ADVERTISEMENT

ಕಡೂರು: ಪ್ರಥಮ ಜಾನಪದ ಸಮ್ಮೇಳನದ ಸಮಾರೋಪ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 13:42 IST
Last Updated 26 ಜೂನ್ 2022, 13:42 IST
ಯಗಟಿಪುರದಲ್ಲಿ ನಡೆದ ಜಾನಪದ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಚಟ್ನಳ್ಳಿ ಮಹೇಶ್ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.
ಯಗಟಿಪುರದಲ್ಲಿ ನಡೆದ ಜಾನಪದ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಚಟ್ನಳ್ಳಿ ಮಹೇಶ್ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.   

ಕಡೂರು: ‘ಯುವಜನತೆಯನ್ನು ಸಾಹಿತ್ಯ ಮತ್ತು ಜಾನಪದ ಕ್ಷೇತ್ರಗಳತ್ತ ಆಸಕ್ತಿ ತೋರಿಸಲು ಪ್ರೇರೇಪಿಸುವುದು ಸಮ್ಮೇಳನಗಳ ಆಶಯ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ವೈ.ಎಸ್.ರವಿಪ್ರಕಾಶ್ ಅಭಿಪ್ರಾಯಪಟ್ಟರು.

ಯಗಟಿಪುರದಲ್ಲಿ ಶನಿವಾರ ನಡೆದ ಪ್ರಥಮ ಜಾನಪದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮ್ಮೇಳನಗಳು ನಮ್ಮ ನಡುವಿನ ಜ್ವಲಂತ ಸಮಸ್ಯೆಗಳನ್ನು ಅನಾವರಣಗೊಳಿಸುವ ಮತ್ತು ಅದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲು ಸೂಕ್ತ ವೇದಿಕೆಯಾಗಿದೆ‌. ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಂತೆ ಜಾನಪದ ಪರಿಷತ್ತು ಆ ಕ್ಷೇತ್ರದಲ್ಲಿನ ಸಮಸ್ಯೆಗಳು ಮತ್ತು ನಶಿಸಿಹೋಗುತ್ತಿರುವ ನಮ್ಮ ಸಂಸ್ಕೃತಿಯ ಭಾಗವೇ ಆದ ಜಾನಪದ ಕಲೆಗಳನ್ನುಳಿಸಲು ಮುಂದಾಗಬೇಕು. ಅದಕ್ಕೆ ಪೂರಕವಾಗಿ ನಡೆದ ಈ ಸಮ್ಮೇಳನಕ್ಕೆ ಜನರ ಪ್ರತಿಕ್ರಿಯೆ ಆಶಾದಾಯಕವಾಗಿದೆ. ಪರಿಷತ್ತಿನ ಭವಿಷ್ಯದ ಕಾರ್ಯಕ್ರಮಗಳಿಗೆ ಸ್ಫೂರ್ತಿಯಾಗಿದೆ’ ಎಂದರು.

ADVERTISEMENT

ಚಿಂತಕ ಯರದಕೆರೆ ಎಂ.ರಾಜಪ್ಪ ಮಾತನಾಡಿ, ‘ಜಾತೀಯತೆಯ ಸೋಂಕಿಲ್ಲದೆ ಕಲೆಗಳ ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಬೇಕು. ಗ್ರಾಮೀಣ ಭಾಗದಲ್ಲಿ ಸುಪ್ತವಾಗಿರುವ ಜಾನಪದ ಕಲೆಗಳು ಪ್ರಕಾಶನಗೊಂಡಾಗ ನಮ್ಮ ಸಂಸ್ಕೃತಿಯ ಅರಿವು ಮುಂದಿನ ಪೀಳಿಗೆಗೆ ದೊರಕಲಿದೆ’ ಎಂದರು.

ಸಮ್ಮೇಳನಾಧ್ಯಕ್ಷ ಚಟ್ನಳ್ಳಿ ಮಹೇಶ್ ಅವರನ್ನು ಗ್ರಾಮಸ್ಥರು ಮತ್ತು ಜಾನಪದ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ವರಾಚಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.