
ಮೂಡಿಗೆರೆ: ಮಲೆನಾಡಿನಲ್ಲಿ ಸುಗ್ಗಿಹಬ್ಬಗಳು ಪ್ರಾರಂಭವಾದ ಬೆನ್ನಲ್ಲೇ ಹೂವಿನ ಬೆಲೆಯು ಗಗನಕ್ಕೇರುತ್ತಿದ್ದು ಕಾಕಡ, ಕನಕಾಂಬರ ಸೇವಂತಿಗೆ ಬೆಳೆಯು ಲಾಭದ ಹಾದಿಯಲ್ಲಿ ಸಾಗುತ್ತಿದೆ.
ಪಟ್ಟಣದ ಕೆ.ಎಂ ರಸ್ತೆಯ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಹೂವಿನ ಮಾರುಕಟ್ಟೆಯಿದ್ದು, ಈ ಮಾರುಕಟ್ಟೆಗೆ ಕಡೂರು, ಬೇಲೂರು, ಸಕಲೇಶಪುರ, ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರು, ತುಮಕೂರು ಭಾಗದಿಂದ ಹೂವು ಸರಬರಾಜು ಮಾಡಲಾಗುತ್ತದೆ. ಸ್ಥಳೀಯವಾಗಿಯೂ ತಾಲ್ಲೂಕಿನ ಗಡಿ ಭಾಗಗಳಲ್ಲಿ ಕಾಕಡ, ಕನಕಾಂಬರ, ಸೇವಂತಿಗೆಯನ್ನು ಬೆಳೆದು ಮಾರುಕಟ್ಟೆಗೆ ಪೂರೈಕೆ ಮಾಡಲಾಗುತ್ತದೆ. ಪಟ್ಟಣಕ್ಕೆ ಬಂದ ಹೂವನ್ನು ಇಲ್ಲಿಂದ ಬಣಕಲ್, ಜನ್ನಾಫುರ ಸೇರಿದಂತೆ ವಿವಿಧ ಹೋಬಳಿ ಕೇಂದ್ರಗಳಿಗೆ ಹಾಗೂ ಉಜಿರೆ, ಬೆಳ್ತಂಗಡಿ, ಬಂಟ್ವಾಳ, ಉಡುಪಿ, ಕಾರ್ಕಳ, ಮೂಡಬಿದರೆವರೆಗೂ ಸ್ಥಳೀಯ ವರ್ತಕರು ಹೂವನ್ನು ಪೂರೈಕೆ ಮಾಡುತ್ತಾರೆ.
ಜನವರಿ ಪ್ರಾರಂಭದಲ್ಲಿ ಕುಚ್ಚು (ಹತ್ತು ಮಾರು) ಒಂದಕ್ಕೆ ₹600 ಕ್ಕೆ ಇಳಿಕೆಯಾಗಿದ್ದ ಸೇವಂತಿಗೆಯು, ಹದಿನೈದು ದಿನಗಳಲ್ಲಿ ₹800 ರಿಂದ ₹900 ರವರೆಗೆ ಮಾರಾಟವಾಗುತ್ತಿದೆ. ಕಾಕಡ ಬೆಳೆಯು ಕಡಿಮೆಯಾಗಿದ್ದು, ಕೆ.ಜಿಗೆ ₹1200 ರಿಂದ ₹1300 ರವರೆಗೂ ಮಾರಾಟವಾಗುತ್ತಿದೆ. ಒಂದು ಕೆ.ಜಿ ಕಾಕಡದಲ್ಲಿ 20 ಮಾರು ಹೂವು ಕಟ್ಟಬಹುದಾಗಿದೆ. ಕನಕಾಂಬರ ಕೆ.ಜಿಗೆ ₹1800 ರಿಂದ ₹2 ಸಾವಿರದವರೆಗೂ ಮಾರಾಟ ಮಾಗುತ್ತಿದ್ದು, ಕನಕಾಂಬರವು ದುಬಾರಿಯಾಗಿದ್ದರೂ ಹೂವಿನ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಿಲ್ಲದ ಕಾರಣ ವರ್ತಕರು ಹೂವಿಗೆ ಪರದಾಡುವಂತಾಗಿದೆ.
‘ಬೇಸಿಗೆ ಪ್ರಾರಂಭದಲ್ಲಿ ಮಲೆನಾಡಿನಲ್ಲಿ ಹೂವಿನ ಪೂರೈಕೆ ಸಹಜವಾಗಿಯೇ ಕಡಿಮೆಯಿರುತ್ತದೆ. ಹೊರ ಪ್ರದೇಶಗಳಲ್ಲೂ ಹೂವಿನ ಬೆಳೆ ಕಡಿಮೆಯಾಗುವುದರಿಂದ ಈ ವೇಳೆ ದರವು ಹೆಚ್ಚಾಗಿರುತ್ತದೆ. ಮಲೆನಾಡಿನಲ್ಲಿ ಚೆಂಡುಹೂವು, ಕಾಕಡ, ಕನಕಾಂಬರ, ಸೇವಂತಿಗೆಯನ್ನು ಬೆಳೆಯಬಹುದಾಗಿದೆ. ಹೂವಿನ ಬೆಳೆಯಲ್ಲಿ ನಿರ್ವಹಣೆ ವೆಚ್ಚವೇ ಹೆಚ್ಚಾಗುತ್ತದೆ. ಹೂವು ಕೀಳುವುದರಿಂದ ಮಾರುಕಟ್ಟೆಗೆ ಸಾಗಿಸುವರೆಗೂ ದುಬಾರಿ ವೆಚ್ಚವಾಗುವುದರಿಂದ ಹೂವಿನ ದರ ಇಳಿಕೆಯಾಗುವುದು ಕಷ್ಟ. ಇದರಿಂದ ರೈತರಿಗೆ ನಷ್ಟವಾಗುತ್ತದೆ.
ರೈತರಿಗಿಲ್ಲ ಲಾಭ: ಸ್ಥಳೀಯವಾಗಿ ಬೆಳೆದ ಹೂವನ್ನು ಹೊರಗಿನ ರೈತರು ಇಡೀ ತೋಟವನ್ನೇ ಗುತ್ತಿಗೆ ಪಡೆಯುವುದರಿಂದ ಹೂವಿನ ದರ ಹೆಚ್ಚಾಗಿದ್ದರೂ ರೈತರಿಗೆ ಅಷ್ಟೇನು ಲಾಭ ಸಿಗುವುದಿಲ್ಲ’ ಎನ್ನುತ್ತಾರೆ ಹೂವಿನ ಬೆಳೆಗಾರ ಗೆಂಡೆಹಳ್ಳಿ ಪುರದ ಭರತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.