ಕಡೂರು: ‘ನಡೆ-ನುಡಿ ಒಂದಾಗಿ ಬದುಕಿನ ಸುಧಾರಣೆ ಆಗದಿದ್ದರೆ ಫಲವಿಲ್ಲ ಎಂದು ಚಿಂತಿಸಿ ಅದರಂತೆ ನಡೆದವರು ಬಸವಾದಿ ಶರಣರು. ಪರರ ಬಗೆಗೆ ಒಳಿತಿನ ಚಿಂತನೆ ನಡೆಸದಿರುವುದೇ ಇಂದು ಸಮಾಜವು ಸಮಸ್ಯೆಗಳಲ್ಲಿ ಸಿಲುಕಲು ಕಾರಣವಾಗಿದೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜಿ.ತಿಮ್ಮಾಪುರದಲ್ಲಿ ಶುಕ್ರವಾರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಶ್ರಾವಣ ಸಂಜೆ-ಶರಣರ ಸಂದೇಶ' ಸಮಾರೋಪದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಬಸವತತ್ವವು ಜನಮನದಲ್ಲಿ ಸ್ಥಾಯಿಯಾಗಿ ಬದುಕಿನಲ್ಲಿ ಜಂಗಮವಾಗಬೇಕು, ಆದರೆ ಇದು ಆಗುತ್ತಿಲ್ಲ. ಶ್ರಾವಣ ಸಂಜೆ ಕಾರ್ಯಕ್ರಮಗಳ ಮೂಲಕ ಬಸವತತ್ವದ ಬೀಜವನ್ನು ಬಿತ್ತುವ, ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ಚಿಂತನೆ ಸಾರ್ಥಕತೆ ಕಾಣುವಲ್ಲಿ ಯಶಸ್ವಿಯಾಗುತ್ತಿದೆ. ಅರಿವಿನ ಜಾಗೃತಿ ಮೂಡಿಸುತ್ತಿರುವ ಶರಣ ಸಾಹಿತ್ಯ ಪರಿಷತ್ ಅಭಿನಂದನಾರ್ಹ ಎಂದರು.
ಉಪನ್ಯಾಸ ನೀಡಿದ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಜಾತಿಯ ಮೇಲಾಟ, ಅಸಮಾನತೆ, ಧರ್ಮೋದ್ರೇಕ ಹಾಗೂ ಮೌಢ್ಯಗಳ ಸಂಕೋಲೆಯಲ್ಲಿರುವ ನಮ್ಮನ್ನು ಎಚ್ಚರಿಸಲು ಬಸವಣ್ಣ ಮತ್ತೆ ಬರಬೇಕು ಹಾಗೂ ಅವರ ಚಿಂತನೆ ನಮಗೆ ದಾರಿದೀಪವಾಗಬೇಕು. ಶ್ರೇಣೀಕೃತ ಸಮಾಜ ವ್ಯವಸ್ಥೆ ಬದಲಾಗಲು ಎಲ್ಲ ವರ್ಗಗಳನ್ನು ಬೆಸೆಯಬೇಕಾದ ಅಗತ್ಯವಿದೆ. ಸಮಸಮಾಜ ನಿರ್ಮಾಣ, ಅರಮನೆಗೆ ಪರ್ಯಾಯವಾಗಿ ಮಹಾಮನೆ ಸ್ಥಾಪಿಸಿದ ಬಸವಣ್ಣನ ಚಿಂತನೆ ಮತ್ತು ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿದೆ ಎಂದರು.
'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೀಗ ಆಳರಸರ ಗುಲಾಮರಾಗುತ್ತಿದ್ದೇವೆ. ಕೀಳರಿಮೆಯಿಂದ ಬಳಲುತ್ತಿದ್ದೇವೆ. ಅಂದಿನವರ ದಿಟ್ಟತನ ನಮಗಿಲ್ಲ. ಅದಕ್ಕಾಗಿಯೇ ನಮಗೆ ಮಾರ್ಗದರ್ಶಕರಾಗಿ ಬಸವಣ್ಣ ಗೋಚರಿಸುತ್ತಾರೆ. ಗಾಂಧೀಜಿ ಮತ್ತು ಅಂಬೇಡ್ಕರ್ ಈ ಸೂತ್ರಗಳನ್ನು ಅನುಸರಿಸಿ ಬೆಳಕಾದರು’ ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ, ವಚನ ಸಾಹಿತ್ಯವು ಸ್ವಾರ್ಥದ ಆಸೆಯಿಂದ ರಚಿತವಾಗಿಲ್ಲ. ವಚನಗಳು ಶರಣರ ಆತ್ಮಕಲ್ಯಾಣದ ಜತೆ ಲೋಕಕಲ್ಯಾಣದ ಚಿಂತನೆಗಳಾಗಿವೆ. ಮಾನವನ ಸಮಗ್ರ ವಿಕಾಸ ಮತ್ತು ನೈತಿಕ ಜೀವನ ಮೌಲ್ಯಗಳ ಆವಿಷ್ಕಾರವಾದ ವಚನಗಳು ಜೀವನ ಆದರ್ಶದ ಸಪ್ತಸೂತ್ರಗಳ ಸಂವಿಧಾನವೇ ಆಗಿದೆ ಎಂದು ಹೇಳಿದರು.
ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಡಾ.ಬಸವರಾಜ ನೆಲ್ಲಿಸರ, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಎಚ್.ಗಾಂಜಿ, ಎಂ.ಮರುಳಪ್ಪ, ಎಂ.ರಂಗಪ್ಪ, ಕದಳಿ ವೇದಿಕೆಯ ಸುಜಾತ ಜಡೆಮಲ್ಲಪ್ಪ, ಹೊಸೂರು ಪುಟ್ಟರಾಜು, ಯಗಟಿ ಸತೀಶ್, ಎಂ.ಆರ್.ಪ್ರಕಾಶ್, ಸಂಪತ್‌ಕುಮಾರ್, ಶೈಲಾ ಶಿವಣ್ಣ, ಸುನೀತಾ, ಉಮಾದೇವಿ, ಎನ್.ಪಿ.ಮಂಜುನಾಥ ಪ್ರಸನ್ನ, ಪಿ.ಸಿ.ಗಂಗಾಧರ ವಿವಿಧ ಹೋಬಳಿ ಅಧ್ಯಕ್ಷರು, ಜಿ.ತಿಮ್ಮಾಪುರ ಗ್ರಾಮಸ್ಥರು ಹಾಜರಿದ್ದರು.
ವಚನಗಳು ಜೀವನ ಆದರ್ಶದ ಸಪ್ತಸೂತ್ರಗಳ ಸಂವಿಧಾನ. ಪ್ರಜಾಪ್ರಭುತ್ವದ ಸಂವಿಧಾನ ಬದಲಾಗಬಹುದು ಆದರೆ ಸಪ್ತಸೂತ್ರಗಳ ಜೀವನ ಸಂವಿಧಾನ ಎಂದಿಗೂ ಪ್ರಸ್ತುತ. ಶರಣರು ಸಮಾಜಕ್ಕೆ ನೀಡಿದ ನೀತಿಸಂಹಿತೆ.ಡಾ.ಸಿ.ಸೋಮಶೇಖರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.