ADVERTISEMENT

ಕಡೂರು: ಬರದ ಜಾಗದಲ್ಲೂ ಸಮೃದ್ಧ ಬೆಳೆ

ಮಳೆ ನೀರು ಸಂಗ್ರಹದಿಂದ ನೀರಿನ ಕೊರತೆ ನೀಗಿಸಿಕೊಂಡ ರವೀಂದ್ರ ನಾಯ್ಕ

ಬಾಲು ಮಚ್ಚೇರಿ
Published 29 ಡಿಸೆಂಬರ್ 2021, 5:30 IST
Last Updated 29 ಡಿಸೆಂಬರ್ 2021, 5:30 IST
ಕಡೂರು ತಾಲ್ಲೂಕು ಬ್ಯಾಲದಾಳು ತಾಂಡಾದಲ್ಲಿ ರವೀಂದ್ರ ನಾಯ್ಕ ನಿರ್ಮಿಸಿರುವ ಕೃಷಿ ಹೊಂಡ (ಎಡಚಿತ್ರ). ಪಾಲಿ ಹೌಸ್‌ನಲ್ಲಿ ಬೆಳೆದಿರುವ ಹಳದಿ ಕ್ಯಾಪ್ಸಿಕಂ ಬೆಳೆ
ಕಡೂರು ತಾಲ್ಲೂಕು ಬ್ಯಾಲದಾಳು ತಾಂಡಾದಲ್ಲಿ ರವೀಂದ್ರ ನಾಯ್ಕ ನಿರ್ಮಿಸಿರುವ ಕೃಷಿ ಹೊಂಡ (ಎಡಚಿತ್ರ). ಪಾಲಿ ಹೌಸ್‌ನಲ್ಲಿ ಬೆಳೆದಿರುವ ಹಳದಿ ಕ್ಯಾಪ್ಸಿಕಂ ಬೆಳೆ   

ಕಡೂರು: ಬಯಲು ಸೀಮೆಯಾಗಿರುವ ಕಡೂರು ತಾಲ್ಲೂಕಿನ ಬ್ಯಾಲದಾಳು ತಾಂಡಾದಲ್ಲಿ ಕಡಿಮೆ ನೀರಿನ ಲಭ್ಯತೆ ಯಲ್ಲಿಯೂ ಉತ್ಕೃಷ್ಟ ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವ ರವೀಂದ್ರ ನಾಯ್ಕ ಇತರರಿಗೆ ಮಾದರಿ ಯಾಗಿದ್ದಾರೆ. ಐದು ಎಕರೆ ಜಮೀನಿನಲ್ಲಿ ಲಾಭದಾಯಕ ಕೃಷಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

80 ತೆಂಗಿನ ಗಿಡಗಳು, 1,400 ಅಡಿಕೆ ಬೆಳೆದಿದ್ದಾರೆ. ಈ ಎರಡು ಬೆಳೆಗಳ ನಡುವೆ ಪಪ್ಪಾಯ ಗಿಡಗಳಿವೆ. ಇಲ್ಲಿ ನೀರಿನ ಲಭ್ಯತೆ ಕಡಿಮೆಯಾದರೂ ಇವರ ತೋಟದ ಗಿಡಗಳು ನಳನಳಿಸುತ್ತಿವೆ. ಇದಕ್ಕೆ ಕಾರಣ ತೋಟದಲ್ಲಿ ನೀರಾವರಿಗಾಗಿ ಅಳವಡಿಸಿರುವ ವೈಜ್ಞಾನಿಕ ವಿಧಾನ‌. ಕೊಳವೆ ಬಾವಿ ಇದ್ದರೂ ಅದರಲ್ಲೂ ಹೆಚ್ಚಿನ ನೀರಿಲ್ಲ. ಹೀಗಾಗಿ, ಅರ್ಧ ಎಕರೆಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿ ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇದರ ಪಕ್ಕದಲ್ಲೇ ಒಂದು ಎಕರೆ ಭೂಮಿಯಲ್ಲಿ ಪಾಲಿ ಹೌಸ್ ಮಾಡಿದ್ದು, ಅದರ ಮೇಲೆ ಬಿದ್ದ ಮಳೆ ನೀರು ಕೃಷಿ ಹೊಂಡಕ್ಕೆ ಬರುತ್ತದೆ.

ಸ್ವಲ್ಪವೇ ಮಳೆ ಬಂದರೂ ನೀರು ವ್ಯರ್ಥವಾಗದೆ ಹೊಂಡದಲ್ಲಿ ಶೇಖರಣೆಯಾಗುತ್ತದೆ‌. ಅದೇ ನೀರನ್ನು ಹನಿ ನೀರಾವರಿ ಮೂಲಕ ತೆಂಗು, ಅಡಿಕೆ ಮತ್ತು ಪಪ್ಪಾಯ ಗಿಡಗಳಿಗೆ ಅಗತ್ಯವಿದ್ದಷ್ಟು ಹರಿಸಲಾಗುತ್ತದೆ.

ADVERTISEMENT

ಪಾಲಿಹೌಸ್‌ನಲ್ಲಿ ಹಳದಿ ಮತ್ತು ಕೆಂಪು ಬಣ್ಣದ 10 ಸಾವಿರ ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ) ಗಿಡಗಳನ್ನು ಬೆಳೆಸಿ, ಈ ವರ್ಷ ಇಲ್ಲಿಯ ತನಕ 28 ಟನ್ ಕ್ಯಾಪ್ಸಿಕಂ ಇಳುವರಿ ಪಡೆದಿದ್ದಾರೆ. ಇನ್ನೂ ಹತ್ತು ಟನ್ ಇಳುವರಿ ನಿರೀಕ್ಷೆಯಿದೆ. ಈ ಕ್ಯಾಪ್ಸಿಕಂಗೆ ಸ್ಥಳೀಯವಾಗಿ ಬೇಡಿಕೆ ಕಡಿಮೆ. ಬಹುತೇಕ ಬೇರೆಡೆಗೆ ರವಾನೆಯಾಗು ತ್ತದೆ. ಸರಾಸರಿ ಒಂದು ಕೆ.ಜಿ.ಗೆ ₹ 150 ರಿಂದ ₹ 180 ಬೆಲೆ ದೊರೆತಿದೆ ಎನ್ನುತ್ತಾರೆ ರವೀಂದ್ರ ನಾಯ್ಕ್‌.

‘ಕೃಷಿ ಎನ್ನುವುದು ಬಹು ಕಷ್ಟದ ಕಾಯಕ. ಅದನ್ನು ವೈಜ್ಞಾನಿಕವಾಗಿ ಮಾಡುವ ಮೂಲಕ ಸುಲಭ ಕಾಯಕವನ್ನಾಗಿಸಿಕೊಳ್ಳಬಹುದು. ಆಳುಗಳ ಮೇಲೆಯೇ ಅವಲಂಬಿತ ರಾಗದೆ ಸ್ವಂತ ಪರಿಶ್ರಮ ಹೆಚ್ಚಿದ್ದರೆ ನಿಜಕ್ಕೂ ನೆಮ್ಮದಿಯ ಬದುಕು ನಮ್ಮದಾಗುತ್ತದೆ’ ಎಂದು ಹೇಳುವ ರವೀಂದ್ರ ನಾಯ್ಕ ಅವರ ಕೃಷಿ ಕಾಯಕಕ್ಕೆ ಅವರ ಪತ್ನಿ ಯಶೋದಾ ಬಾಯಿ ಸಾಥ್‌ ನೀಡುತ್ತಿದ್ದಾರೆ.

ಸೋಗೆ ಗರಿಗಳಿಂದ ಗೊಬ್ಬರ ತಯಾರಿ

ಗಿಡಗಳಿಗೆ ಅಗತ್ಯವಾದ ಗೊಬ್ಬರ, ಔಷಧಿಗಳನ್ನು ತಾವೇ ಮುತುವರ್ಜಿ ವಹಿಸಿ ನೀಡುವ ರವೀಂದ್ರ ನಾಯ್ಕ ಅವರು, ಅಡಿಕೆ ಮತ್ತು ತೆಂಗು ತೋಟದಲ್ಲಿ ಬೀಳುವ ಸೋಗೆ ಗರಿಗಳನ್ನು ಯಂತ್ರದ ಮೂಲಕ ಸಣ್ಣಗೆ ಕತ್ತರಿಸಿ ತೋಟದಲ್ಲಿಯೇ ಕೊಳೆಯುವಂತೆ ಗೊಬ್ಬರ ಮಾಡಿದ್ದಾರೆ. ಇಡೀ ತೋಟದಲ್ಲಿ ಹ್ಯೂಮಸ್ ಸಮೃದ್ಧಿಯಾಗಿ ತಂಪಿನ ಅನುಭವ ನೀಡುತ್ತದೆ. ಕೊಳವೆ ಬಾವಿಗೆ ನೀರು ಮರುಪೂರಣ ಮಾಡುವ ಉದ್ದೇಶದಿಂದ ಪ್ರತ್ಯೇಕವಾಗಿ ಇಂಗು ಹೊಂಡವನ್ನೂ ನಿರ್ಮಿಸಿದ್ದಾರೆ. ಈ ಎಲ್ಲ ಕಾರ್ಯಗಳಿಗೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸೀಮಾ ಮತ್ತು ಲಿಂಗರಾಜು ಅವರ ಸಲಹೆ ಮತ್ತು ಮಾರ್ಗದರ್ಶನವನ್ನು ರವೀಂದ್ರ ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.