
ಚಿಕ್ಕಮಗಳೂರು: ಜಲಜೀವನ್ ಮಿಷನ್ ಕಾಮಗಾರಿ ಅನಗತ್ಯ ವಿಳಂಬವಾದರೆ ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸಿ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಜೆಜೆಎಂ ಕಾಮಗಾರಿ ಬಗ್ಗೆ ಜನರಲ್ಲಿ ಸಾಕಷ್ಟು ಅಸಮಾಧಾನ ಇದೆ. ಈ ಯೋಜನೆಯಲ್ಲಿ ಬಂದ ಕೆಟ್ಟ ಹೆಸರು ಬೇರೆ ಯಾವುದರಲ್ಲೂ ಕೇಂದ್ರ ಸರ್ಕಾರಕ್ಕೆ ಬಂದಿಲ್ಲ. ಜೆಜೆಎಂ ಎಂದರೆ ಹಣ ಹೊಡೆಯುವ ಯೋಜನೆ ಎಂದು ಜನ ಆರೋಪ ಮಾಡುವ ಸ್ಥಿತಿ ಬಂದಿದೆ ಎಂದರು.
ಸರ್ಕಾರದ ವಿರುದ್ಧ ಈ ರೀತಿಯ ಆರೋಪ ಬರುವಂತೆ ಮಾಡುವುದು ಸರಿಯಾದ ಕ್ರಮವಲ್ಲ. ಗುತ್ತಿಗೆದಾರರ ವಿಷಯದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು. ಪದೇ ಪದೇ ನಿರ್ಲಕ್ಷ್ಯ ವಹಿಸಿದರೆ ಕಪ್ಪ ಪಟ್ಟಿಗೆ ಸೇರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
‘ಕಾಮಗಾರಿ ಪೂರೈಸದಿರುವ ಗುತ್ತಿಗೆದಾರರ ಬಳಿ ನಾವು ಮಾತನಾಡುವಂತೆ ಆಗಬಾರದು. ಎಂಜಿನಿಯರ್‌ಗಳ ಜತೆ ಅಧಿಕಾರಿಗಳು ಮಾತನಾಡಿ ಕಾಮಗಾರಿ ಮುಂದುವರಿಸುವಂತೆ ತಿಳಿಸಬೇಕು. ಆಗಲೂ ಅದೇ ವಿಳಂಬ ಮುಂದುವರಿದರೆ ನಾನೇ ಖುದ್ದಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸುತ್ತೇನೆ’ ಎಂದರು.
‘ಮೂಡಿಗೆರೆ ತಾಲೂಕಿನಲ್ಲಿ 28 ಕಾಮಗಾರಿಗಳು ಶೇ 25ರಷ್ಟು ಪೂರ್ಣಗೊಂಡಿಲ್ಲ. 20 ಕಾಮಗಾರಿಗಳು ಶೇ 50ರಷ್ಟು ಮಾತ್ರ ಆಗಿದೆ. 47 ಕಾಮಗಾರಿಗಳು ಶೇ 50ರಿಂದ ಶೇ 75ರಷ್ಟು ಆಗಿವೆ. 82 ಕಾಮಗಾರಿಗಳು ಶೇ 75ರಿಂದ ಶೇ 99ರಷ್ಟು ಪೂರ್ಣಗೊಂಡಿವೆ. 99 ಕಾಮಗಾರಿಗಳು ಶೇ 110ರಷ್ಟು ಪೂರ್ಣಗೊಂಡಿದ್ದು, ಇನ್ನು ಹಲವು ಕಡೆ ನೀರಿನ ಮೂಲಗಳನ್ನು ಗುರುತಿಸದಿರುವುದು ಸೂಕ್ತ ಅಲ್ಲ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಮನೆ ಮನೆಗೆ ನೀರು ತಲುಪಿಸುವ ವ್ಯವಸ್ಥೆ ಆಗಬೇಕು’ ಎಂದು ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ, ದಿಶಾ ಕಮಿಟಿ ಸದಸ್ಯ ಮನೋಜ್ ಹಳೇಕೋಟೆ, ಜಿಲ್ಲಾ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಕಲ್ಮರುಡಪ್ಪ ಇದ್ದರು
ಬಿಲ್ ಅನುಮೋದನೆ ನೀಡುತ್ತಿಲ್ಲ: ಸಿಇಒ
ನೀರಿನ ಮೂಲ ಗುರತಿಸದೇ ಕಾಮಗಾರಿ ನಿರ್ವಹಿಸಿರುವ ಯಾವುದೇ ಬಿಲ್‌ಗಳಿಗೆ ಅನುಮೋದನೆ ನೀಡುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಕಾರಿ ಎಚ್.ಎಸ್. ಕೀರ್ತನಾ ತಿಳಿಸಿದರು. ಕಾಮಗಾರಿ ಲೋಪ ಅಥವಾ ವಿಳಂಬದ ಬಗ್ಗೆ ಜನ ದೂರವಾಣಿ ಮೂಲಕ ಮಾಹಿತಿ ನೀಡಿದರೂ ಸ್ಪಂದಿಸಲಾಗುತ್ತಿದೆ. ಕೂಡಲೇ ಸ್ಥಳಕ್ಕೆ ತೆರಳಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಯಾವುದೇ ಕಳಪೆ ಕಾಮಗಾರಿಗೆ ಆಸ್ಪದ ನೀಡುತ್ತಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.