ಕಳಸ: ಇಲ್ಲಿನ ಚಂದ್ರನಾಥ ಸ್ವಾಮಿ ಬಸದಿ ಬಳಿ ಕಳಸ– ಕಾರ್ಕಳ ದಾನಶಾಲಾ ಮಠದ ಪೀಠ ಸ್ಥಾಪನೆ ಬುಧವಾರ ನಡೆಯಿತು.
ಮಂಗಳವಾರ ರಾತ್ರಿ ಮಠದ ಕಟ್ಟಡದ ವಾಸ್ತು ಹೋಮ ನಡೆಯಿತು. ಬುಧವಾರ ಬೆಳಿಗ್ಗೆ ಕಾರ್ಕಳ ದಾನಶಾಲಾ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಪೀಠಾರೋಹಣ ಮಾಡಿದರು.
ಬಳಿಕ ಆಶೀರ್ವಚನ ನೀಡಿದ ಅವರು, ಭೈರವರಸರ ಕಾಲದಲ್ಲಿ ಕಳಸ ಮತ್ತು ಕಾರ್ಕಳ ಎಂಬ ಎರಡು ಪೀಠಗಳಿಂದ ಮಠಾಧಿಪತಿಗಳು ಧರ್ಮರಕ್ಷಣೆ ಮಾಡುತ್ತಿದ್ದರು. ಆ ಕಾಲದಲ್ಲಿ ಉಚ್ರಾಯ ಸ್ಥಿತಿಯಲ್ಲಿದ್ದ ಧರ್ಮ ಹಲವಾರು ಏಳುಬೀಳುಗಳನ್ನು ಕಂಡು ಈಗ ಮತ್ತೆ ಉನ್ನತ ಸ್ಥಾನಕ್ಕೆ ಏರುತ್ತಿದೆ. ಕಳಸ– ಕಾರ್ಕಳ ಪ್ರಾಂತ್ಯಕ್ಕೆ ಒಳಪಟ್ಟ ಜೈನ ಸಮುದಾಯ ಹಲವಾರು ಬಸದಿ ನಿರ್ಮಾಣ ಮಾಡುತ್ತಿದೆ. ಕಳಸದಲ್ಲಿ ಮಠದ ಪೀಠ ಸ್ಥಾಪನೆಯೂ ಇತಿಹಾಸ ಮರುಸೃಷ್ಟಿ ಮಾಡುವ ಕೆಲಸ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ. ಧರಣೇಂದ್ರಯ್ಯ, ಪದಾಧಿಕಾರಿಗಳಾದ ಅಣ್ಣಯ್ಯ, ನಿರ್ಮಲ್ ಕುಮಾರ್, ಅಜಿತ್ ಕುಮಾರ್, ಜಯಕೀತೀ, ಸುರೇಶ್, ಹರ್ಷೇಂದ್ರ, ಧರಣೇಂದ್ರ, ಭೋಜರಾಜ್, ಚಂದ್ರರಾಜಯ್ಯ, ಜಯಚಂದ್ರ, ಸರ್ವೋದಯ ತೀರ್ಥ ಸಮಿತಿ ಅಧ್ಯಕ್ಷ ಬ್ರಹ್ಮದೇವ, ಜ್ವಾಲಾಮಾಲಿನಿ, ಪದ್ಮಾಂಬ ಮಹಿಳಾ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.