
ಕಳಸ: ಪುರುಷರ ಬೆಂಬಲ ಇದ್ದರೆ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು ಎಂದು ಶಾಸಕಿ ನಯನಾ ಮೋಟಮ್ಮ ಅಭಿಪ್ರಾಯಪಟ್ಟರು.
ಇಲ್ಲಿನ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ 40ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಮನೆಯಿಂದ ಹೊರಬರುವುದೇ ಕಷ್ಟವಿದ್ದ ಕಾಲದಲ್ಲಿ, ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ತನ್ನ ಸಮಾಜಮುಖಿ ಕೆಲಸ ಆರಂಭಿಸಿದೆ. 40 ವರ್ಷಗಳಲ್ಲಿ ಈ ಮಹಿಳಾ ಮಂಡಳಿಯು ಅವಿರತವಾಗಿ ಕೆಲಸ ಮಾಡಿದೆ ಎಂದರು.
ಕರ್ನಾಟಕ ಹಿಂದುಳಿದ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಮಾತನಾಡಿ, ದಲಿತ ಮತ್ತು ಬುಡಕಟ್ಟು ವಿದ್ಯಾರ್ಥಿನಿಯರು ವಿದ್ಯೆಯ ಬಗ್ಗೆ ಗಮನ ಹರಿಸಿ. ಕೊನೆವರೆಗೂ ನಿಮ್ಮ ಜೊತೆಗೆ ಉಳಿಯುವುದು ನಿಮ್ಮ ವಿದ್ಯೆ ಮಾತ್ರ ಎಂದರು.
ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ವಿದುಷಾ, ಫಾರಿಸ್, ಶಾಝ್ ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾದ ಕಳಸ ಕೆಪಿಎಸ್ ಶಾಲೆಯ ಶಿವಾನಂದ್ ಮತ್ತು ತಂಡದವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಮಂಡಳಿ ಅಧ್ಯಕ್ಷೆ ಕಿರಣ ಬ್ರಹ್ಮದೇವ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಚಂಪಾ ರಾವ್, ಸರೋಜಿನಿ ಆಚಾರ್, ಶೋಭಾ ದೇಸಾಯಿ, ಸುನೀತಾ ಶೆಣೈ, ಫಾತಿಮಾ ರೆಹಮಾನ್ ಭಾಗವಹಿಸಿದ್ದರು. ಆನಂತರ ಮಹಿಳೆಯರು ಸಾಂಸ್ಕೃತಿಕ ಪ್ರದರ್ಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.