
ಕಡೂರು: ‘ತಾಲ್ಲೂಕು ಕಚೇರಿಯಲ್ಲಿ ಜನನ-ಮರಣ ದೃಢೀಕರಣ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಅವರು ಮಾಡಿರುವ ಆರೋಪಗಳು ಆಧಾರ ರಹಿತವಾಗಿದ್ದು, ಸುಳ್ಳು ಆರೋಪ ಮಾಡಿ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೆ ಮಾಡಿದ್ದಾರೆ. ಇದು ನನಗೆ ಹಾಗೂ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ’ ಎಂದು ಕಡೂರು ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ ದೂರಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಕ್ಬಾಲ್ ಅವರ ಆರೋಪಗಳಿಂದ ಮಾನಸಿಕ ಹಿಂಸೆಯಾಗಿದ್ದು, ಕರ್ತವ್ಯ ನಿರ್ವಹಿಸುವುದು ಕಷ್ಟವಾಗಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ’ ಎಂದು ತಿಳಿಸಿದರು.
ಇಕ್ಬಾಲ್ ಅವರು ತಾಲ್ಲೂಕು ಕಚೇರಿಯಲ್ಲಿ ಸಾಂಖ್ಯಿಕ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ವರ್ತನೆ ಬಗ್ಗೆ ಸಾರ್ವಜನಿಕರು ಸಿಂಗಟಗೆರೆ ಪೊಲೀಸ್ ಸಿಬ್ಬಂದಿ ಸೇರಿದಂತೆ ಅನೇಕರಿಂದ ದೂರುಗಳು ಬಂದಿದ್ದವು. ಈ ವಿಷಯವಾಗಿ 2 ಬಾರಿ ನೊಟೀಸ್ ನೀಡಲಾಗಿತ್ತು. ಅನಧಿಕೃತವಾಗಿ ಕಚೇರಿಗೆ ಗೈರಾಗುವುದು, ಹಾಜರಾತಿ ದಾಖಲೆಯಲ್ಲಿ ಸಹಿ ಮಾಡದಿರುವುದು, ನಕಲಿ ದಾಖಲೆ ಸೃಷ್ಟಿಸುವುದು, ಮಹಿಳೆಯರು–ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುವುದು ಹಲವು ಬಾರಿ ಮರುಕಳಿಸಿದೆ. ಇವರಿಂದ ಸಾರ್ವಜನಿಕ ಕೆಲಸಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಜಿಲ್ಲಾ ಸಾಂಖ್ಯಿಕ ಅಧಿಕಾರಿಗೆ ಪತ್ರ ಬರೆದು ಬೇರೆ ನಿರೀಕ್ಷಕರನ್ನು ನಿಯೋಜಿಸುವಂತೆ ಕೋರಲಾಗಿತ್ತು ಎಂದು ವಿವರಿಸಿದರು.
ಫೆ. 11ರಂದು ಇಕ್ಬಾಲ್ ಅವರನ್ನು ಸಾಂಖ್ಯಿಕ ನಿರ್ದೇಶನಾಲಯ ಬೆಂಗಳೂರಿಗೆ ವರ್ಗಾವಣೆ ಮಾಡಿದೆ. ಇದನ್ನು ಸಹಿಸದೆ ಅವರು ಜಾತಿ ನಿಂದನೆ ಆರೋಪ ಹೊರಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶಾಸಕರ ಆಪ್ತ ಸಹಾಯಕ, ಜಿಲ್ಲಾ ಸಾಂಖ್ಯಿಕ ಸಂಗ್ರಹಣಾಧಿಕಾರಿ ಮತ್ತು ತಾಲ್ಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷರ ಹೆಸರು ಸೇರಿಸಿ ಪತ್ರ ಬರೆದಿಟ್ಟಿದ್ದರು. ಅವರ ನಿವಾಸದಲ್ಲಿಯೇ ಇದ್ದರೂ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.
‘ಆತ್ಮಹತ್ಯೆ ಯತ್ನ ಕೂಡ ಅಪರಾಧವಾಗಿದ್ದು, ನನ್ನ ವಿರುದ್ಧ ಮಾಧ್ಯಮಗಳಲ್ಲಿ ಸುಳ್ಳು ಆರೋಪ ಮಾಡಿರುವುದು ನೋವು ತಂದಿದೆ. ಇವರ ವಿರುದ್ಧ ಪೊಲೀಸರು ಮತ್ತು ಮೇಲಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು’ ಎಂದು ಪೂರ್ಣಿಮಾ ಒತ್ತಾಯಿಸಿದರು.
‘ಈಗಾಗಲೇ ಕಡೂರು ಠಾಣೆಯಲ್ಲಿ ಇಕ್ಬಾಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿಂದೆ 2-3 ಬಾರಿ ಲೋಕಾಯುಕ್ತದ ಬಲೆಗೂ ಬಿದ್ದ ಜತೆಗೆ ಅಮಾನತಿಗೂ ಒಳಪಟ್ಟಿದ್ದರು. ಇವರು ಮಾಡಿರುವ ಆರೋಪಗಳನ್ನು ಸಮಗ್ರ ತನಿಖೆ ನಡೆಸಬೇಕು. ನಾನು ಅವರಿಗೆ ಯಾವುದೇ ಶೋಷಣೆ ಮಾಡಿಲ್ಲ. ಹಣ ಕೇಳಿಲ್ಲ. ಈ ಬಗ್ಗೆಯೂ ಸಮಗ್ರ ತನಿಖೆಗೆ ಸಿದ್ಧ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.