ADVERTISEMENT

ಅಡಿಕೆ ಬೆಳೆಗಾರರಿಗೆ ಫಸಲು ನಷ್ಟದ ಭೀತಿ

ಮಲೆನಾಡಿನಲ್ಲಿ ಸಂಸ್ಕರಣೆಗೆ ಅಡ್ಡಿಯಾದ ಮಳೆ– ಅಡಿಕೆಯ ಗುಣಮಟ್ಟ ಕೆಡುವ ಆತಂಕ

ರವಿ ಕೆಳಂಗಡಿ
Published 17 ಅಕ್ಟೋಬರ್ 2021, 4:04 IST
Last Updated 17 ಅಕ್ಟೋಬರ್ 2021, 4:04 IST
ಕಳಸ ಸಮೀಪದ ತೋಟವೊಂದರಲ್ಲಿ ಅಡಿಕೆ ಸಂಸ್ಕರಣೆಯ ಕೆಲಸ ಭರದಿಂದ ನಡೆದಿರುವುದು.
ಕಳಸ ಸಮೀಪದ ತೋಟವೊಂದರಲ್ಲಿ ಅಡಿಕೆ ಸಂಸ್ಕರಣೆಯ ಕೆಲಸ ಭರದಿಂದ ನಡೆದಿರುವುದು.   

ಕಳಸ: ಈ ತಿಂಗಳ ಆರಂಭದಿಂದಲೂ ಪ್ರತಿದಿನ ಬೀಳುತ್ತಿರುವ ಮಳೆಯು ತಾಲ್ಲೂಕಿನ ಅಡಿಕೆ ಬೆಳೆಗಾರರ ಮುಖದಲ್ಲಿ ಚಿಂತೆಯ ಗೆರೆಗಳನ್ನು ಆಳವಾಗಿಯೇ ಮೂಡಿಸುತ್ತಿದೆ. ಅಡಿಕೆ ಕೊಯಿಲಿನ ಈ ದಿನಗಳಲ್ಲಿ ಸಂಸ್ಕರಣೆಗೆ ಅಡ್ಡಿ ಉಂಟು ಮಾಡುತ್ತಿರುವ ಮಳೆರಾಯ ಬೆಳೆಗಾರರಿಗೆ ಆರ್ಥಿಕ ನಷ್ಟವನ್ನು ತರುವುದು ನಿಶ್ಚಿತವಾಗಿದೆ.

ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲೂ ಅಡಿಕೆ ಸರ್ವವ್ಯಾಪಿಯಾದ ವಾಣಿಜ್ಯ ಬೆಳೆ. ಅಕ್ಟೋಬರ್ ಮೊದಲ ವಾರದಿಂದ ಆರಂಭವಾಗುವ ಅಡಿಕೆ ಸಂಸ್ಕರಣೆ ಈ ಬಾರಿ ಮಳೆಯಿಂದಾಗಿ ಬಹುತೇಕ ತೋಟಗಳಲ್ಲಿ ಇನ್ನೂ ಆರಂಭವಾಗಿಲ್ಲ. ಪರಿಣಾಮವಾಗಿ ಹೆಚ್ಚಿನ ತೋಟಗಳಲ್ಲಿ ಅಡಿಕೆಯ ಮೊದಲ ಗೊನೆ ಹಣ್ಣಾಗಿ ಕೆಂಪು ಗೋಟು ಆಗಿದೆ. ಅಡಿಕೆ ಸುಲಿದು ಬೇಯಿಸಿ ಸಂಸ್ಕರಣೆ ಮಾಡುವ ಸಂಪ್ರದಾಯದ ಕಳಸದಲ್ಲಿ ಮೊದಲ ಗೊನೆಗಳೆಲ್ಲ ಗೋಟು ಆದ ಕೂಡಲೇ ದೊಡ್ಡ ಪ್ರಮಾಣದ ನಷ್ಟವೇ ಆಗುತ್ತದೆ.

ಸಾಮಾನ್ಯವಾಗಿ ಮೊದಲ ಎರಡು ಗೊನೆಗಳೂ ಶೇ 65-70ರ ಪ್ರಮಾಣದ ಅಡಿಕೆಯನ್ನು ಬೆಳೆಗಾರರಿಗೆ ಒದಗಿಸುತ್ತದೆ. ಆದರೆ, ಈ ಗೊನೆಗಳು ಕೊಯಿಲಿಗೂ ಮುನ್ನವೇ ಹಣ್ಣಾಗಿ ಗೋಟಾದರೆ ಅದರಿಂದ ಉತ್ಪತ್ತಿ ಆಗುವ ಗೊರಬಲು ಅಡಿಕೆಯ ಗುಣಮಟ್ಟ ಕನಿಷ್ಠ ಆಗಿರುತ್ತದೆ. ಸಕಾಲದಲ್ಲಿ ಕೊಯಿಲು ಮಾಡಿದರೆ ರಾಶಿ ಇಡಿ ಮಾದರಿಯು ಕ್ವಿಂಟಲ್‍ಗೆ ₹ 45 ಸಾವಿರವರೆಗೂ ಬೆಲೆ ಪಡೆಯುತ್ತದೆ. ಆದರೆ, ಗೊರಬಲು ಅಡಿಕೆ ಕ್ವಿಂಟಲ್‌ಗೆ ₹ 35 ಸಾವಿರ ಬೆಲೆ ಪಡೆಯುವುದು ಕೂಡ ಕಷ್ಟ ಎಂದು ಬೆಳೆಗಾರರು ಮಳೆ ತಂದ ನಷ್ಟವನ್ನು ತೆರೆದಿಡುತ್ತಾರೆ.

ADVERTISEMENT

ಇನ್ನು ಈಗಾಗಲೇ ಅಡಿಕೆ ಕೊಯ್ಲು ಆರಂಭಿಸಿರುವ ಬೆಳೆಗಾರರು ಪ್ರತಿದಿನ ಮಧ್ಯಾಹ್ನ ಮಳೆ ಸುರಿದಾಗ ಅಡಿಕೆಯನ್ನು ರಾಶಿ ಮಾಡುವ, ತುಂಬಿ ಇಡುವ ಪರಿಶ್ರಮದ ಕೆಲಸದಿಂದ ಸೋತಿ
ದ್ದಾರೆ. ಮಳೆಯಿಂದಾಗಿ ಅಡಿಕೆ ಸಂಸ್ಕರ ಣೆಗೆ ಹೆಚ್ಚಿನ ಕಾರ್ಮಿಕರ ಬಳಕೆ ಆಗುತ್ತಿದೆ. ಇದು ಉತ್ಪಾದನಾ ವೆಚ್ಚ ಏರಿಸಿ ಲಾಭದ
ಅಂಶ ಕಡಿಮೆ ಆಗಿಸುತ್ತದೆ.

‘ಒಂದೆರಡು ದಿನ ಬಿಸಿಲಿಗೆ ಒಣಗಿದ ಅಡಿಕೆಗೆ ಮಳೆ ನೀರು ಬಿದ್ದರೆ ಅಡಿಕೆಯೆಲ್ಲ ಬೂಸ್ಟ್‌ ಹಿಡಿದು ಹೂವು ಬರುತ್ತದೆ. ಅದನ್ನು ಮತ್ತೆ ಚೊಗರಿಗೆ ಹಾಕಿ ಬಿಸಿಲಿಗೆ ಹರಡುವ ದುಪ್ಪಟ್ಟು ಕೆಲಸ ಆಗುತ್ತದೆ. ಇದರಿಂದ ಅಡಿಕೆ ಗುಣಮಟ್ಟ ಕೆಡುವ ಅಪಾಯವೂ ಇದೆ’ ಎಂದು ಬೆಳೆಗಾರ ಮಹೇಂದ್ರ ಹೇಳುತ್ತಾರೆ.

ಅಕ್ಟೋಬರ್ ತಿಂಗಳ ಮೊದಲ 10 ದಿನ ಎಡೆಬಿಡದೆ ಸುರಿದ ಮಳೆಯು ನಿಂತು ಇನ್ನೇನು ಬಿಸಿಲು ಬಂತು ಎನ್ನುವಾಗ ಮತ್ತೆ ಮಳೆ ಕಾಡುತ್ತಿದೆ. ಉತ್ತಮ ಧಾರಣೆಯ ಕಾರಣಕ್ಕೆ ಅತ್ಯಂತ ಹುರುಪಿನಿಂದ ಅಡಿಕೆ ಸಂಸ್ಕರಣೆಗೆ ಮುಂದಾಗಿದ್ದ ಬೆಳೆಗಾರರ ಮನಸ್ಥೈರ್ಯವನ್ನೇ ಹವಾಮಾನ ವೈಪರೀತ್ಯ ಕುಂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.