ADVERTISEMENT

ಕಂಚಿನಕಲ್ ದುರ್ಗಕ್ಕೆ ದುರ್ಗಮ ರಸ್ತೆ

ದಶಕದಿಂದ ಹದಗೆಟ್ಟಿರುವ ರಸ್ತೆಗೆ ಕಾಯಕಲ್ಪ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 16:13 IST
Last Updated 14 ನವೆಂಬರ್ 2022, 16:13 IST
ಕಂಚಿನಕಲ್ ದುರ್ಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ
ಕಂಚಿನಕಲ್ ದುರ್ಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ   

ಆಲ್ದೂರು: ಸಮೀಪದ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿನಕಲ್ ದುರ್ಗ ಗ್ರಾಮದ ಮುಖ್ಯ ರಸ್ತೆ ದಶಕಗಳಿಂದ ಹದಗೆಟ್ಟ ಸ್ಥಿತಿಯಲ್ಲಿದ್ದು, ಸಂಚಾರ ದುಸ್ತರವಾಗಿದೆ.

ಇಲ್ಲಿನ ಜನವಸತಿಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಜನರಿದ್ದು, ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಇವರಿಗೆ ಸಂಪರ್ಕ ಕಲ್ಪಿಸುವ 3 ಕಿ.ಮೀ. ಉದ್ದ ರಸ್ತೆಯ ಪರಿಸ್ಥಿತಿ ಹೇಳತೀರದಾಗಿದೆ. ಇದು ಕೆಸುವಿನ ಹಕ್ಲು, ಕೆರೆಹಕ್ಲು, ದುರ್ಗಾ ಗ್ರಾಮಗಳಿಗೂ ಸಂಪರ್ಕ ರಸ್ತೆಯಾಗಿದೆ. ಮುಳ್ಳಪ್ಪ ಸ್ವಾಮಿ ಮಠಕ್ಕೆ ಭೇಟಿ ನೀಡಲು ಇದೇ ರಸ್ತೆಯನ್ನು ಭಕ್ತರು ಅವಲಂಬಿಸಿದ್ದಾರೆ. ರೈತರು ಕೃಷಿಗಾಗಿ, ವಿದ್ಯಾರ್ಥಿಗಳು ಶಾಲಾ– ಕಾಲೇಜಿಗಾಗಿ, ರೋಗಿಗಳು ಆಸ್ಪತ್ರೆಗಾಗಿ, ನೌಕರರು– ಕಾರ್ಮಿಕರು ಕೆಲಸಕ್ಕೆ ಪಟ್ಟಣಕ್ಕೆ ಬರಲು ಇದೇ ರಸ್ತೆಯನ್ನು ಬಳಸುವ ಅನಿವಾರ್ಯತೆ ಇದ್ದು, ಪರಿಸ್ಥಿತಿ ಅಧೋಗತಿಗೆ ಇಳಿದಿದೆ.

ಈ ರಸ್ತೆಗೆ ಮಂಜೂರು ಮಾಡುವಷ್ಟು ಅನುದಾನ ಇಲ್ಲ ಎಂದು ಸ್ಥಳೀಯಾಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಈ ಹಿಂದೆ ರಸ್ತೆಗೆ ಡಾಂಬರೀಕರಣವಾಗಿದ್ದರೂ, ಈಗ ಸಂಪೂರ್ಣ ಹದಗೆಟ್ಟು ಹೋಗಿದೆ ಶೀಘ್ರವೇ ರಸ್ತೆ ನಿರ್ಮಿಸಿ ಎಂದು ಗ್ರಾಮದ ರಾಜೇಶ್, ರಮೇಶ್, ಕೃಷ್ಣಪ್ಪ, ಪರಮೇಶ್, ಲಕ್ಷ್ಮಣಗೌಡ, ಆದರ್ಶ್, ಸಂತೋಷ್, ಕಿರಣ್ ಹೆಗಡೆ ಮತ್ತು ಅನಿಲ್ ಹೆಗಡೆ ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.