ADVERTISEMENT

ಬ್ರಹ್ಮ ರಥೋತ್ಸವ ಸಂಭ್ರಮ

ಮಲ್ಲೇಶ್ವರದ ಸ್ವರ್ಣಾಂಬಾ ದೇವಿಯ ಉತ್ಸವ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:24 IST
Last Updated 14 ಮೇ 2022, 2:24 IST
ಕಡೂರು ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ಸ್ವರ್ಣಾಂಬಾ ದೇವಿ ರಥೋತ್ಸವ ಶುಕ್ರವಾರ ಭಕ್ತಿಭಾವದಿಂದ ನಡೆಯಿತು.
ಕಡೂರು ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ಸ್ವರ್ಣಾಂಬಾ ದೇವಿ ರಥೋತ್ಸವ ಶುಕ್ರವಾರ ಭಕ್ತಿಭಾವದಿಂದ ನಡೆಯಿತು.   

ಕಡೂರು: ತಾಲ್ಲೂಕಿನ ಮಲ್ಲೇಶ್ವರದ ಸ್ವರ್ಣಾಂಬಾ ದೇವಿ ಬ್ರಹ್ಮ ರಥೋತ್ಸವವು ಶುಕ್ರವಾರ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಭಕ್ತಿ ಭಾವದಿಂದ ನೆರವೇರಿತು.

ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ಗಜಾರೋಹಣ ಸೇವೆ ನಡೆಯಿತು. ಆ ನಂತರ ಸ್ವರ್ಣಾಂಬಾ ಕಲ್ಯಾಣ ಮಂಟಪದಲ್ಲಿ ಕನ್ನಿಕಾ ಪೂಜೆ ಮತ್ತು ಪುರಸ್ಸರ ಕಲ್ಯಾಣೋತ್ಸವ ನೆರವೇರಿತು.

ಬಳಿಕ ಸ್ವರ್ಣಾಂಬಾ ದೇವಿ ಉತ್ಸವ ಮೂರ್ತಿಯನ್ನು ಸಕಲವಾದ್ಯಗಳ ಸಮೇತ ಹೊರ ತಂದು ಅಲಂಕೃತ ರಥದೊಳಗೆ ಪ್ರತಿಷ್ಠಾಪಿಸಲಾಯಿತು. ಬಲಿಪೂಜೆ ನಡೆದು ಅಂತರ್ಪಟ ಸರಿದ ಕೂಡಲೇ ಭಕ್ತರು ಜಯಘೋಷಗಳೊಂದಿಗೆ ರಥವನ್ನು ಉತ್ಸಾಹದಿಂದ ಎಳೆದು ಸಂಭ್ರಮಿಸಿದರು. ಸ್ವರ್ಣಾಂಬಾ ದೇವಿಯ ಜೊತೆಗೆ ಅರಳೀಮರದಮ್ಮ ಮತ್ತು ಚೌಡ್ಲಾಪುರ ಕರಿಯಮ್ಮ ದೇವರ ಉಪಸ್ಥಿತಿಯಿತ್ತು.

ADVERTISEMENT

ಕಳೆದ ಎರಡು ವರ್ಷ ಕೋವಿಡ್‌ ಕಾರಣದಿಂದ ರಥೋತ್ಸವ ನಡೆದಿರಲಿಲ್ಲ. ಕಳೆದ ಸಂವತ್ಸರದ ಜನವರಿಯಲ್ಲಿ ಸರಳ ಮತ್ತು ಸಾಂಪ್ರದಾಯಿಕವಾಗಿ ರಥೋತ್ಸವ ನಡೆಸಲಾಗಿತ್ತು. ಈ ಕಾರಣದಿಂದ ಇಂದಿನ ರಥೋತ್ಸವದಲ್ಲಿ ಜನಸಂದಣಿ ಹೆಚ್ಚಿತ್ತು. ದೇವಾಲಯದ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯದ ಧರ್ಮದರ್ಶಿ ಮಂಡಳಿ ಕಾರ್ಯಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ಮತ್ತು ಮಂಡಳಿ ಸದಸ್ಯರು ಇದ್ದರು.

ಭಕ್ತರು ಭಾವುಕ: ಸ್ವರ್ಣಾಂಬಾ ದೇವಿಯನ್ನು ರಥಾರೋಹಣಕ್ಕೆ ಮುನ್ನ ಸೇರಿದ್ದ ಭಕ್ತರ ಮುಂದೆ ಮೂರು ಸುತ್ತು ತರಲಾಗುತ್ತದೆ. ಈ ಸಮಯದಲ್ಲಿ ಮುತ್ತೈದೆಯರು ದೇವಿಗೆ ಅರಿಶಿನ ಸಮರ್ಪಣೆ ಮಾಡುತ್ತಾರೆ. ದೇವಿಯ ವಿಗ್ರಹ ಅರಿಶಿನದಲ್ಲಿ ಮುಳುಗಿ ಹೋಗಿರುವುದನ್ನು ಭಕ್ತರು ಭಾವುಕರಾಗಿ ಕಣ್ತುಂಬಿಕೊಳ್ಳುತ್ತಾರೆ. ಅತ್ಯಂತ ಉತ್ಸಾಹದಿಂದ ದೇವಿಯನ್ನು ಹೊತ್ತ ಗ್ರಾಮಸ್ಥರೂ ಸಹ ಅರಿಶಿನದಲ್ಲಿ ತೋಯ್ದು ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.