ADVERTISEMENT

ಕನ್ನಡ ಶಾಲೆ ಮೇಲ್ದರ್ಜೆಯಲ್ಲಿ ಸೋತ ಸರ್ಕಾರ: ಡಾ. ಮೋಹನ್ ಆಳ್ವ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 13:43 IST
Last Updated 29 ಮಾರ್ಚ್ 2024, 13:43 IST
ಮೂಡಿಗೆರೆಯಲ್ಲಿ ಶುಕ್ರವಾರ ಪ್ರಾರಂಭವಾದ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಉದ್ಘಾಟಿಸಿದರು
ಮೂಡಿಗೆರೆಯಲ್ಲಿ ಶುಕ್ರವಾರ ಪ್ರಾರಂಭವಾದ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಉದ್ಘಾಟಿಸಿದರು   

ಮೂಡಿಗೆರೆ: ರಾಜ್ಯದಲ್ಲಿ ಕನ್ನಡ ಭಾಷೆಯ ಶಾಲೆಗಳನ್ನು ಮೇಲ್ದರ್ಜೆಗೇರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸೋತಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ  ಡಾ. ಮೋಹನ್ ಆಳ್ವ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶುಕ್ರವಾರದಿಂದ ಎರಡು ದಿನ ಆಯೋಜಿಸಿರುವ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಕನ್ನಡ ಭಾಷೆ ಗಟ್ಟಿಗೊಳಿಲು ಸಾಧ್ಯವಾಗುತ್ತದೆ. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂದು ಧೈರ್ಯದಿಂದ ಹೇಳಲು ಆಗುತ್ತಿಲ್ಲ. ಕನ್ನಡ ಶಾಲೆಗಳನ್ನು ಯಾವ ಮಟ್ಟಕ್ಕೆ ತಂದೊಡ್ಡಿದ್ದೇವೆಂದರೆ ಶಾಲೆಗೊಂದು ಶಿಕ್ಷಕರನ್ನು ಕೊಡಲಾಗದಷ್ಟು ವಿಫಲರಾಗಿದ್ದೇವೆ. ರಾಜ್ಯ ಪಠ್ಯಕ್ರಮ ಮತ್ತು ಐಸಿಎಸ್‌ಇ, ಸಿಬಿಎಸ್‌ಇ ಶಿಕ್ಷಣಗಳ ಉತ್ತೀರ್ಣ ವ್ಯವಸ್ಥೆಯಲ್ಲಿರುವ ತಾರತಮ್ಯ ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತುರ್ತಾಗಿ ಚರ್ಚಿಸಿ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ನೀಡಬೇಕಿದೆ’ ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಮಹೇಶ್ ಜೋಶಿ ‘ಹೇಮಾಂತರಂಗ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಬೇರೆ ಜಿಲ್ಲೆಗಳಲ್ಲಿ ಕಾಣದಂತಹ ವೈಶಿಷ್ಟ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಶೃಂಗೇರಿ ಶಾರದೆ, ಹೊರನಾಡು ಅನ್ನಪೂರ್ಣೇಶ್ವರಿ, ಬಾಬಾ ಬುಡನ್‍ಗಿರಿ, ದತ್ತಪೀಠ, ಜೈನರ ಕ್ಷೇತ್ರ ಸೇರಿದಂತೆ ಪೌರಾಣಿಕ, ಐತಿಹಾಸಿಕ ತಾಣಗಳಿವೆ. ಇಂತಹ ಪುಣ್ಯಭೂಮಿಯಲ್ಲಿ ಅಖಿಲ ಭಾರತ ಸಮ್ಮೇಳನ ನಡೆಸಲು ಪ್ರಯತ್ನಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ. ಶಾಂತಕುಮಾರ್, ಸಾಹಿತಿ ಬೆಳವಾಡಿ ಮಂಜುನಾಥ್, ಕಾರ್ಯಾಧ್ಯಕ್ಷ ಬಿ.ಎಸ್ ಜಯರಾಂ, ಕೋಶಾಧ್ಯಕ್ಷ ಜೆ.ಎಸ್ ರಘು, ಸಂಸ್ಕೃತಿ ಚಿಂತಕ ಮಂಚೇಗೌಡ, ಪ್ರಧಾನ ಸಂಚಾಲಕ ಗಣೇಶ್ ಮಗ್ಗಲಮಕ್ಕಿ, ನಿರ್ಮಲಮಂಚೇಗೌಡ, ಆಶಾ ಜಗದೀಪ್, ವಿವಿಧ ತಾಲ್ಲೂಕು ಘಟಕಗಳ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ವೇದಿಕೆಯಲ್ಲಿ ಗಡಿಬಿಡಿ: ಉದ್ಘಾಟನಾ ಸಮಾರಂಭದಲ್ಲಿ ಪ್ರಾರಂಭದಿಂದಲೂ ವೇದಿಕೆಯಲ್ಲಿ ಗಡಿಬಿಡಿಗಳು ನಡೆದವು. ಸೂರಿ ಶ್ರೀನಿವಾಸ್ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನೂ ಮಾಡದೆ ಮಹೇಶ್ ಜೋಶಿ ಅವರನ್ನು ಮಾತನಾಡಲು ಆಹ್ವಾನಿಸಲು ಮುಂದಾದಾಗ, ವೇದಿಕೆಯಲ್ಲಿ ಗಲಿಬಿಲಿಯಾಯಿತು. ಪುಷ್ಪಾರ್ಚನೆ ಮೊದಲು ನಡೆಯಲಿ ಎಂದು ಹಲವರು ಹೇಳಿದ್ದರಿಂದ ಆಯ್ತು ಮಾಡಿ ಎಂದು ಮುಖ ಗಂಟಿಕ್ಕಿಕೊಂಡರು. ನಿರೂಪಕರಿಗಿಂತಲೂ ವೇದಿಕೆಯಲ್ಲಿದ್ದ ಅತಿಥಿಗಳೇ ಧ್ವನಿವರ್ಧಕವನ್ನು ಹಿಡಿದು ಪ್ರಕಟಣೆ ನೀಡುತ್ತಿದ್ದುದು ಸಭಿಕರಿಗೆ ಕಿರಿಕಿರಿ ಎನಿಸಿತು.

ಎರಡೇ ನಿಮಿಷದಲ್ಲಿ ಪುಸ್ತಕ ಬಿಡುಗಡೆ: ಕಾರ್ಯಕ್ರಮದಿಂದ ನಿರ್ಗಮಿಸಲು ಸಿದ್ಧರಾಗಿದ್ದ ಮಹೇಶ್ ಜೋಶಿ, ಪುಸ್ತಕ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡುತ್ತಿದ್ದಂತೆ, ವೇದಿಕೆಯ ಮುಂಭಾಗದಲ್ಲಿದ್ದ ಲೇಖಕರು ಪೈಪೋಟಿಯಲ್ಲಿ ಬಂದು ಕೃತಿಗಳನ್ನು ಅತಿಥಿಗಳ ಕೈಗೆ ನೀಡಿದರು. ಎರಡೇ ನಿಮಿಷದಲ್ಲಿ ಕೃತಿ ಬಿಡುಗಡೆ ಮುಗಿಯಿತು.

ಬಣಗುಡುತ್ತಿದ್ದ ಪುಸ್ತಕ ಮಳಿಗೆಗಳು:  ಎಂಟಕ್ಕೂ ಅಧಿಕ ಪುಸ್ತಕದ ಅಂಗಡಿಗಳು ಬಂದಿದ್ದು, ಉದ್ಘಾಟನಾ ವೇಳೆಯಲ್ಲಿ ಒಂದಷ್ಟು ಜನ ಅಂಗಡಿಗಳತ್ತ ಮುಖ ಮಾಡಿದ್ದು ಬಿಟ್ಟರೆ, ಇಡೀ ದಿನ ಜನರಿಲ್ಲದೇ ಅಂಗಡಿಗಳು ಬಣಗುಡುತ್ತಿದ್ದವು.

ವೇದಿಕೆಯೇರದ ರಾಜಕೀಯ ನಾಯಕರು: ಸಾಹಿತ್ಯ ಸಮ್ಮೇಳನಕ್ಕೆ ರಾಜಕೀಯ ನಾಯಕರ ದಂಡೇ ಹರಿದು ಬಂದಿದ್ದರೂ, ನೀತಿ ಸಂಹಿತೆಯ ಕಾರಣದಿಂದ ವೇದಿಕೆಯ ಮುಂಭಾಗದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ ನಿಂಗಯ್ಯ, ಹಳಸೆ ಶಿವಣ್ಣ, ಕೆ.ಆರ್ ಪ್ರಭಾಕರ್, ದೀಪಕ್ ದೊಡ್ಡಯ್ಯ, ವಸಂತಮ್ಮ, ಡಾ. ಡಿ.ಎಲ್ ವಿಜಯಕುಮಾರ್, ಡಾ. ಶುಭ ವಿಜಯಕುಮಾರ್, ಡಿ.ಬಿ ಜಯಪ್ರಕಾಶ್, ವಸಂತಮ್ಮ, ಕೋಮಲಮ್ಮ, ಸುಬ್ಬಮ್ಮ ರಾಯಪ್ಪಗೌಡ ಮತ್ತಿತರರು ಇದ್ದರು.

ಗೋಷ್ಠಿಗಳಿಗೆ ನಿರಾಸಕ್ತಿ:  ಉದ್ಘಾಟನಾ ಸಮಾರಂಭ ಮುಗಿದ ಬಳಿಕ ಜನರ ಸಂಖ್ಯೆ ಕಡಿಮೆಯಾಗಿತ್ತು. ಗೋಷ್ಠಿಗಳಲ್ಲಿ ಖಾಲಿ ಕುರ್ಚಿಗಳೇ ಹೆಚ್ಚು ಇದ್ದವು.

ಕನ್ನಡವು ಅರಿವು ಆತ್ಮಾಭಿಮಾನದ ಭಾಷೆಯಾಗಬೇಕು. ಕನ್ನಡ ಭಾಷೆ ನಿರ್ಲಕ್ಷ್ಯ ಮಾಡಿದರೆ ಪಾಪ ಮಾಡಿದ ಹಾಗೆ. ಕನ್ನಡ ಭಾಷೆ ಉಳಿಸುವ ಇಚ್ಛಾಶಕ್ತಿ ಕನ್ನಡಿಗರಲ್ಲಿ ಮೂಡಬೇಕು.
- ಚಟ್ನಳ್ಳಿ ಮಹೇಶ್ ಸಾಹಿತಿ
ಮೆರವಣಿಗೆಯ ರಂಗು
ಸಮ್ಮೇಳನಾಧ್ಯಕ್ಷ ಹಳೇಕೋಟೆ ರಮೇಶ್ ಅವರನ್ನು ರಥದಲ್ಲಿ ಕುಳ್ಳಿರಿಸಿ ಪೂರ್ಣಕುಂಭದೊಂದಿಗೆ ಅಯ್ಯಪ್ಪಸ್ವಾಮಿ ದೇವಾಲಯದಿಂದ ಬೇಲೂರು ರಸ್ತೆ ಎಂ.ಜಿ ರಸ್ತೆ ಕೆ.ಎಂ ರಸ್ತೆ ಮೂಲಕ ಮೆರವಣಿಗೆಯಲ್ಲಿ ರಂಗಮಂದಿರಕ್ಕೆ ಕರೆ ತರಲಾಯಿತು. ಸಮ್ಮೇಳನಾಧ್ಯಕ್ಷರ ಪತ್ನಿ ಜಯಶ್ರೀ ರಮೇಶ್ ರಥವನ್ನೇರದೆ ಮಹಿಳೆಯರೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿದರು. ಕನ್ನಡಾಭಿಮಾನಿಗಳು ಸ್ಕೌಟ್ಸ್ ಗೈಡ್ಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಬರಿಗಾಲಲ್ಲಿ ನಡೆದ ಮಹಿಳೆಯರು

ಪೂರ್ಣಕುಂಭ ಹಿಡಿದ ಮಹಿಳೆಯರು ಕಲಾ ತಂಡದವರು ಬರಿಗಾಲಿನಲ್ಲಿ ಸುಮಾರು ಒಂದು ಕಿ.ಮೀ.ಯಷ್ಟು  ನಡೆದರು. ಉರಿ ಬಿಸಿಲಿನಲ್ಲಿ ಡಾಂಬರ್‌ ರಸ್ತೆಯಲ್ಲಿ ಕಾಲಿಡಲು ಕಷ್ಟಪಟ್ಟಿದ್ದನ್ನು ಗಮನಿಸಿದ ಮಹೇಶ್ ಜೋಶಿ ತಮ್ಮ ಭಾಷಣದಲ್ಲಿ ಮುಂದಿನ ಯಾವುದೇ ಸಮ್ಮೇಳನದಲ್ಲಿ ಪೂರ್ಣಕುಂಭ ಹಿಡಿಯುವವರು ಕಲಾ ತಂಡಗಳು ಚಪ್ಪಲಿ ಧರಿಸಿಯೇ ಭಾಗವಹಿಸುವಂತೆ ಸೋಮವಾರ ಮಾರ್ಗಸೂಚಿ ರವಾನಿಸಲಾಗುವುದು ಎಂದರು. ಗಮನ ಸೆಳೆದ ಪಂಚೆ ಶಲ್ಯ: ಹಳೇಕೋಟೆ ರಮೇಶ್ ರೇಷ್ಮೆಯ ಪಂಚೆ ಶಲ್ಯ ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರೆ ಮಹೇಶ್ ಜೋಶಿ ಕೂಡ ಪಂಚೆ ಶಲ್ಯದೊಂದಿಗೆ ಅಧ್ಯಕ್ಷರಿಗೆ ಸಾಥ್ ನೀಡಿದರು.

ಪ್ಲಾಸ್ಟಿಕ್ ಬಾಟಲಿಗಳ ಹಾವಳಿ

ಸಾಹಿತ್ಯ ಸಮ್ಮೇಳನದಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು ಸದ್ದು ಮಾಡಿದವು. ವೇದಿಕೆಯ ಮೇಲೆ ಪ್ಲಾಸ್ಟಿಕ್ ಬಾಟಲಿಗಳನ್ನೇ ಜೋಡಿಸಿಡಲಾಗಿತ್ತು. ವೇದಿಕೆಯ ಕೆಳಗಿದ್ದ ಗಣ್ಯರಿಗೂ ಪ್ಲಾಸ್ಟಿಕ್ ಬಾಟಲಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಹೆಚ್ಚಿನವರು ಖಾಲಿ ಪ್ಲಾ­­­ಸ್ಟಿಕ್ ಬಾಟಲಿಗಳನ್ನು ಕುಳಿತ ಜಾಗದಲ್ಲಿಯೇ ಬಿಟ್ಟು ಹೋಗಿದ್ದರಿಂದ ಉದ್ಘಾಟನಾ ಸಮಾರಂಭ ಮುಗಿಯುತ್ತಿದ್ದಂತೆ ಆವರಣದಲ್ಲಿ ಪ್ಲಾಸ್ಟಿಕ್ ಬಾಟಲಿಗಳೇ ಕಾಣುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.