ಕಡೂರು: ‘ಸಖರಾಯಪಟ್ಟಣದ ಸಮೀಪವಿರುವ ಅಗ್ರಹಾರ ಚೆಕ್‌ಡ್ಯಾಂನ ನೀರು ಬಯಲುಸೀಮೆಯ ನೂರಾರು ಹಳ್ಳಿಗಳ ಜಲಮೂಲವಾಗಿದ್ದು, ಇಲ್ಲಿಂದ ಹೊಸದಾಗಿ ಹುಲಿಕೆರೆ, ನಾಗೇನಹಳ್ಳಿ ಕೆರೆ ತುಂಬಿಸುವ ಯೋಜನೆಗೆ ನೀರು ಬಳಸಿಕೊಳ್ಳಲು ರೈತರ ವಿರೋಧ ಇದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಾಸೂರು ಬಿ.ಎಚ್. ರವಿ ತಿಳಿಸಿದರು.
ಅಗ್ರಹಾರ ಚೆಕ್ ಡ್ಯಾಂ ನೀರಿನ ಉಳಿವಿಗಾಗಿ ಕಡೂರು ಪ್ರವಾಸಿ ಮಂದಿರದ ಆವರಣದಲ್ಲಿ ಶುಕ್ರವಾರ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಗ್ರಹಾರ ಚೆಕ್‌ಡ್ಯಾಂನ ನೀರು 40ಕ್ಕೂ ಹೆಚ್ಚು ಹಳ್ಳಿಗಳ ದಾಹ ತಣಿಸಿ, ವೇದಾನದಿಗೆ ಹರಿದು ಅಲ್ಲಿಂದ ವಾಣಿವಿಲಾಸ ಸಾಗರಕ್ಕೆ ಸೇರುತ್ತದೆ. ಇಂತಹ ಚೆಕ್‌ಡ್ಯಾಂನ ನೀರನ್ನು ಇದುವರೆಗೂ ಅಗ್ರಹಾರ, ಬಾಣೂರು, ಶಿವಪುರ, ಗುಬ್ಬಿಹಳ್ಳಿ, ಜಿಗಣೆಹಳ್ಳಿ, ಎನ್.ಜಿ.ಕೊಪ್ಪಲು, ಬಂಡಿಕೊಪ್ಪಲು, ಪಟ್ಟಣಗೆರೆ, ಕುಂತಿಹೊಳೆ, ಯಳ್ಳಂಬಳಸೆ ಭಾಗದ ರೈತರು ಬಳಸಿಕೊಳ್ಳುತ್ತಿದ್ದೇವೆ. ಈ ನೀರು ಗ್ರಾಮೀಣ ಜನರಿಗೆ ಕುಡಿಯಲು ಹಾಗೂ ಕೃಷಿಗೆ ಸದುಪಯೋಗವಾಗುವ ಜತೆಗೆ ಅಂತರ್ಜಲ ಹೆಚ್ಚಿಸಲು ಸಹಾಯವಾಗುತ್ತಿದೆ ಎಂದರು.
ಆದರೆ, ರಾಜಕೀಯ ಹುನ್ನಾರದಿಂದ ನೀರಾವರಿ ಇಲಾಖೆಯ ಎಂಜಿನಿಯರ್ ಮತ್ತು ಅಧಿಕಾರಿಗಳ ತಪ್ಪು ಮಾಹಿತಿಯಿಂದ ಹುಲಿಕೆರೆಯ 2 ಕೆರೆಗಳು ಮತ್ತು ನಾಗೇನಹಳ್ಳಿಯ 1 ಕೆರೆ ತುಂಬಿಸುವ ಯೋಜನೆ ಆರಂಭಿಸಲು ಸರ್ಕಾರ ಮುಂದಾಗಿದ್ದು, ಈ ಯೋಜನೆಯನ್ನು ರೈತರು ವಿರೋಧಿಸುತ್ತಿದ್ದಾರೆ. ಆದ್ದರಿಂದ ಈ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ರೈತರ ಪರವಾಗಿ ಮನವಿ ಮಾಡಿದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಯುವ ಘಟಕದ ರಾಜ್ಯಾಧ್ಯಕ್ಷ ಫಯಾಜ್ ಮೈಸೂರು ಮಾತನಾಡಿ, ‘ರೈತರು ಯಾವುದೇ ರಾಜಕೀಯ ಪಕ್ಷಗಳ ಗುಲಾಮರಲ್ಲ. ಪಂಜಾಬ್, ಹರಿಯಾಣದ ರೈತರಂತೆ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಫಲ ಸಿಗುತ್ತದೆ. ನೀರಿನ ಬಲವಂತದ ಬಳಕೆ ಸಲ್ಲದು ಎಂದು ಹೋರಾಟಕ್ಕೆ ಕರೆ ನೀಡಿದ್ದು ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ’ ಎಂದರು.
ಜಿಗಣೆಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿಗಣೆಹಳ್ಳಿ ನೀಲಕಂಠಪ್ಪ ಮಾತನಾಡಿ, ‘ಅಗ್ರಹಾರ ಚೆಕ್‌ಡ್ಯಾಂ 45 ಹಳ್ಳಿಗಳಿಗೆ ಕುಡಿಯುವ ನೀರಿಗೆ ಸಹಕಾರಿಯಾಗಿದೆ. ಇದೀಗ ಏಕಾಏಕಿ ಹುಲಿಕೆರೆ, ನಾಗೇನಹಳ್ಳಿ ಕೆರೆಗಳಿಗೆ ನೀರು ನೀಡುವುದರಿಂದ ರೈತರಿಗೆ ತೊಂದರೆಯಾಗುತ್ತದೆ. ಸಾಧುವಲ್ಲದ ಈ ಯೋಜನೆಯನ್ನು ರದ್ದುಗೊಳಿಸಿ ರೈತರ ಹಿತ ಕಾಪಾಡಲು ಸರ್ಕಾರ ಮುಂದಾಗಲಿ’ ಎಂದು ಮನವಿ ಮಾಡಿದರು.
ರೈತ ಸಂಘದ ಪಿರಿಯಾಪಟ್ಟಣದ ಸೈಯದ್ ಅಬ್ದುಲ್ಲ, ಬೆಟ್ಟದಪುರ ವಾಸು, ಮಂಜುನಾಥ್, ಅನಸೂಯಮ್ಮ, ಶರತ್‌ಯಾದವ್, ಕುರುಬಗೆರೆ ಲೋಕೇಶ್, ಪ್ರವೀಣ್, ರಮೇಶ್, ಶೇಖರಪ್ಪ, ಚಿಕ್ಕಂಗಳ ಈಶ್ವರಪ್ಪ, ಯಳ್ಳಂಬಳಸೆ ರುದ್ರಯ್ಯ ಇದ್ದರು.
ಎಫ್‌ಐಆರ್ ದಾಖಲಿಸುವುದಾಗಿ ಬೆದರಿಕೆ
ಯೋಜನೆ ಕಾರ್ಯರೂಪಕ್ಕೆ ಬಾರದಂತೆ ರೈತರು ಎಚ್ಚರಿಕೆ ವಹಿಸುವುದು ಪ್ರಾಣ ಕೊಟ್ಟಾದರೂ ನಮ್ಮ ನೀರನ್ನು ನಾವು ಪಡೆಯಬೇಕು. ಇದಕ್ಕಾಗಿ ಹೋರಾಟದ ರೂಪುರೇಷೆ ತಯಾರಿಸಿದ್ದು ಜುಲೈ 27ರಂದು ಯಗಟಿಪುರದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಿಂದ ಸಖರಾಯಪಟ್ಟಣ ಬಳಿಯ ಅಗ್ರಹಾರದ ತನಕ ಪಾದಯಾತ್ರೆಗೆ ರೈತರು ತೀರ್ಮಾನಿಸಿರುವುದಾಗಿ ಬಾಸೂರು ರವಿ ತಿಳಿಸಿ ರಾಜಕೀಯ ಕುಮ್ಮಕ್ಕಿನಿಂದ ರೈತರ ಹೋರಾಟದ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿಸುತ್ತಿದ್ದು ಇಂತಹ ಬೆದರಿಕೆಗೆ ನಮ್ಮ ಸಂಘಟನೆ ಬಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.