುಕ್ತ ರಾಜ್ಯ ಎಂದು ಘೋಷಣೆ ಮಾಡಿದರು.
ಮುಖ್ಯವಾಹಿನಿಗೆ ಬಂದವರಲ್ಲಿ ‘ಎ’ ವರ್ಗದ ಪ್ರಕರಣಗಳಿರುವ ನಕ್ಸಲರಿಗೆ ₹7.50 ಲಕ್ಷ, ‘ಬಿ’ ವರ್ಗದ ಪ್ರಕರಣ ಹೊಂದಿದವರಿಗೆ ₹4 ಲಕ್ಷ ನೆರವು ಸಿಗಲಿದೆ. 3 ಹಂತಗಳಲ್ಲಿ ನೆರವು ದೊರಕಲಿದೆ ಎಂದು ಸರ್ಕಾರ ತಿಳಿಸಿತ್ತು.
ಮುಖ್ಯವಾಹಿನಿಗೆ ಬಂದ ಬಳಿಕ ಎಲ್ಲರೂ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ. ಕೇರಳ, ತಮಿಳುನಾಡಿನಲ್ಲೂ ಯುಎಪಿಎ ರೀತಿಯ ಗಂಭೀರ ಪ್ರಕರಣಗಳು ದಾಖಲಾಗಿರುವುದರಿಂದ ಜಾಮೀನು ಸಿಗುವ ತನಕ ಬಂಧನದಲ್ಲಿ ಇರಬೇಕು. ಎಲ್ಲಾ ಪ್ರಕರಣಗಳನ್ನು ಸೇರಿ ಒಟ್ಟಿಗೆ ವಿಚಾರಣೆ ನಡೆಸಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂಬ ಭರವಸೆಯನ್ನು ಸರ್ಕಾರ ನೀಡಿತ್ತು.
ಇದಾದ ಬಳಿಕ 2025–26ನೇ ಸಾಲಿನ ಬಜೆಟ್‌ನಲ್ಲಿ ನಕ್ಸಲ್ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ₹10 ಕೋಟಿ ಅನುದಾನ ಘೋಷಣೆಯನ್ನು ಮುಖ್ಯಮಂತ್ರಿ ಮಾಡಿದರು. ₹9.12 ಕೋಟಿ ಬಿಡುಗಡೆಯಾಗಿದ್ದು, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಖ್ಯವಾಹಿನಿಗೆ ಬಂದ ನಕ್ಸಲರ ಪ್ರೋತ್ಸಾಹ ಧನಕ್ಕಾಗಿ(ಸ್ವಯಂ ಉದ್ಯೋಗಕ್ಕೆ) ₹27.10 ಲಕ್ಷ ನೀಡಿದೆ. ಮೂಲಸೌಕರ್ಯ ಕಾಮಗಾರಿಗಾಗಿ ಉಡುಪಿ ಜಿಲ್ಲೆಗೆ ₹2 ಕೋಟಿ, ಚಿಕ್ಕಮಗಳೂರು ಜಿಲ್ಲೆಗೆ ₹7.12 ಕೋಟಿ ನೀಡಿದೆ.
‘ಮುಖ್ಯವಾಹಿನಿಗೆ ಬರುವ ವೇಳೆಯಲ್ಲಿ ನಕ್ಸಲರು ಇಟ್ಟಿದ್ದ ಪ್ರಮುಖ 18 ಬೇಡಿಕೆಗಳಲ್ಲಿ ಒಂದೂ ಈಡೇರಿಲ್ಲ’ ಎಂದು ನಕ್ಸಲರ ಸಂಬಂಧಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮುಖ್ಯಮಂತ್ರಿ ಭೇಟಿ ಇಂದು
ಮುಖ್ಯವಾಹಿನಿಗೆ ಮರಳಿದ ನಕ್ಸಲರ ವಿರುದ್ಧದ ಪ್ರಕರಣ ಸೇರಿ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಲಾಗುತ್ತಿದೆ ಎಂದು ಶಾಂತಿಗಾಗಿ ನಾಗರಿಕ ವೇದಿಕೆಯ ಕೆ.ಎಲ್.ಅಶೋಕ್ ತಿಳಿಸಿದರು. ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಇನ್ನೂ ನ್ಯಾಯಾಲಯ ಸ್ಥಾಪನೆಯಾಗಿಲ್ಲ. ಕಾನೂನು ಪ್ರಕ್ರಿಯೆ ಸ್ವಲ್ಪವೂ ಮುಂದುವರಿದಿಲ್ಲ. ಛತ್ತಿಸಘಡ ಮಾದರಿಯಲ್ಲಿ ಪ್ರಕರಣ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.