ADVERTISEMENT

ಕಡೂರು: ‘ಪೋಷಕರ ನೆರವಿನಿಂದ ಸರ್ಕಾರಿ ಶಾಲೆಗಳ ಉಳಿವು’

ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಟ್ರ್ಯಾಕ್‌ಸೂಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 4:12 IST
Last Updated 13 ಆಗಸ್ಟ್ 2025, 4:12 IST
ಕಡೂರು ಪಟ್ಟಣದ ಛತ್ರದ ಬೀದಿಯಲ್ಲಿರುವ ಕೆ.ವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುರಸಭೆ ಸದಸ್ಯ ಈರಳ್ಳಿ ರಮೇಶ್ ಮತ್ತು ಚೇತನ್ ದೇವರಕುರಿ ಮಂಗಳವಾರ ಟ್ರಾಕ್ ಸೂಟ್ ವಿತರಿಸಿದರು.ಮುಖ್ಯ ಶಿಕ್ಷಕಿ ಪ್ರೇಮ,ದಾಕ್ಷಾಯಣಿ,ಪೋಷಕರು,ಮಕ್ಕಳು ಇದ್ದರು
ಕಡೂರು ಪಟ್ಟಣದ ಛತ್ರದ ಬೀದಿಯಲ್ಲಿರುವ ಕೆ.ವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುರಸಭೆ ಸದಸ್ಯ ಈರಳ್ಳಿ ರಮೇಶ್ ಮತ್ತು ಚೇತನ್ ದೇವರಕುರಿ ಮಂಗಳವಾರ ಟ್ರಾಕ್ ಸೂಟ್ ವಿತರಿಸಿದರು.ಮುಖ್ಯ ಶಿಕ್ಷಕಿ ಪ್ರೇಮ,ದಾಕ್ಷಾಯಣಿ,ಪೋಷಕರು,ಮಕ್ಕಳು ಇದ್ದರು   

ಕಡೂರು: ‘ಸರ್ಕಾರಿ ಶಾಲೆಗಳ ಉಳಿವಿಗಾಗಿ ಪೋಷಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಬೇಕಾದ ಅನಿವಾರ್ಯತೆ ಬಂದಿದ್ದು, ಎಲ್ಲರ ನೆರವಿನಿಂದ ಮಾತ್ರ ಈ ಕಾರ್ಯ ಸಾಧ್ಯ’ ಎಂದು ಪುರಸಭೆ ಸದಸ್ಯ ಈರಳ್ಳಿ ರಮೇಶ್ ತಿಳಿಸಿದರು.

ಪಟ್ಟಣದ ಛತ್ರದ ಬೀದಿಯಲ್ಲಿರುವ ಕೆ.ವಿ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಸಂಜೆ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಟ್ರ್ಯಾಕ್‌ಸೂಟ್ ವಿತರಿಸಿ ಅವರು ಮಾತನಾಡಿದರು.

8 ದಶಕಗಳ ಇತಿಹಾಸ ಹೊಂದಿರುವ ಪಟ್ಟಣದ ವಿಶ್ವನಾಥ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ 500ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಕೊಠಡಿಗಳೇ ಸಾಲುತ್ತಿರಲಿಲ್ಲ. ಆದರೆ, ಬದಲಾದ ಶಿಕ್ಷಣದ ವ್ಯವಸ್ಥೆಯಿಂದ ಇಲ್ಲಿ ಮಕ್ಕಳ ಕೊರತೆ ಕಾಡುತ್ತಿದೆ. ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ ಎಂದು ವಿಷಾದಿಸಿದರು.

ADVERTISEMENT

ಮಕ್ಕಳಿಗೆ ಟ್ರ್ಯಾಕ್‌ಸೂಟ್ ವಿತರಿಸಿ ಮಾತನಾಡಿದ ದಾನಿ ಚೇತನ್ ದೇವರಕುರಿ, ‘ಸರ್ಕಾರಿ ಶಾಲೆಗಳಿಗೆ ಸರ್ಕಾರವು ಅನೇಕ ಸೌಲಭ್ಯ ನೀಡುತ್ತಿದ್ದು, ಉತ್ತಮ ಶಿಕ್ಷಕರನ್ನು ಒದಗಿಸುತ್ತಿದೆ. ಖಾಸಗಿ ಶಾಲೆಗಳಿಗಿಂತ ಮಿಗಿಲಾಗಿ ಬೋಧಿಸುವ ಅರ್ಹ ಶಿಕ್ಷಕರ ಪಡೆಯೇ ಇದ್ದರೂ ಪೋಷಕರು ಖಾಸಗಿ ಶಾಲೆಗಳನ್ನು ಅವಲಂಬಿಸುತ್ತಿರುವುದು ವಿಪರ್ಯಾಸ’ ಎಂದರು.

ಮುಖ್ಯಶಿಕ್ಷಕಿ ಕೆ.ಸಿ.ಪ್ರೇಮಾ ಮಾತನಾಡಿ, ‘28 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳ ಕೊರತೆಯಿಂದ ನೋವಾಗಿದೆ. ಸಾರ್ವಜನಿಕರು, ಪೋಷಕರು ಶಾಲೆ ಮುಂದುವರೆಯಲು ಸಹಕಾರ ನೀಡಬೇಕು. ಕಲಿಕೆಯಲ್ಲಿ ಯಾವುದೇ ಕೊರತೆ ಇಲ್ಲದಂತೆ ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂದು ಪೋಷಕರಲ್ಲಿ ಮನವಿ ಮಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸಿ.ಎಂ.ದಾಕ್ಷಾಯಣಿ ಕಾರ್ಯಕ್ರಮ ನಡೆಸಿಕೊಟ್ಟರು. ಅತಿಥಿ ಶಿಕ್ಷಕ ಪ್ರವೀಣ್, ಅಂಗನವಾಡಿ ಶಿಕ್ಷಕಿಯರು, ಪೋಷಕರು ಹಾಗೂ ಮಕ್ಕಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.