
ಕಡೂರು: ಅಡಿಕೆ ದರ ಗಗನಕ್ಕೇರುತ್ತಿರುವ ಹಿನ್ನೆಲೆ ತಾಲ್ಲೂಕಿನಲ್ಲಿ ಅಡಿಕೆ ಗೊನೆ, ತೆಂಗು, ಬಾಳೆ ಗೊನೆ ಮತ್ತು ಪಂಪ್‌ಸೆಟ್ ಮೋಟರ್‌ನ ಕೇಬಲ್‌ಗಳ ಕಳ್ಳತನ ಹೆಚ್ಚಾಗಿದ್ದು, ಕಳ್ಳರ ವಿರುದ್ಧ ಕ್ರಮ ವಹಿಸುವಂತೆ ಕಡೂರು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎಚ್.ಶಂಕರ್ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಅಡಿಕೆ ಬೆಳೆಗಾರರ ಸಭೆ ನಡೆಸಿ ತೀರ್ಮಾನ ಕೈಗೊಂಡು, ಪೊಲೀಸ್ ಠಾಣೆಗೆ ದೂರು ನೀಡಿ ಕಳ್ಳರಿಂದ ಬೆಳೆಗಳನ್ನು ರಕ್ಷಿಸಲು ಮನವಿ ಮಾಡಿದರು.
ಚಿಕ್ಕಂಗಳ, ಕಡೂರು ಸುತ್ತಮುತ್ತ ಮತ್ತು ಮಚ್ಚೇರಿ ಕೋಡಿಹಳ್ಳಿ ಭಾಗಗಳಲ್ಲಿನ ಅಡಿಕೆ ತೋಟಗಳಲ್ಲಿ ಗೊನೆಗಳನ್ನು ಕಳ್ಳರು ಕೊಯ್ದು ಗ್ರಾಮಗಳಲ್ಲಿನ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಕಂಡುಬಂದಿದೆ. ಗ್ರಾಮೀಣ ಪ್ರದೇಶ ಅಥವಾ ಪಟ್ಟಣಗಳಲ್ಲಿ ಒಂದೆರಡು ಕಿಲೋ ಅಡಿಕೆಯನ್ನು ಮಾರಾಟ ಮಾಡುವವರ ಬಳಿ ಯಾರೂ ವ್ಯವಹಾರ ಮಾಡಬಾರದು. ಅದು ಕಳವು ಮಾಡಿರುವ ಅಡಿಕೆಯಾಗಿರುವ ಸಾಧ್ಯತೆ ಇದ್ದು ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಮಾಹಿತಿ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತೆಂಗಿನ ಕಾಯಿಗೂ ಉತ್ತಮ ಬೆಲೆ ಬರುತ್ತಿದ್ದು, ತೋಟಗಳಲ್ಲಿ ಬಿದ್ದ ಅಥವಾ ಕಳ್ಳತನ ಮಾಡಿರುವ ಕಾಯಿಗಳನ್ನು ಅಂಗಡಿಗಳಿಗೆ ಕದ್ದು ಮುಚ್ಚಿ ಮಾರಾಟ ಮಾಡುವವರನ್ನು ನಮ್ಮ ಸಂಘವು ಗುರುತಿಸಿ, ಅಂತಹ ಅಂಗಡಿಗಳ ಮಾಲೀಕರ ಹೆಸರನ್ನು ಸಹ ಪೊಲೀಸ್ ಇಲಾಖೆಗೆ ನೀಡಿದೆ. ಪೊಲೀಸ್ ಅಧಿಕಾರಿಗಳು ಅಂತಹ ಅಂಗಡಿ ಮಾಲೀಕರನ್ನು ಕರೆಯಿಸಿ ಕದ್ದ ಅಡಿಕೆ, ತೆಂಗು ಖರೀದಿಸಬಾರದೆಂದು ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದರು.
ಅಡಿಕೆ ಬೆಳೆಗಾರ ತೋಟದಮನೆ ಮೋಹನ್ ಮಾತನಾಡಿ, ‘ಮಚ್ಚೇರಿ, ಕೋಡಿಹಳ್ಳಿ ಭಾಗದ ತೋಟಗಳಲ್ಲಿ ಅಡಿಕೆ ಗೊನೆಗಳು ಮತ್ತು 30ಕ್ಕೂ ಹೆಚ್ಚಿನ ಮೋಟರ್‌ಗಳ ಕೇಬಲ್ ಕಳ್ಳತನವಾಗಿದೆ. ಈ ಬಗ್ಗೆ ಠಾಣೆಗೆ ದೂರು ನೀಡಿದ್ದೇವೆ. ಕೇಬಲ್‌ನ್ನು ಖರೀದಿಸುವ ಗುಜರಿ ಅಂಗಡಿಗಳಿಗೆ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ನೀಡಲಿ’ ಎಂದು ಒತ್ತಾಯ ಮಾಡಿದರು.
ಅಡಿಕೆ ಬೆಳೆಗಾರ ಎಚ್.ವಿ. ಗಿರೀಶ್, ರೈತರು ನೀಡಿರುವ ಮಾಹಿತಿ ಮೇರೆಗೆ ಪೊಲೀಸರು ಭೇಟಿ ನೀಡಿ, ಕಳವು ಮಾಲು ಖರೀದಿಸುವ ಅಂಗಡಿ ಮಾಲೀಕರಿಗೆ ಎಚ್ಚರಿಸಬೇಕು. ಕಳ್ಳತನವನ್ನು ನಿಲ್ಲಿಸಲು ರೈತರೊಂದಿಗೆ ಪೊಲೀಸರು ಮತ್ತು ನಾಗರಿಕರು ಸಹಕರಿಸಬೇಕು ಎಂದರು.
ಚಿಕ್ಕಂಗಳ ಭಾಗದ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಸಗುನಪ್ಪ, ಈಗಾಗಲೇ ಅಡಿಕೆ ಕಳ್ಳತನ ಮಾಡಿರುವವರ ಬಗ್ಗೆ ಪೊಲೀಸ್ ಠಾಣೆಗೆ ದಾಖಲೆ ಸಮೇತ ದೂರು ನೀಡಿದರೆ, ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ. ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದರು.
ಸಭೆಯಲ್ಲಿ ತಿಪ್ಪೇಶ್, ಚೇತನ್, ಗಂಟೆ ಕುಮಾರ್, ಸುರೇಶ್, ಗುರು, ಚಂದ್ರಪ್ಪ, ರಾಮಣ್ಣ, ಮಂಜುನಾಥ್, ಶ್ರೀನಿವಾಸ್ ಹಾಗೂ ರೈತರು ಇದ್ದರು.