
ಕಡೂರು: ತಾಲ್ಲೂಕಿನಾದ್ಯಂತ ಮಕರ ಸಂಕ್ರಾಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ವೆಂಕಟೇಶ್ವರ ಸ್ವಾಮಿ ದೇವಾಲಯ, ಗಣಪತಿ-ಆಂಜನೇಯ ಸ್ವಾಮಿ ದೇವಾಲಯ, ಪಾತಾಳ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು.
ಮನೆಗಳಲ್ಲಿ ಅಂಗಳವನ್ನು ಗೋಮಯದಿಂದ ಸಾರಿಸಿ ವರ್ಣಮಯ ರಂಗೋಲಿ ಚಿತ್ರಿಸಲಾಗಿತ್ತು. ಪೊಂಗಲ್ ಆಚರಣೆಯ ಸಂಪ್ರದಾಯವಿರುವ ತಮಿಳು ಮೂಲದ ಮನೆಗಳಲ್ಲಿ ಮನೆಯ ಮುಂದೆ ಕಬ್ಬಿನಿಂದ ಮಂಟಪ ಸ್ಥಾಪಿಸಿ, ಒಲೆ ಹೂಡಿ ಹುಗ್ಗಿ ತಯಾರಿಸಿ ಸೂರ್ಯದೇವನಿಗೆ ಅರ್ಪಿಸಲಾಯಿತು. ದೇವಾಲಯ ಭೇಟಿ ಬಳಿಕ ಮನೆ ದೇವರಿಗೆ ಪೂಜೆ ಸಲ್ಲಿಸಿ, ತಿಲ ದಾನ ಮಾಡಲಾಯಿತು. ಬಳಿಕ ಮನೆಯವರು ಹಿರಿಯರಿಂದ ಎಳ್ಳು-ಬೆಲ್ಲದ ಮಿಶ್ರಣ ಪಡೆದು ಸೇವಿಸಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.
ಬೀರೂರು ಪಟ್ಟಣದಲ್ಲಿ ಹಳೇಪೇಟೆಯ ಶ್ರೀವೀರಭದ್ರಸ್ವಾಮಿ ದೇವಾಲಯ, ಸರಸ್ವತಿಪುರಂ ಬಡಾವಣೆಯ ಶ್ರೀಮೈಲಾರಲಿಂಗೇಶ್ವರ ಸ್ವಾಮಿ ಹಾಗೂ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಧನುರ್ಮಾಸದಲ್ಲಿ ಪ್ರತಿದಿನ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನೆರವೇರಿದವು.
ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಎಳ್ಳು-ಬೆಲ್ಲ ಹಂಚಿ ‘ಎಳ್ಳು-ಬೆಲ್ಲ ತಿಂದು ಒಳ್ಳೆಯದಾಗಿ ಮಾತನಾಡಿ’ ಎಂಬ ಸಂದೇಶದ ಮೂಲಕ ಹಬ್ಬದ ಶುಭಾಷಯ ಕೋರಿದರು. ಸಂಜೆ ಮಕ್ಕಳು ಮನೆ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲವನ್ನು ಹಂಚುವುದರ ಮೂಲಕ ಹಬ್ಬ ಆಚರಿಸಿದರು. ಮನೆಗಳಲ್ಲಿ ಅವರೆಕಾಯಿ ಬೆರೆಸಿದ ಸಿಹಿ ಪೊಂಗಲ್, ಗೆಣಸು, ಕಡ್ಲೆಗಿಡ, ಕಬ್ಬನ್ನು ಮನೆಮಂದಿ ಸೇವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.