ADVERTISEMENT

ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಮನ್ನಣೆ ಸಿಗಬೇಕು: ಕೆ.ಆರ್.ಕುಮಾರ್

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:34 IST
Last Updated 25 ಡಿಸೆಂಬರ್ 2025, 6:34 IST
ಚಿಕ್ಕಮಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್ ಉದ್ಘಾಟಿಸಿದರು
ಚಿಕ್ಕಮಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್ ಉದ್ಘಾಟಿಸಿದರು   

ಚಿಕ್ಕಮಗಳೂರು: ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಮನ್ನಣೆ ಸಿಗಬೇಕು. ಕನ್ನಡಿಗರನ್ನು ಪ್ರೀತಿಯಿಂದ ಕಾಣುವ ಕೆಲಸ ಆಗಬೇಕು ಎಂದು ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್ ಹೇಳಿದರು.

ಕನ್ನಡ ಸೇನೆಯಿಂದ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ‘ಕನ್ನಡ ನಿತ್ಯೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಡಿದರು.

ರಾಜ್ಯದಲ್ಲಿ ಕನ್ನಡಿಗರಿಗೆ ಅಲ್ಲಲ್ಲಿ ಅವಮಾನವಾಗುತ್ತಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ರಾಜ್ಯೋತ್ಸವ ನಡೆಸಿದರೆ ಅಲ್ಲಿನ ಅಪಾರ್ಟ್‌ಮೆಂಟ್‌ ಕಮಿಟಿಗಳು ಕನ್ನಡಿಗರಿಗೆ ನೋಟಿಸ್ ನೀಡತ್ತಿದ್ದಾರೆ. ಇದು ಅತ್ಯಂತ ಬೇಸರದ ವಿಷಯ ಎಂದರು.

ADVERTISEMENT

ಹೊರ ರಾಜ್ಯದಿಂದ ಉದ್ಯೋಗ ಅರಿಸಿ ಬಂದವರು ನಾಡಿನ ಮಕ್ಕಳಿಗೆ ಗೌರವ ಕೊಡಬೇಕು. ಅದು ಅವರ ಕರ್ತವ್ಯ ಕೂಡ. ಇಲ್ಲದಿದ್ದರೆ ಇಡೀ ರಾಜ್ಯದಿಂದ ಹೊರ ತಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

‘ಚಿಕ್ಕಮಗಳೂರು ಪ್ರವಾಸಿ ತಾಣವಾದರೂ ಹಾಸನ–ಚಿಕ್ಕಮಗಳೂರು ರಸ್ತೆಯ ಸ್ಥಿತಿ ಕೆಟ್ಟದಾಗಿದೆ. ಸರಿಪಡಿಸಲು ಜನಪ್ರತಿನಿಧಿಗಳು ಮುಂದಾಗಬೇಕು. ಸ್ಥಳೀಯ ಸಮಸ್ಯೆ ಇದ್ದಾಗ ಅದರ ಪರವಾಗಿ ಕೈಜೋಡಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ’ ಎಂದರು. 

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ರಾಜ್ಯ ಅಖಂಡ ಕರ್ನಾಟಕವಾಗಿ ಉಳಿಯಲು ಕನ್ನಡ ಹೋರಾಟಗಾರರ ಪಾತ್ರ ದೊಡ್ಡದು. ಕನ್ನಡದ ಹೋರಾಟಗಾರರು ಇರುವ ತನಕ ಅಖಂಡ ಕರ್ನಾಟಕ ಉಳಿಯಲಿದೆ’ ಎಂದರು.

ಗೋಕಾಕ ತಾಲ್ಲೂಕು ಕರ್ನಾಟಕದಲ್ಲಿ ಉಳಿಯಲು 80ರ ದಶಕದಲ್ಲಿ ನಡೆಸಿದ ಹೋರಾಟ ಕಾರಣ. ಅಂದಿನ ಹೋರಾಟಗಾರರು ಅದರಲ್ಲೂ ಪ್ರಮುಖವಾಗಿ ಡಾ.ರಾಜ್‌ಕುಮಾರ್ ಅವರ ಪಾತ್ರ ದೊಡ್ಡದು. ಅದೇ ರೀತಿಯ ಕನ್ನಡಕ್ಕೆ ಪುನೀತ್ ರಾಜ್‌ಕುಮಾರ್‌ ನೀಡಿದ ಕೊಡುಗೆ ಅಪಾರ. ಇದರಿಂದಾಗಿಯೇ ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಭಾಷೆ ಜತೆಗೆ ಭೂಷಣ ಇರುತ್ತದೆ. ಅದರೊಂದಿಗೆ ಸಂಸ್ಕೃತಿಯೂ ಬೆಸದುಕೊಂಡಿರುತ್ತದೆ. ಭಾಷೆಯನ್ನು ಕಳೆದುಕೊಂಡರೆ ಭೂಷಣ ಮತ್ತು ಸಂಸ್ಕೃತಿ ಎರಡನ್ನೂ ಕಳೆದುಕೊಳ್ಳುತ್ತೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಎಲ್ಲಾ ಕನ್ನಡಪರ ಸಂಘಟನೆಗಳು ಒಟ್ಟಾಗಿ ಭಾಷೆಗೆ ಭವಿಷ್ಯದಲ್ಲಿ ಎರುವ ಸವಾಲುಗಳ ಬಗ್ಗೆ ವರ್ತಮಾನದಲ್ಲಿ ಅವಲೋಕನ ಮಾಡಬೇಕಾದ ಅವಶ್ಯತೆ ಇದೆ ಎಂದರು.

ಭಾಷೆಯ ಅಳಿವು–ಉಳಿವಿನ ಬಗ್ಗೆ ಚರ್ಚಿಸಲು ರಾಜ್ಯ ಜನಪ್ರತಿನಿಧಿಗಳು ಮತ್ತು ಅಡಳಿತ ನಡೆಸುವವರು ದುಂಡುಮೇಜಿನ ಸಭೆ ನಡೆಸುವ ಅಗತ್ಯವಿದೆ. ಕಾಯ್ದೆಯನ್ನು ಜಾರಿಗೆ ತಂದಾದರೂ ಸರಿ ಭಾಷೆ ಉಳಿಸಬೇಕಾಗಿದೆ ಎಂದು ಹೇಳಿದರು.

ಕನ್ನಡ ಶಕ್ತಿ ಕೇಂದ್ರದ ಡಾ.ಜೆ.ಪಿ.ಕೃಷ್ಣೇಗೌಡ, ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಚೈತ್ರಾಗೌಡ, ವಕ್ತಾರ ಹುಣಸೆಮಕ್ಕಿ ಲಕ್ಷ್ಮಣ್, ಆಟೊ ಘಟಕದ ಅಧ್ಯಕ್ಷ ಜಯಪ್ರಕಾಶ್, ನಗರ ಘಟಕದ ಅಧ್ಯಕ್ಷ ಸತೀಶ್, ಮುಖಂಡರಾದ ಕಳವಾಸೆ ರವಿ, ಅನ್ವರ್, ಶಂಕರಗೌಡ, ಪಾಲಾಕ್ಷಿ, ಹರೀಶ್ ಉಪಸ್ಥಿತರಿದ್ದರು.

ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೇಷ ತೊಟ್ಟ ಮಕ್ಕಳು
ಮೆರವಣಿಗೆಯಲ್ಲಿ ಕನ್ನಡ ಸೇನೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು

ಅದ್ದೂರಿ ಮೆರವಣಿಗೆ

ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಭುವನೇಶ್ವರಿ ದೇವಿಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ದೇವಿಯನ್ನು ಅಲಂಕೃತ ಬೆಳ್ಳಿ ರಥದಲ್ಲಿ ಕೂರಿಸಿ ನಗರದ ಹುಲಿಕೆರೆ ದೇವೇಗೌಡ ವೃತ್ತದಲ್ಲಿರುವ ಕನ್ನಡ ಸೇನೆ ಕಚೇರಿಯಿಂದ ಮೆರವಣಿಗೆ ಆರಂಭಿಸಲಾಯಿತು. ಪೂರ್ಣ ಕುಂಭ ಹೊತ್ತ ಮಹಿಳೆಯರು ಸಾಗಿದರು. ಟ್ರ್ಯಾಕ್ಟರ್‌ನಲ್ಲಿ ವೀರವನಿತೆಯರ ವೇ಼ಷಧಾರಿಗಳು ಗಮನ ಸೆಳದರು. ಕೊರಳಲ್ಲಿ ಕೆಂಪು ಹಳದಿ ಶಲ್ಯ ತಲೆಗೆ ಅದೇ ಬಣ್ಣದ ರುಮಾಲು ಧರಿಸಿ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವೀರಗಾಸೆ ಮಹಿಳೆಯರಿಂದ ಕೋಲಾಟ ಹುಲಿವೇಷ ಕರಡಿ ಕುಣಿತ ಹಳ್ಳಿವಾದ್ಯಗಳು ಮೆರವಣಿಗೆಗೆ ಮೆರಗು ನೀಡಿದ್ದವು. ಆಟೊ ಚಾಲಕರು ಕೂಡ ತಮ್ಮ ಆಟೊರಿಕ್ಷಾಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಎಂ.ಜಿ. ರಸ್ತೆಯಲ್ಲಿ ಸಾಗಿ ಬಂದ ಮೆರವಣಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಾರ್ವಜನಿಕರು ವೀಕ್ಷಿಸಿದರು.ಮೆರವಣಿಗೆಗೂ ಮುನ್ನ ಕನ್ನಡ ಸೇನೆ ಕಚೇರಿಯಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಿವೈಎಸ್‌ಪಿ ನಾಗರಾಜ್ ‘ಕನ್ನಡವು ಜೀವನದ ಅವಿಭಾಜ್ಯ ಅಂಗವಾಗಬೇಕು. ಪ್ರತಿನಿತ್ಯ ಕನ್ನಡ ಗೌರವಿಸುವ ಆರಾಧಿಸುವ ಗುಣವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.