
ಕಳಸ: ಇಲ್ಲಿನ ಅರಮನೆಮಕ್ಕಿ ಸಮೀಪದ ಕಾಫಿ ಕ್ಯೂರಿಂಗ್ ಭೂಮಿಯನ್ನು ಕಳಸ ಗ್ರಾಮ ಪಂಚಾಯಿತಿ ಸೋಮವಾರ ಸ್ವಾಧೀನಪಡಿಸಿಕೊಂಡಿದೆ.
2019ರಿಂದ 2024ರವರೆಗಿನ ಐದು ವರ್ಷದ ಅವಧಿಗೆ ಈ ಭೂಮಿಯನ್ನು ನೆಲಬಾಡಿಗೆ ರೂಪದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ನೀಡಲಾಗಿತ್ತು. ಬಾಡಿಗೆ ಕರಾರಿನ ಅವಧಿ ಮುಗಿದ ಮೇಲೆ ಬಾಡಿಗೆ ಅವಧಿ ವಿಸ್ತರಿಸಲು ಪಂಚಾಯಿತಿ ನಿರಾಕರಿಸಿತ್ತು. ಈ ಬಗ್ಗೆ ಬಾಡಿಗೆದಾರ ಬಾಲಕೃಷ್ಣ ಹೈಕೋರ್ಟ್ ಮೆಟ್ಟಿಲು ಏರಿದ್ದರು.
ಹೈಕೋರ್ಟಿನಲ್ಲಿ ಬಾಡಿಗೆದಾರರ ಅರ್ಜಿ ವಜಾ ಆಗಿದ್ದು, ಪಂಚಾಯಿತಿಯು ಜಾಗನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿತ್ತು. ಸೋಮವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ ಕುಮಾರಿ, ಉಪಾಧ್ಯಕ್ಷ ಭಾಸ್ಕರ್, ಅಭಿವೃದ್ಧಿ ಅಧಿಕಾರಿ ಕವೀಶ್ ಮತ್ತು ಸಿಬ್ಬಂದಿ, ಸದಸ್ಯರಾದ ಸಂತೋಷ್, ವೀರೇಂದ್ರ, ರಂಗನಾಥ್, ಕಾರ್ತಿಕ ಶಾಸ್ತ್ರಿ, ಸುಜಯಾ, ರತಿ, ಸುಂದರ ಶೆಟ್ಟಿ ಮತ್ತಿತರರ ಸಮ್ಮುಖದಲ್ಲಿ ಕ್ಯೂರಿಂಗ್ ಗೇಟಿಗೆ ಬೀಗ ಹಾಕಲಾಯಿತು.
ಏಳು ದಿನಗಳ ಒಳಗೆ ಪಂಚಾಯಿತಿಗೆ ಲಿಖಿತ ರೂಪದಲ್ಲಿ ಪತ್ರ ಬರೆದು ಈ ಕಟ್ಟಡದ ಒಳಗೆ ಇರುವ ವಸ್ತುಗಳನ್ನು ತೆರವು ಮಾಡಬಹುದಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್ ತಿಳಿಸಿದ್ದಾರೆ.
ಈ ಜಾಗವನ್ನು ತೆರವು ಮಾಡಿ ಸುಸಜ್ಜಿತ ಬಸ್ ನಿಲ್ದಾಣ ಮಾಡುವ ಪ್ರಸ್ತಾಪ ಇದೆ ಎಂದು ಪಂಚಾಯಿತಿ ಸದಸ್ಯರಾದ ಸಂತೋಷ್, ರಂಗನಾಥ್ ತಿಳಿಸಿದರು.
ಕಾಂಗ್ರೆಸ್ ಮುಖಂಡರೊಬ್ಬರ ಸುಪರ್ದಿನಲ್ಲಿ ಈ ಕ್ಯೂರಿಂಗ್ ಕಾರ್ಯ ನಡೆಯುತ್ತಿದ್ದರಿಂದ ಕಟ್ಟಡದ ಸ್ವಾಧೀನದ ವೇಳೆಗೆ ಬಹಳಷ್ಟು ಜನರು ಕುತೂಹಲದಿಂದ ನೆರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.