ADVERTISEMENT

ಕಸಾಪ ಭವನ ನಿವೇಶನ; ಕೈಗೂಡದ ಕನಸು

ಆಲ್ದೂರು: ನಿವೇಶನಕ್ಕಾಗಿ ಎರಡು ದಶಕಗಳಿಂದ ಹೋರಾಟ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:57 IST
Last Updated 25 ನವೆಂಬರ್ 2025, 3:57 IST
ಆಲ್ದೂರು ಕಸಾಪ ಹೋಬಳಿ ಘಟಕದ ಭವನ ನಿರ್ಮಾಣಕ್ಕೆ ಮಂಜೂರಾಗಿದ್ದ ನಿವೇಶನ, ದಾಖಲಾತಿಯನ್ನು ತೋರಿಸುತ್ತಿರುವ ಕಸಾಪ ಹೋಬಳಿ ಘಟಕದ ಅಧ್ಯಕ್ಷ ನೂರ್ ಮಹಮ್ಮದ್
ಆಲ್ದೂರು ಕಸಾಪ ಹೋಬಳಿ ಘಟಕದ ಭವನ ನಿರ್ಮಾಣಕ್ಕೆ ಮಂಜೂರಾಗಿದ್ದ ನಿವೇಶನ, ದಾಖಲಾತಿಯನ್ನು ತೋರಿಸುತ್ತಿರುವ ಕಸಾಪ ಹೋಬಳಿ ಘಟಕದ ಅಧ್ಯಕ್ಷ ನೂರ್ ಮಹಮ್ಮದ್   

ಆಲ್ದೂರು: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿಗೆ ನಿವೇಶನ ಪಡೆಯುವ ಯತ್ನ ಕಳೆದ ಎರಡು ದಶಕಗಳಿಂದ ಮುಂದುವರಿದಿದ್ದು, ನಿವೇಶನ ಮಂಜೂರು ಕನಸು ಕನಸಾಗಿಯೇ ಉಳಿದಿದೆ.

ಪ್ರಸ್ತುತ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಆಜೀವ ಸದಸ್ಯತ್ವ ಹೊಂದಿದ ಸದಸ್ಯರಿದ್ದಾರೆ. ಪ್ರತಿವರ್ಷ 500ರಿಂದ ಸಾವಿರ ಮಂದಿ ಸದಸ್ಯರ ಸೇರ್ಪಡೆ ಆಗುತ್ತಿದೆ. ದಿನದಿಂದ ದಿನಕ್ಕೆ ಹೋಬಳಿ ಮಟ್ಟದ ಕಸಾಪ ಬೆಳವಣಿಗೆ ಹೊಂದುವುದರ ಜತೆಗೆ ಕನ್ನಡ ನಾಡು ನುಡಿಗೆ ಶ್ರಮಿಸುತ್ತಿದೆ.

‘ಕನ್ನಡ ನಾಡು–ನುಡಿಗೆ ಕೆಲಸ ಮಾಡುವ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕಕ್ಕೆ ಕಾರ್ಯಕ್ರಮ ಆಯೋಜಿಸಲು ಪಟ್ಟಣದಲ್ಲಿ ನಿಗದಿತ ಸ್ಥಳವಿಲ್ಲ. ಕನ್ನಡ ಧ್ವಜಾರೋಹಣಕ್ಕೆ ಭವನ ಇಲ್ಲ.  ಬಾಡಿಗೆ ಕಟ್ಟಡ ಅಥವಾ ಸರ್ಕಾರಿ ಇಲಾಖೆಯ ಕಟ್ಟಡಗಳಲ್ಲಿ ಕಾರ್ಯಕ್ರಮ ನಡೆಸಬೇಕಾದಂತಹ ಸ್ಥಿತಿ ಇದೆ. ಕನ್ನಡ ಕಾರ್ಯಕ್ರಮ ಆಯೋಜನೆಗೆ ಶಾಮಿಯಾನ, ಕುರ್ಚಿಗಳು ಬಾಡಿಗೆ ಪಡೆಯುವ ಶೋಚನೀಯ ಪರಿಸ್ಥಿತಿ ಇದೆ. ಹೀಗಾಗಿ ಕನ್ನಡ ಕಟ್ಟುವ ಕನ್ನಡ ಸಾಹಿತ್ಯ ಪರಿಷತ್‌ಗೆ ನಿವೇಶನವೂ ಇಲ್ಲ, ಭವನವೂ ಇಲ್ಲ. ಹೀಗಾಗಿ ಪರಿತಪಿಸುತ್ತಿದ್ದೇವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ನೂರ್ ಮಹಮ್ಮದ್ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಭವನ ನಿರ್ಮಾಣಕ್ಕಾಗಿ ನಿವೇಶನ ಒದಗಿಸುವಂತೆ ಸತತವಾಗಿ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. 2016ರಲ್ಲಿ ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ತಿಗೆ 6 ಗುಂಟೆ ವಿಸ್ತೀರ್ಣದ ನಿವೇಶನವನ್ನು ಮಂಜೂರು ಮಾಡಿ, ಗುರುತಿನ ಕಲ್ಲನ್ನು ಕೂಡ ನೆಡ ಲಾಗಿತ್ತು. ನಿವೇಶನಕ್ಕೆ ಬೇಲಿ ಹಾಕಿ ಕೆಲಸ ಆರಂಭಿಸಲು ಮುಂದಾದಾಗ ಸರ್ಕಾರದಿಂದ ಬಂದ ಹೊಸ ಆದೇಶವು ಆಘಾತ ತಂದಿತ್ತು. ಮಂಜೂರಾದ ಜಮೀನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿಸಲಾಗಿದೆ ಎಂಬ ಜಿಲ್ಲಾಧಿಕಾರಿ ಅವರಿಂದ ಹೊರಬಿದ್ದಿತ್ತು. ಈ ಕುರಿತು ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರಿಗೆ ಮತ್ತೆ ಮನವಿ  ಸಲ್ಲಿಸಿದಾಗ, ಮಂಜೂರಾಗಿದ್ದ ಜಮೀನನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಲಿಖಿತ ರೂಪದಲ್ಲಿ ಸೂಚಿಸಿದ್ದರು. ಯಾವುದೇ ಪ್ರಯೋಜನವಾಗದೆ ಅಲ್ಲಿಗೆ ಕಡತಗಳು ನನೆಗುದಿಗೆ ಬಿದ್ದಿವೆ. ಮುಂಬರುವ ದಿನಗಳಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಮತ್ತೆ ಮನವಿ ಸಲ್ಲಿಸಲಾಗುವುದು’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಘಟನಾ ಕಾರ್ಯದರ್ಶಿ ಗುರುವೇಶ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.