ADVERTISEMENT

22ಕ್ಕೆ ಕರ್ನಾಟಕ ಬಂದ್‌: ಬೆಂಬಲಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 14:56 IST
Last Updated 20 ಮಾರ್ಚ್ 2025, 14:56 IST
ರಾಜೇಗೌಡ
ರಾಜೇಗೌಡ   

ಚಿಕ್ಕಮಗಳೂರು: ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಮಾರ್ಚ್‌ 22ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದು,  ಚಿಕ್ಕಮಗಳೂರಿನಲ್ಲೂ ಬಂದ್ ನಡೆಸಲಾಗುವುದು ಎಂದು ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಗೌಡ ತಿಳಿಸಿದರು.

‘ಈ ಬಂದ್‌ಗೆ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ಆಟೊ ಚಾಲಕರ ಸಂಘಗಳು, ವರ್ತಕರ ಸಂಘ, ಲಾರಿ ಮತ್ತು ಟ್ಯಾಕ್ಸಿ ಮಾಲೀಕರ ಸಂಘ, ಹೋಂಸ್ಟೇ ಮಾಲೀಕರ ಸಂಘ, ಮಹಿಳಾ ಸಂಘಗಳು ಬೆಂಬಲಿಸಲು ಕೋರಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.

ಬೆಳಗಾವಿ ಕೆಎಸ್‌ಆರ್‌ಟಿಸಿ ನೌಕರರ ಮೇಲೆ ಹಲ್ಲೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಗಡಿಪಾರು ಮಾಡಬೇಕು. ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗದಲ್ಲಿ ಶೇ 70ರಷ್ಟು ಮೀಸಲಾತಿ ಕಡ್ಡಾಯಗೊಳಿಸಬೇಕು. ಎಂಇಎಸ್‌ ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು. ಮೇಕೆದಾಟು ಯೋಜನೆ ಮತ್ತು ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಎನ್ಒಸಿ ಕೊಡಿಸಿ ತಕ್ಷಣ ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಎಎಪಿ ಮುಖಂಡ ಸುಂದರೇಗೌಡ, ರಾಜ್‌ಕುಮಾರ್ ಅಭಿಮಾನಿ‌ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರೇಗೌಡ, ಆಟೊರಿಕ್ಷಾ ಮಾಲೀಕರು ಮತ್ತು ಚಾಲಕರ ಸಂಘದ ಕಾರ್ಯದರ್ಶಿ ರಘು, ಜೈಪ್ರಕಾಶ್, ವಿನಯ್, ಶಂಕರ್, ಸತೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.