ADVERTISEMENT

ಕಾಳಿಂಗ: ಎರಡೂ ಕೇಂದ್ರಗಳ ಬಗ್ಗೆ ತನಿಖೆಯಾಗಲಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:18 IST
Last Updated 18 ಸೆಪ್ಟೆಂಬರ್ 2025, 4:18 IST
ಕಲ್ಕುಳಿ ವಿಠ್ಠಲ ಹೆಗಡೆ
ಕಲ್ಕುಳಿ ವಿಠ್ಠಲ ಹೆಗಡೆ   

ಚಿಕ್ಕಮಗಳೂರು: ಆಗುಂಬೆ ಸಮೀಪದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾಳಿಂಗ ಸರ್ಪದ ಸಂಶೋಧನೆ ನಡೆಸುತ್ತಿರುವ ಎರಡು ಸಂಸ್ಥೆಗಳ ಬಗ್ಗೆಯೂ ಅರಣ್ಯ ಇಲಾಖೆ ತನಿಖೆ ನಡೆಸಬೇಕು ಎಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ ಹೆಗಡೆ ಒತ್ತಾಯಿಸಿದ್ದಾರೆ.

‘ಜೀವ ವೈವಿಧ್ಯದ ಶ್ರೇಷ್ಠ ಸ್ಥಳವಾದ ಆಗುಂಬೆಯಲ್ಲಿ ಸಂಶೋಧನೆ ಹೆಸರಿನಲ್ಲಿ ನಡೆಸುತ್ತಿರುವ ವ್ಯವಹಾರ ಮತ್ತು ಜೀವ ಸಂಪತ್ತಿನ ಲೂಟಿಯ ಕುರಿತು ಇತ್ತೀಚೆಗೆ ಕೆಲ ಗೆಳೆಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು 2005ರಲ್ಲಿ ಪ್ರಾರಂಭವಾದ ಆಗುಂಬೆ ರೈನ್‌ಪಾರೆಸ್ಟ್‌ ರೀಸರ್ಚ್‌ ಸ್ಟೇಷನ್ (ಎಆರ್‌ಆರ್‌ಎಸ್‌) ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಎಲ್ಲ ವ್ಯವಹಾರಗಳಿಗೆ ಮೂಲ ಕಾರಣವಾಗಿರುವ ಗೌರಿ ಶಂಕರ ಎಂಬ ಸರ್ಪ ಸಂಶೋಧಕರ ಬಗ್ಗೆ ತನಿಖೆ ನಡೆಸದಿರುವುದು ಅನುಮಾಗಳಿಗೆ ಕಾರಣವಾಗಿದೆ’ ಎಂದಿದ್ದಾರೆ.

ಸಂಶೋಧನೆಯ ಹೆಸರಿನಲ್ಲಿ ಕಾಳಿಂಗ ಹಾವುಗಳನ್ನು ಹಿಂಸಿಸುವ ಮೂಲಕ ನೇರವಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸುತ್ತಿರುವ ಕಾಳಿಂಗ ಸೆಂಟರ್ ಫಾರ್ ರೈನ್‌ಫಾರೆಸ್ಟ್‌ ಎಕಾಲಜಿ (ಕೆಸಿಆರ್‌ಇ) ವಿರುದ್ಧ ತನಿಖೆಗೆ ಆದೇಶ ನೀಡಿಲ್ಲ. ವಿದೇಶಿ ಮೂಲದ ಹಣದಿಂದ ನಡೆಯುತ್ತಿರುವ ಈ ಎರಡೂ ಖಾಸಗಿ ಸಂಶೋಧನಾ ಕೇಂದ್ರಗಳ ಚಟುವಟಿಕೆಗಳನ್ನು ಬಂದ್‌ ಮಾಡಿಸಿ ತನಿಖೆಗೊಳಪಡಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ADVERTISEMENT

‘ಎಲ್ಲ ಕಾನೂನುಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಈ ಚಟುವಟಿಕೆಗಳನ್ನು ನೋಡಿಕೊಂಡು ಸುಮ್ಮನಿದ್ದಾರೆ. ಕಾಳಿಂಗ ಹಾವುಗಳ ಗೂಡುಗಳಿಂದ ಮೊಟ್ಟೆ ಕದ್ದು ತಂದು, ಕೃತಕವಾಗಿ ಕೋಳಿ ಮೊಟ್ಟೆ ಮರಿ ಮಾಡುವ ಮೇಷಿನ್‌ನಲ್ಲಿ ಮರಿ ಮಾಡುತ್ತಿದ್ದಾರೆ. ಇದರಿಂದ ಏನೆಲ್ಲಾ ಅನಾಹುತವಾಗಿದೆ ಎಂದು ತಿಳಿಯಲು ಮತ್ತೊಂದು ಸಂಶೋಧನೆ ಮಾಡಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಹಾವುಗಳನ್ನು ಮಾತ್ರ ತಿಂದು ಬದುಕುವ ಕಾಳಿಂಗ ಸರ್ಪ ಸಂಖ್ಯೆ ಈ ಭಾಗದಲ್ಲಿ ಹೆಚ್ಚುತ್ತಿದೆ. ಸಣ್ಣಪುಟ್ಟ ಜಾತಿಯ ಹಾವುಗಳು ಅಳಿವಿನಂಚಿಗೆ ಸರಿದಿವೆ. ಸಂರಕ್ಷಣೆಯ ಹೆಸರಿನಲ್ಲಿ ಯಾವುದೇ ಒಂದು ಜೀವಿಯ ಸಂಖ್ಯೆಯನ್ನು ಲೆಕ್ಕಾಚಾರವಿಲ್ಲದೆ ಹೆಚ್ಚಿಸುವುದು ಪರಿಸರದಲ್ಲಿನ ಆಹಾರ ಚಕ್ರಕ್ಕೆ ದೊಡ್ಡ ಹೊಡೆತ ನೀಡುತ್ತದೆ. ಇದರಿಂದ ಜೀವ ನಾಶವಾಗುತ್ತದೆ. ಇಷ್ಟು ಸಾಮಾನ್ಯ ಜ್ಞಾನ ಅರಣ್ಯ ಇಲಾಖೆ ಇಲ್ಲದ ಕಾರಣ ಹುಲಿ, ಆನೆಗಳು ಊರಿಗೆ ಬರುತ್ತಿವೆ ಎಂದಿದ್ದಾರೆ.

‘ವಿದೇಶದಿಂದ ಹಣ ತಂದು ಇಲ್ಲಿ ಸಂಶೋಧನೆ ನಡೆಸುವವರ ಹಿತಾಸಕ್ತಿಗಳೇನು, ಅವರೇಕೆ ಇಲ್ಲಿಯ ಜೀವ ವೈವಿಧ್ಯದ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು. ಅರಣ್ಯ ಇಲಾಖೆ ಇನ್ನು ಮುಂದಾದರೂ ಪಶ್ಚಿಮ ಘಟ್ಟದಲ್ಲಿ ಯಾವುದೇ ಸಂಶೋಧನೆ, ಅಧ್ಯಯನಕ್ಕೆ ಅವಕಾಶ ನೀಡುವ ಮುನ್ನ ಪೂರ್ವಪರ ಪರಿಶೀಲಿಸಬೇಕು. ಸ್ಥಳೀಯ ಅರಣ್ಯವಾಸಿಗಳ ಒಪ್ಪಿಗೆ ಪಡೆದು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.