ADVERTISEMENT

ಕಾರೇಹಳ್ಳಿ ಕಾವಲು ಸಮಸ್ಯೆಗೆ ತಾರ್ಕಿಕ ಅಂತ್ಯ: ಕೆ.ಎಸ್‌.ಆನಂದ್‌ ಭರವಸೆ

ಜಿಗಣೇಹಳ್ಳಿ ಜನಸ್ಪಂದನ ಸಭೆಯಲ್ಲಿ ಶಾಸಕ ಕೆ.ಎಸ್‌.ಆನಂದ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:21 IST
Last Updated 19 ಅಕ್ಟೋಬರ್ 2025, 6:21 IST
ಕಡೂರು ತಾಲ್ಲೂಕು ಜಿಗಣೇಹಳ್ಳಿಯಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಮಸ್ಥರೊಬ್ಬರ ಪ್ರಶ್ನೆಗೆ ತಹಶೀಲ್ದಾರ್‌ ಪೂರ್ಣಿಮಾ ಉತ್ತರಿಸಿದರು.ಶಾಸಕ ಕೆ.ಎಸ್‌.ಆನಂದ್‌, ಇಒ ಪ್ರವೀಣ್‌, ಗ್ರಾಮಸ್ಥರು, ಅಧಿಕಾರಿಗಳು ಇದ್ದರು 
ಕಡೂರು ತಾಲ್ಲೂಕು ಜಿಗಣೇಹಳ್ಳಿಯಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಮಸ್ಥರೊಬ್ಬರ ಪ್ರಶ್ನೆಗೆ ತಹಶೀಲ್ದಾರ್‌ ಪೂರ್ಣಿಮಾ ಉತ್ತರಿಸಿದರು.ಶಾಸಕ ಕೆ.ಎಸ್‌.ಆನಂದ್‌, ಇಒ ಪ್ರವೀಣ್‌, ಗ್ರಾಮಸ್ಥರು, ಅಧಿಕಾರಿಗಳು ಇದ್ದರು    

ಕಡೂರು: ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಾರೇಹಳ್ಳಿ ಕಾವಲು ಸಮಸ್ಯೆಗೆ ತಮ್ಮ ಈ ಅವಧಿಯಲ್ಲಿಯೇ ತಾರ್ಕಿಕ ಅಂತ್ಯ ಹಾಡಲು ಪ್ರಯತ್ನಿಸುವುದಾಗಿ ಶಾಸಕ ಕೆ.ಎಸ್‌.ಆನಂದ್‌ ಭರವಸೆ ನೀಡಿದರು.

ತಾಲ್ಲೂಕಿನ ಜಿಗಣೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರೇಹಳ್ಳಿ ಕಾವಲಿನಲ್ಲಿ 1,811 ಎಕರೆ ಭೂಮಿ ಇದ್ದು 1,396 ಖಾತೆ ಇದೆ. ಇಲ್ಲಿ 255 ಎಕರೆ ಡೀಮ್ಡ್‌ ಅರಣ್ಯ ಇದ್ದು ಬಾಕಿ ಭೂಮಿಯಲ್ಲಿ ಖಾತೆದಾರರಿಗೆ 2 ಗುಂಟೆಯಿಂದ 5 ಎಕರೆವರೆಗೆ ಭೂಮಿ ಮಂಜೂರಾಗಿದೆ. ಆದರೆ ಸಾಗುವಳಿ ಚೀಟಿ ನೀಡಲಾಗಿಲ್ಲ. ಕಾರಣವೆಂದರೆ ಮೂಲ ಮಂಜೂರಾತಿ ದಾಖಲೆ ತಾಲ್ಲೂಕು ಕಚೇರಿಯಲ್ಲಿಯೂ ಇಲ್ಲ. ಜನರ ಬಳಿಯೂ ಇಲ್ಲ. ಈ ವಿಷಯವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಜತೆ ಮಾತನಾಡಿದ್ದು ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ, ಅರಣ್ಯ ಭೂಮಿ ಹೊರತುಪಡಿಸಿ ಉಳಿದ ಭೂಮಿಗೆ ಸಾಗುವಳಿ ಚೀಟಿ ನೀಡಲು ಕ್ರಮ ವಹಿಸಲಾಗುವುದು. ಕೇವಲ ಒಬ್ಬ ವಿ.ಎ, ಆರ್‌.ಐ ಮೂಲಕ ಇದನ್ನು ಬಗೆ ಹರಿಸಲು ಸಾಧ್ಯವಿಲ್ಲ. ತಹಶೀಲ್ದಾರರು ಹೆಚ್ಚುವರಿ ವಿ.ಎ, ಸರ್ವೇಯರ್‌ಗಳನ್ನು ನೇಮಿಸಿ, ಇಲ್ಲಿನ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ತಹಶೀಲ್ದಾರ್‌ ಸಿ.ಎಸ್‌.ಪೂರ್ಣಿಮಾ, ಕಾವಲು ವಿಷಯವಾಗಿ 200 ಮೂಲ ಮಂಜೂರಾತಿ ಕಡತಗಳು ಸಿಕ್ಕಿವೆ. 300 ದಾಖಲೆಗಳನ್ನು ಫೀಡ್‌ ಮಾಡಲಾಗಿದೆ, 80 ಜನರ ದಾಖಲೆಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಸಾಗುವಳಿ ಚೀಟಿ, ಚಾಲ್ತಿ ಪಹಣಿ ಹಾಗೂ ನಡಾವಳಿಯ ದಾಖಲೆಗಳು ಇದ್ದರೆ ಸಮಂಜಸವಾಗುತ್ತದೆ. ಪೈಲಟ್‌ ಯೋಜನೆಯಲ್ಲಿ ಇದನ್ನು ಗುರುತಿಸಿ ಇಂದು ಸಂಜೆಯೇ ಹೆಚ್ಚುವರಿ ಗ್ರಾಮ ಆಡಳಿತಾಧಿಕಾರಿ ಹಾಗೂ ಸರ್ವೇಯರ್‌ಗಳನ್ನು ನೇಮಕ ಆದೇಶ ನೀಡುವುದಾಗಿ ತಿಳಿಸಿದರು.

ಜಿಗಣೇಹಳ್ಳಿ ಗ್ರಾಮದಲ್ಲಿ ಸಾಕಷ್ಟು ಜನರು ಪಶುಸಂಗೋಪನೆ ಅವಲಂಬಿಸಿರುವವರು, ಕುರಿ ಸಾಕಾಣಿಕೆದಾರರು ಇದ್ದಾರೆ. ಇಲ್ಲಿಗೆ ಪಶು ಆಸ್ಪತ್ರೆ ಬೇಕು, ಎಂಯುಎಸ್‌ಎಸ್‌ ತುರ್ತು ಅಗತ್ಯವಿದೆ. ಶಾಸಕರು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಲಿಖಿತ ಮನವಿ ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ಆನಂದ್‌, ಕಳೆದ 17-18 ವರ್ಷಗಳಿಂದ ತಾಲ್ಲೂಕಿಗೆ ಪಶು ಆಸ್ಪತ್ರೆ ಮಂಜೂರಾಗಿರಲಿಲ್ಲ. ಕಳೆದ ವರ್ಷ ಒಂದು ಮಂಜೂರಾಗಿತ್ತು. ಕಾಮನಕೆರೆಯಲ್ಲಿ ತುರ್ತು ಅಗತ್ಯ ಇದ್ದುದರಿಂದ ಅಲ್ಲಿಗೆ ಕೊಡಲಾಗಿದೆ. ಇಲ್ಲಿ ವಾರದಲ್ಲಿ ಒಂದು ಅಥವಾ 2 ದಿನ ವೈದ್ಯರು ಭೇಟಿ ನೀಡಲು ಕ್ರಮ ವಹಿಸಲು ಸಹಾಯಕ ನಿರ್ದೇಶಕರಿಗೆ ಸೂಚಿಸಿದ್ದೇನೆ. ಆಸ್ಪತ್ರೆಯ ಮುಂದಿನ ಆದ್ಯತೆಯಾಗಿ ಜಿಗಣೇಹಳ್ಳಿಯನ್ನು ಪರಿಗಣಿಸಿದ್ದೇನೆ ಎಂದು ಭರವಸೆ ನೀಡಿದರು.

ವೋಲ್ಟೇಜ್‌ ಸಮಸ್ಯೆ ಗಮನದಲ್ಲಿದೆ. ತಾಲ್ಲೂಕಿನಲ್ಲಿ ಚೌಳಹಿರಿಯೂರು, ಕೆ.ಬಸವನಹಳ್ಳಿಗಳಲ್ಲಿ ಎಂಯುಎಸ್‌ಎಸ್‌ ಸ್ಥಾಪನೆಗೆ ಟೆಂಡರ್‌ ಆಗಿದೆ. ಯಳಗೊಂಡನಹಳ್ಳಿಯಲ್ಲಿ ಟೆಂಡರ್‌ ಆಗಬೇಕು. ಜಿಗಣೇಹಳ್ಳಿಯಲ್ಲಿ 4 ಎಕರೆ ಭೂಮಿ ಮಂಜೂರಾಗಿದ್ದು, ಮೆಸ್ಕಾಂನವರು ₹14 ಲಕ್ಷ ಹಣ ಪಾವತಿಸಿದ್ದು, ಶೀಘ್ರದಲ್ಲಿ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸುವುದಾಗಿ ತಿಳಿಸಿದರು.

ಜಿಗಣೇಹಳ್ಳಿ ವ್ಯಾಪ್ತಿಯಲ್ಲಿ ಆರೋಗ್ಯಕೇಂದ್ರ, ಅಂಗನವಾಡಿ ಸಮುದಾಯ ಭವನಗಳಿಗೆ ಹಣ ಮಂಜೂರಾಗಿದೆ. ಆಲಘಟ್ಟದಿಂದ ಜಿಗಣೇಹಳ್ಳಿವರೆಗೆ ‘ಪ್ರಗತಿಪಥʼಯೋಜನೆಯಲ್ಲಿ ಎರಡೂ ಬದಿ ಚರಂಡಿ ಹಾಗೂ ಉತ್ತಮ ರಸ್ತೆ ನಿರ್ಮಿಸಲು ಕ್ರಮ ವಹಿಸಲಾಗುವುದು. ಗ್ರಾಮದಲ್ಲಿ ಬಿಸಿಎಂ ಹಾಸ್ಟೆಲ್‌ ಕೋರಿದ್ದೀರಿ, ಆದರೆ ಸರ್ಕಾರ ಸದ್ಯ ಗ್ರಾಮೀಣ ಪ್ರದೇಶದಲ್ಲಿ ಮೊರಾರ್ಜಿ ವಸತಿ ಶಾಲೆಗಳ ಸ್ಥಾಪನೆಗೆ ಒತ್ತು ನೀಡಿ, ಜಿಲ್ಲಾ ಕೇಂದ್ರಗಳಲ್ಲಿ ವಸತಿ ನಿಲಯ ಸ್ಥಾಪನೆಗೆ ಮುಂದಾಗಿದೆ ಎಂದು ತಿಳಿಸಿದರು.

ನವೆಂಬರ್‌ 17ರಂದು ಭದ್ರಾ ಉಪಕಣಿವೆ ಮೂರನೇ ಹಂತದ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿಪೂಜೆ ನೆರವೇರಿಸಲು ದಿನಾಂಕ ನಿಗದಿಯಾಗಿದೆ. ನಂತರ ಈ ಭಾಗದ ಕೆರೆ ಕಟ್ಟೆಗಳಿಗೆ ನೀರು ಹರಿಸುವ ಕಾಮಗಾರಿಗೆ ವೇಗ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಇಒ ಪ್ರವೀಣ್‌ ಸಿ.ಆರ್‌., ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಮಾರಮ್ಮ, ಉಪಾಧ್ಯಕ್ಷೆ ದೀಪಿಕಾ ಲೋಕೇಶ್‌, ಸದಸ್ಯರಾದ ಜಿ.ಬಸವರಾಜು, ಕಾಂತಾಮಣಿ, ಗೀತಮ್ಮ, ಪಿಡಿಒ ಆದಿನಾಥ್‌ ಬೀಳಗಿ, ಆರ್‌ಐ ರವಿಕುಮಾರ್‌, ವಿ ಎ ಹನುಮಂತಪ್ಪ, ಗ್ರಾಮಸ್ಥರಾದ ಎಸ್‌.ಬಿ.ಹನುಮಂತಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಲೋಕೇಶ್‌, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ಭದ್ರಾ ಉಪಕಣಿವೆ ಮೂರನೇ ಹಂತದಲ್ಲಿ ಜಿಗಣೇಹಳ್ಳಿ ಭಾಗಕ್ಕೆ ನೀರು ಹುಲ್ಲುಬನ್ನಿ ಕಾವಲಿನಲ್ಲಿ ನೀಲಗಿರಿ ನೆಡುತೋಪು, ತೆರವಿಗೆ ಆಗ್ರಹ ಅಪ್ರಾಪ್ತರಿಗೆ ಪಿಂಚಣಿ, 150ಕ್ಕೂ ಹೆಚ್ಚು ಜನರಿಗೆ ಪಿಂಚಣಿ ಸ್ಥಗಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.