ADVERTISEMENT

ಕಡೂರು | ದೇಶದಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಳ: ಕೆ.ಎಸ್‌.ಆನಂದ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:37 IST
Last Updated 29 ಡಿಸೆಂಬರ್ 2025, 5:37 IST
ಕಡೂರು ಜ್ಞಾನ ಭಾರತಿ ಇಂಗ್ಲೀಷ್ ಶಾಲೆಯ ‘ಜ್ಞಾನ ತರಂಗ’ ಕಾರ್ಯಕ್ರಮವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಭಂಡಾರಿ ಶ್ರೀನಿವಾಸ್, ಸುಜಾತ ಕೃಷ್ಣಮೂರ್ತಿ, ಶರತ್ ಕೃಷ್ಣಮೂರ್ತಿ, ಡಾ.ಶರತ್ ಆರ್. ಯಜಮಾನ್, ಡಾ.ಅರುಣ್, ಮಂಜುನಾಥ್ ಭಾಗವಹಿಸಿದ್ದರು
ಕಡೂರು ಜ್ಞಾನ ಭಾರತಿ ಇಂಗ್ಲೀಷ್ ಶಾಲೆಯ ‘ಜ್ಞಾನ ತರಂಗ’ ಕಾರ್ಯಕ್ರಮವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಭಂಡಾರಿ ಶ್ರೀನಿವಾಸ್, ಸುಜಾತ ಕೃಷ್ಣಮೂರ್ತಿ, ಶರತ್ ಕೃಷ್ಣಮೂರ್ತಿ, ಡಾ.ಶರತ್ ಆರ್. ಯಜಮಾನ್, ಡಾ.ಅರುಣ್, ಮಂಜುನಾಥ್ ಭಾಗವಹಿಸಿದ್ದರು   

ಕಡೂರು: ಶೈಕ್ಷಣಿಕ ರಂಗದಲ್ಲಿ ಸರ್ಕಾರಿ ಮತ್ತು ಖಾಸಗಿ ವ್ಯವಸ್ಥೆಗಳ ಸಹಭಾಗಿತ್ವ ಮತ್ತು ಶ್ರಮದಿಂದ ದೇಶದಲ್ಲಿ ಸಾಕ್ಷರತಾ ಪ್ರಮಾಣ ಗಣನೀಯವಾಗಿ ಹೆಚ್ಚಳ ಕಂಡಿದೆ ಎಂದು ಶಾಸಕ ಕೆ.ಎಸ್‌.ಆನಂದ್‌ ತಿಳಿಸಿದರು.

ಪಟ್ಟಣದ ಜ್ಞಾನಭಾರತಿ ಹೋಂ ಫಾರ್ ಎಜುಕೇಷನ್ ಸಂಸ್ಥೆಯು ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಜ್ಞಾನ ತರಂಗ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಶೇ 80ಕ್ಕೆ ಏರಿಕೆ ಕಂಡಿದೆ. ಇದಕ್ಕೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ಆದರೆ, ಸರ್ಕಾರಿ ಮತ್ತು ಖಾಸಗಿ ವ್ಯವಸ್ಥೆಗಳಿಗೆ ತುಲನೆ ಮಾಡಿದರೆ ಸರ್ಕಾರವು ಪ್ರಾಥಮಿಕ, ಮಾಧ್ಯಮಿಕ ಶಾಲೆಗಳ ಪ್ರತಿ ಮಗುವಿನ ಮೇಲೆ ವಾರ್ಷಿಕ ಸುಮಾರು ₹ 77ಸಾವಿರ ವೆಚ್ಚ ಮಾಡಿದರೆ, ಪ್ರೌಢಶಾಲೆಯ ವಿದ್ಯಾರ್ಥಿಗೆಂದು ₹ 1ಲಕ್ಷ ವ್ಯಯ ಮಾಡುತ್ತಿದೆ. ಖಾಸಗಿ ಶಾಲೆಗಳಲ್ಲಿ ವೆಚ್ಚದ ಪ್ರಮಾಣ ಕಡಿಮೆ ಇದೆ ಎಂದು ಹೇಳಿದರು.

ADVERTISEMENT

ಕಳೆದ ಶೈಕ್ಷಣಿಕ ವರ್ಷದಲ್ಲಿ ಕಡೂರು ವಲಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ 8ನೇ ಸ್ಥಾನದಲ್ಲಿತ್ತು. ಈ ಬಾರಿ ಮೊದಲ ಮೂರು ಸ್ಥಾನದ ಒಳಗೆ ತರಲು ಸೂಕ್ತ ಕ್ರಮ ವಹಿಸುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದೇವೆ. ಬಿಇಒಗಳು ಶಿಕ್ಷಕರ ಜತೆ ಗಂಭೀರವಾಗಿ ಸಂವಹನ ನಡೆಸಿ ಉತ್ತಮ ಫಲಿತಾಂಶ ನೀಡಲು ಮಕ್ಕಳನ್ನು ಪ್ರೇರೇಪಿಸುವಂತೆ ಸೂಚಿಸಬೇಕು ಎಂದರು.

ಮಕ್ಕಳು ಶಿಕ್ಷಣದ ಜೊತೆಗೆ ದೇಶಾಭಿಮಾನ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿದರೆ ವೈಯಕ್ತಿಕ ಪ್ರತಿಭೆಗೆ ಅನುಸಾರವಾಗಿ ಅವರು ಬಯಸಿದ ಕ್ಷೇತ್ರದಲ್ಲಿ ಸಾಧನೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಜ್ಞಾನಭಾರತಿ ಸಂಸ್ಥೆಯ ಶರತ್‌ ಕೃಷ್ಣಮೂರ್ತಿ ಅವರ ತಂಡ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಸಂಸ್ಥೆಗೆ ಯಾವುದೇ ಸಹಕಾರವನ್ನು ನೀಡಲು ಸಿದ್ಧ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಈ ಸಂಸ್ಥೆಯು ಸೇವಾ ಮನೋಭಾವದಿಂದ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.

ಜ್ಞಾನಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸುಜಾತ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶರತ್‌ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ, ಪುರಸಭೆ ಮಾಜಿ ಸದಸ್ಯ ಮಂಜುನಾಥ್, ಸಂಸ್ಥೆಯ ಉಪಾಧ್ಯಕ್ಷ ಪುಂಡಲಿಕರಾವ್ ಮಾತನಾಡಿದರು. ಶಾಲೆಯಲ್ಲಿ ಕಲಿತು ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಶರತ್ ಆರ್.ಯಜಮಾನ್, ಡಾ.ಎಸ್.ಎಂ.ಅರುಣ್ ಅವರನ್ನು ಗೌರವಿಸಿತು.

ಪುರಸಭೆ ಮಾಜಿ ಸದಸ್ಯೆ ಪುಷ್ಪಲತಾ ಮಂಜುನಾಥ್, ಶಾಲೆಯ ಮುಖ್ಯ ಶಿಕ್ಷಕಿ ರಜಿಯಾಬಾನು, ಶಿಕ್ಷಕರು, ಸಿಬ್ಬಂದಿ ಹಾಗೂ ಪೋಷಕರು, ಮಕ್ಕಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.