
ಬೀರೂರು(ಕಡೂರು): ಎರಡು ದಶಕಗಳ ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಬೀರೂರು ಪಟ್ಟಣ ಸಜ್ಜುಗೊಳ್ಳುತ್ತಿದೆ.
ಬೀರೂರು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣಗೊಳ್ಳುತ್ತಿದ್ದು, ನ. 3ರಂದು ಪಂಚ ಪೀಠಾಧೀಶರ ನೇತೃತ್ವದಲ್ಲಿ ಧರ್ಮ ಜಾಗೃತಿ ಸಭೆ ನಡೆಯಲಿದೆ. ಭಕ್ತರಿಗೆ ದಾಸೋಹ ಸೇವೆಯು ಪಟ್ಟಣದ ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಲಿದ್ದು, ಪರಸ್ಥಳದಿಂದ ಬರುವವರಿಗೆ ಬೀರೂರು ತರಳಬಾಳು ಕಲ್ಯಾಣ ಮಂದಿರ, ಕೆಎಲ್‌ಕೆ ಮೈದಾನ, ಮಹಾನವಮಿ ಬಯಲು, ಎಸ್‌ಜೆಎಂ ಶಾಲೆಯ ಆವರಣ, ವಾಸವಿ ವಿದ್ಯಾಪೀಠದ ಎದುರು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ನ. 2ರಂದು ಪಟ್ಟಣದ ಡಿ.ವಿ.ಹಾಲಪ್ಪ ರಸ್ತೆಯಲ್ಲಿ ಶ್ರೀಗುರು ಮರುಳಸಿದ್ದೇಶ್ವರ ಗದ್ದುಗೆ ಬಳಿ ನಿರ್ಮಿಸಿರುವ ಶ್ರೀಚೌಡೇಶ್ವರಿ ದೇವಾಲಯದ ಆಲಯ ಪ್ರವೇಶ ಮತ್ತು ಅಂಗವಾಗಿ ಗುರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿವೆ.
ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ ಹಾಗೂ ಮಂಗಳ ಮಂದಿರ ಪ್ರಾರಂಭೋತ್ಸವದ ಮುನ್ನ (ಭಾನುವಾರ) ಮಹಾಗಣಪತಿ ಪೂಜೆ, ಗೋಪೂಜೆಯ ಮೂಲಕ ಆಲಯ ಪ್ರವೇಶ, ಬಳಿಕ ದೀಪಾರಾಧನೆ, ಸಂಕಲ್ಪ, ಮಹಾಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ, ಪಂಚಗವ್ಯ ಸಾಧನ, ದೇವನಾಂದಿ, ಆಚಾರ್ಯಾದಿ ಋತ್ವಿಗ್ವರಣ, ವಾಸ್ತು ಮಂಡಲಾರಾಧನೆ, ಅಸ್ತ್ರಾಜ, ರಾಕ್ಷೋಘ್ಞ, ದಿಕ್ಪಾಲಕ ಆರಾಧನೆ ಕಲಶಾರಾಧನೆ ನೆರವೇರಿಸಲಾಗುವುದು. ನಂತರ, ಅಗ್ನಿ ಪ್ರತಿಷ್ಠೆ ಮೂಲಕ ಮಹಾಗಣಪತಿ ಹೋಮ, ನವಗ್ರಹ ಸಹಿತ ಪರಿವಾರ ದೇವತಾ ಹೋಮ, ಲಘು ಪೂರ್ಣಾಹುತಿ, ಗೃಹ ಪ್ರತಿಷ್ಠಾಪನೆ, ಸಂಸ್ಕಾರಗಳೊಡನೆ ದೇವಿಯ ಮೂಲ ಮೂರ್ತಿಗೆ ಅಧಿವಾಸಗಳು ನಡೆಯುವುದು.
ನ. 3ರಂದು ಬೆಳಿಗ್ಗೆ ಸುಪ್ರಭಾತ ಸೇವೆ, ಆಲಯದಲ್ಲಿ ಪೀಠ ಸಂಸ್ಕಾರ ನಂತರ ಚೌಡೇಶ್ವರಿ ದೇವಿಯವರ ನೂತನ ವಿಗ್ರಹಕ್ಕೆ ಅಷ್ಟಬಂಧನ, ಪ್ರಾಣ ಪ್ರತಿಷ್ಠೆ, ಕ್ಷೀರ ಸಮರ್ಪಣೆ, ಪ್ರತಿಷ್ಠಾಂಗ ದೇವಾಲಯ ಶಿಖರ ಕಲಶಾರೋಹಣ, ಕಳಾಹೋಮ, ದುರ್ಗಾಹೋಮ, ಜಯಾದಿ ಪ್ರಾಯಶ್ಚಿತ್ತ ಹೋಮ, ಪೂರ್ಣಾಹುತಿ, ಶ್ರೀಚೌಡೇಶ್ವರಿ ಅಮ್ಮನವರಿಗೆ ಹರಿದ್ರಾಲೇಪನ, ಪಂಚಾಮೃತ ಅಭಿಷೇಕ, ಕದಳಿ ಕೂಷ್ಮಾಂಡ ಬಲಿ, ನೇತ್ರೋನ್ಮೀಲನ, ದರ್ಪಣ ದರ್ಶನ, ಧೇನು ದರ್ಶನ, ನಾಮಕರಣ, ಸುಮಂಗಲಿ ಮುಖೇನ ಸಹಸ್ರ ಕುಂಕಮಾರ್ಚನೆ, ಅಲಂಕಾರ, ಅಷ್ಟೋತ್ತರ, ಮಹಾನೈವೇದ್ಯ, ಅಷ್ಟಾವದಾನ, ಮಹಾಮಂಗಲ ನೀರಾಜನ ನಡೆಯುವುದು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಯುಕ್ತ ಬರುವ ಪಂಚ ಪೀಠಾಧೀಶರನ್ನು ಬೀರೂರು ಪಟ್ಟಣದ ಕೆ.ಎಲ್.ಕೆ ಮೈದಾನದಿಂದ ಅಡ್ಡಪಲ್ಲಕ್ಕಿ ಮೆರವಣಿಗೆಯಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿರುವ ರಂಭಾಪುರಿ ಖಾಸಾಶಾಖಾ ಮಠದವರೆಗೆ ವಿವಿಧ ಕಲಾತಂಡಗಳು, ಮಂಗಳವಾದ್ಯಗಳು, ಸಾಂಸ್ಕೃತಿಕ ಕಲಾ ಪ್ರದರ್ಶನ ಹಾಗೂ ಪೂರ್ಣಕುಂಭದೊಂದಿಗೆ ಕರೆತರಲಾಗುವುದು.
ಮಂಗಲ ಮಂದಿರದಲ್ಲಿ ಲೋಕಕಲ್ಯಾಣಾರ್ಥ ಗಿರಿಜಾ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಮತ್ತು ಶಿವದೀಕ್ಷಾ ಕಾರ್ಯಕ್ರಮ ನಡೆಯುವುದು. ಮಧ್ಯಾಹ್ನ 12ಗಂಟೆಗೆ ಜಗದ್ಗುರು ಪಂಚ ಪೀಠಾಧೀಶರಿಂದ ಶ್ರೀಚೌಡೇಶ್ವರಿ ದೇವಾಲಯ ಮತ್ತು ಶ್ರೀಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರ ಉದ್ಘಾಟನೆ, ಪಂಚ ಪೀಠಾಧೀಶರ ಪಾದಪೂಜೆ ನಡೆಯುವುದು.
ಧರ್ಮ ಜಾಗೃತಿ ಸಮಾರಂಭ
ಬೀರೂರಿನ ಗಣಪತಿ ಪೆಂಡಾಲ್ ಆವರಣದಲ್ಲಿ ರಂಭಾಪುರಿ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಕಾಶೀ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಧರ್ಮ ಜಾಗೃತಿ ಸಮಾರಂಭ ನಡೆಯುವುದು. ಈ ಕಾರ್ಯಕ್ರಮದ ನೇತೃತ್ವವನ್ನು ರಂಭಾಪುರಿ ಖಾಸಾ ಶಾಖಾ ಮಠದ ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆ ವಹಿಸಿದರೆ ವೈ.ಎಸ್.ವಿ.ದತ್ತ ಪ್ರಾಸ್ತಾವಿಕ ನುಡಿ ಆಡುವರು. ರಾಜ್ಯದ ವಿವಿಧ ಶಿವಾಚಾರ್ಯರ ಸಮ್ಮುಖದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು ಎಂದು ಬೀರೂರು ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಶಿವಾನಂದಾಶ್ರಮ ಟ್ರಸ್ಟ್ ಕಾರ್ಯದರ್ಶಿ ಕೆ.ಬಿ.ಮಲ್ಲಿಕಾರ್ಜುನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್ ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.