
ಮೂಡಿಗೆರೆ: ನಿತ್ಯ ಕನ್ನಡ ಭಾಷೆ ಬಳಸುವ ಜತೆಗೆ ಭಾಷೆಯ ಬಗ್ಗೆ ಅಭಿಮಾನ ಮೂಡಿಸಿಕೊಂಡಾಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ರಾಷ್ಟೀಯ ಹಬ್ಬಗಳ ಆಚರಣ ಸಮಿತಿಯಿಂದ ಶನಿವಾರ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
‘ನಮ್ಮ ಹಿರಿಯರು ಸರಳ ಹಾಗೂ ಪ್ರೀತಿಯಿಂದ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಇದೇ ಮಾದರಿ ಅನುಸರಿಸಿ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಅಲ್ಲದೇ ಯುವ ಜನತೆ ಇಂದಿನ ತಂತ್ರಜ್ಞಾನ ಯುಗಕ್ಕೆ ಮಾರುಹೋಗಿದ್ದಾರೆ. ಹಾಗಾಗಿ ವಾಟ್ಸ್ಆಪ್, ಫೇಸ್‌ಬುಕ್, ಇನ್ ಸ್ಟಾಗ್ರಾಮ್‌ಗಳಲ್ಲಿ ಕನ್ನಡ ಭಾಷೆ, ನಾಡು, ನೆಲದ ಬಗ್ಗೆ ಜಾಗೃತಿ ಮೂಡಿಸುವಂತಹ ವಿಷಯವನ್ನು ಹೆಚ್ಚಾಗಿ ಅಳವಡಿಸುವ ಅವಶ್ಯಕತೆ ಇದೆ’ ಎಂದು ಹೇಳಿದರು.
‘ಪಟ್ಟಣದಲ್ಲಿ ಪ್ರತಿದಿನ ಕಸ ಸಂಗ್ರಹಿಸುವ ವಾಹನ ಮನೆ ಬಾಗಿಲಿಗೆ ಬಂದರೂ ಜನರು ತಮ್ಮ ಜವಾಬ್ದಾರಿ ಮರೆತು, ರಸ್ತೆ ಬದಿಯಲ್ಲಿ ಕಸ ಹಾಕುವ ಮೂಲಕ ಪಟ್ಟಣದ ಸ್ವಚ್ಛತೆ ಹಾಳು ಮಾಡುತ್ತಿದ್ದಾರೆ. ಜನರೇ ಈಡೇರಿಸಿಕೊಳ್ಳುವಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕೆಂದು ತಮ್ಮ ಜವಾಬ್ದಾರಿ ಮರೆಯುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ಸ್ಥಿತಿಯಲ್ಲಿ ಮೂಡಿಗೆರೆ ಪಟ್ಟಣವನ್ನು ಪುರಸಭೆ ಮಾಡುವ ಮೂಲಕ ಸ್ಮಾರ್ಟ್ ಸಿಟಿಗೊಳಿಸಲು ಚಿಂತನೆ ನಡೆಸಲಾಗಿದೆ. ಆದರೆ ಜನರು ಮೊದಲು ಸ್ಮಾರ್ಟ್ ಆಗಬೇಕಿದೆ' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಲೋಕವಳ್ಳಿ ಬಡಾವಣೆ ಜನರಿಗೆ ಇ-ಸ್ವತ್ತು ದಾಖಲೆ ವಿತರಣೆ ಮಾಡಲಾಯಿತು. ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಬೆಥನಿ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶಿಸಿದರು.
ತಹಶೀಲ್ದಾರ್ ಎಸ್.ಅಶ್ವಿನಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಮಾಜಿ ಸಚಿವೆ ಮೋಟಮ್ಮ, ಪ.ಪಂ.ಅಧ್ಯಕ್ಷ ಕೆ.ವೆಂಕಟೇಶ್, ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸದಸ್ಯರಾದ ಹಂಜಾ, ಮನೋಜ್, ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ, ಸಿಪಿಐ ಕೆ.ವಿ. ರಾಜಶೇಖರ್, ಬಿಇಒ ಎನ್.ಎ. ಮೀನಾಕ್ಷಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಂಘ ಸಂಸ್ಥೆ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.