ADVERTISEMENT

ಗಮಕ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಚಿಂತನೆ

ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:53 IST
Last Updated 25 ನವೆಂಬರ್ 2025, 3:53 IST
ನರಸಿಂಹರಾಜಪುರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ನಡೆಯಿತು
ನರಸಿಂಹರಾಜಪುರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ನಡೆಯಿತು   

ನರಸಿಂಹರಾಜಪುರ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಡೂರು ತಾಲ್ಲೂಕಿನ ಲಕ್ಷ್ಮೀಶಕವಿಯ ಜನ್ಮಸ್ಥಳ ದೇವನೂರು ಅಥವಾ ಚಿಕ್ಕಮಗಳೂರಿನ ರಂಗಣ್ಣನ ಛತ್ರದಲ್ಲಿ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಜಿಲ್ಲಾ ಗಮಕ ಸಾಹಿತ್ಯ ಸಮ್ಮೇಳನ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

ಗಮಕ ಸಾಹಿತ್ಯ ಸಮ್ಮೇಳನ ರಾಜ್ಯಮಟ್ಟದ ಗಮಕ ಸಾಹಿತ್ಯ ಸಮ್ಮೇಳನವಾಗುವ ಸಾಧ್ಯತೆಯಿದೆ ಎಂದರು.

ADVERTISEMENT

ಜನವರಿ ಮೊದಲ ವಾರ ಶೃಂಗೇರಿಯಲ್ಲಿ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿದೆ. ಕಡೂರು ತಾಲ್ಲೂಕು ಗಿರಿಯಾಪುರ ಗ್ರಾಮದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, 1ರಿಂದ 10ನೇ ತರಗತಿ ಮಕ್ಕಳು ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ಸಮ್ಮೇಳನದ ಅಧ್ಯಕ್ಷರನ್ನು ಇದೇ ವಯೋಮಾನದ ಮಕ್ಕಳಲ್ಲಿ ಆಯ್ಕೆ ಮಾಡಲಾಗುವುದು ಎಂದರು.

ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಸಹ ಕಡೂರು ತಾಲ್ಲೂಕಿನಲ್ಲಿ ಆಯೋಜಿಸಲಾಗುವುದು. ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಮೂಡಿಗೆರೆಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

24 ವರ್ಷಗಳ ಹಿಂದೆ ಜಿಲ್ಲಾ ಲೇಖಕರ ಕೈಪಿಡಿ, ಸಾಹಿತಿಗಳ ಮಾಹಿತಿ ಕೋಶವನ್ನು ಹೊರತರಲಾಗಿತ್ತು. ಅಂತಹದ್ದೇ ಕೈಪಿಡಿಯನ್ನು ಪ್ರಸ್ತುತ ಹೊರತರಲು ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು. ಚಿಕ್ಕಮಗಳೂರು, ಕಡೂರು, ಮೂಡಿಗೆರೆ, ಕೊಪ್ಪ, ಶೃಂಗೇರಿಯಲ್ಲಿ ಕನ್ನಡ ಭವನಗಳಿವೆ. ತರೀಕೆರೆ ಹಾಗೂ ಕಳಸದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ದೊರಕಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 188 ದತ್ತಿಗಳಿದ್ದು, ಎರಡು ಮೂರು ದತ್ತಿಗಳನ್ನು ಒಗ್ಗೂಡಿಸಿ ದತ್ತಿ ಉಪನ್ಯಾಸ ಮಾಡಲಾಗಿದೆ.ಸಾಹಿತ್ಯ ಪರಿಷತ್‌ನಿಂದ ಶ್ರಾವಣ ಸಂಜೆ, ನುಡಿನಿತ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಮಂಚೆಗೌಡ,ನರಸಿಂಹರಾಜಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್, ಕಣಿವೆ ನಾಗಚಂದ್ರ ಪ್ರತಿಷ್ಠಾ‍ನದ ಕಣಿವೆ ವಿನಯ್, ಸಾಹಿತ್ಯ ಪರಿಷತ್‌ನ ಎಸ್.ಎಸ್.ಸಂತೋಷ್ ಕುಮಾರ್, ವಿವಿಧ ತಾಲ್ಲೂಕುಗಳ ಸಾಹಿತ್ಯ ಪರಿಷತ್ ಮತ್ತು ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.