ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆ. 22ರಂದು ಮಂತ್ರಾಲಯದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಗಡಿ ಜಿಲ್ಲೆಗಳ ಸಹಯೋಗದಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.
ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರದೀಪ್‌ಕುಮಾರ್ ಹೆಬ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಮಂತ್ರಾಲಯ ಪೀಠದ ಸುಭುದೇಂದ್ರ ತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಭುವನೇಶ್ವರಿ ಭಾವಚಿತ್ರ ಅನಾವರಣ ಮಾಡಲಿದ್ದಾರೆ. ಸಮ್ಮೇಳನ ಅಧ್ಯಕ್ಷರ ಭಾಷಣದ ಪ್ರತಿಯನ್ನು ಬಿ.ಎಂ.ಪಟೇಲ್ ಪಾಂಡು ಮತ್ತು ಕಸಾಪ ಕಾರ್ಯದರ್ಶಿ ಎಚ್.ಬಿ. ಮದನಗೌಡ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ತೆಲಂಗಾಣ ಗಡಿನಾಡು ಜಿಲ್ಲೆಯ ಘಟಕದ ಅಧ್ಯಕ್ಷ ಗುಡಗುಂಟಿ ವಿಠಲ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ನುಡಿಗಳನ್ನಾಡಲಿದ್ದಾರೆ ಎಂದು ವಿವರಿಸಿದರು.
ಗಡಿನಾಡು ಕನ್ನಡಿಗರ ಕೊಡುಗೆ ಎಂಬ ಗೋಷ್ಠಿ ಅಂದು ಬೆಳಗ್ಗೆ ಆರಂಭವಾಗಲಿದೆ. ಕುಮಾರವ್ಯಾಸ ಕಥಾ ಪ್ರಸಂಗದ ಗಮಕ ಗೋಷ್ಠಿ ಎರಡನೇ ಅವಧಿಯಲ್ಲಿ ನಡೆಯಲಿದೆ. ಚಂದ್ರಕಲಾ ಕೊಪ್ಪ ಅವರು ಗೋಷ್ಠಿ ಉದ್ಘಾಟಿಸಲಿದ್ದು, ತರೀಕೆರೆಯ ಸುನಿತಾ ಕಿರಣ್ ಗಮಕ ವಾಚಿಸಲಿದ್ದಾರೆ. ರಾಮಸುಬ್ರಾಯಶೇಟ್ ವ್ಯಾಖ್ಯಾನ ಮಾಡಲಿದ್ದಾರೆ ಎಂದರು.
ಬಹುಭಾಷಾ ಕವಿಗೋಷ್ಠಿಯು ತೆಲಂಗಾಣದ ಸಾಹಿತಿ ಚಂದಕ ಚರ್ಲಾ ರಮೇಶ್ ಬಾಬು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಅರುಣ್ ಯೋಗಿರಾಜ್ ಅವರನ್ನು ಸನ್ಮಾನಿಸಲಾಗುವುದು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 5 ರಾಜ್ಯಗಳ ಸಾಧಕರನ್ನು ಗುರುತಿಸಿ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಮೇಶ್ ಬೇಗಾರ್, ಗಿರಿಯಾಚಾರ್ಯ, ತಾರಾಮತಿ ಕುಲಕರ್ಣಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಾವಿನಕೆರೆ ದಯಾನಂದ, ವಿಜಯಲಕ್ಷ್ಮಿ, ಸಚಿನ್ ಸಿಂಗ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.