ADVERTISEMENT

ಕಸ್ತೂರಿ ರಂಗನ್‌ ವರದಿ: ಅವಾಸ್ತವಿಕ ಅಂಶ ‘ಸುಪ್ರೀಂ’ಗೆ ಮನವರಿಕೆಗೆ ಮೊರೆ

ವರದಿ ಮಲೆನಾಡಿಗರಿಗೆ ತೂಗುಕತ್ತಿ: ದೂಷಣೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 16:26 IST
Last Updated 5 ಅಕ್ಟೋಬರ್ 2018, 16:26 IST
ಕಲ್ಕುಳಿ ವಿಠಲ ಹೆಗ್ಡೆ
ಕಲ್ಕುಳಿ ವಿಠಲ ಹೆಗ್ಡೆ   

ಚಿಕ್ಕಮಗಳೂರು: ‘ಕಸ್ತೂರಿ ರಂಗನ್‌ ವರದಿಯು ಮಲೆನಾಡಿನ ಜನವಸತಿ ನಾಶ ಮಾಡಿ, ಜನರಹಿತವಾಗಿಸುವ ಸಂಚು. ವರದಿಯಲ್ಲಿನ ಅವಾಸ್ತವಿಕ ಅಂಶಗಳನ್ನು ಪಟ್ಟಿ ಮಾಡಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲ ವಾದ ಮಂಡಿಸಬೇಕು’ ಎಂದು ಪರಿಸರ ಚಿಂತಕ ಕಲ್ಕುಳಿ ವಿಠಲ ಹೆಗ್ಡೆ ಇಲ್ಲಿ ಶುಕ್ರವಾರ ಒತ್ತಾಯಿಸಿದರು.

‘ಕಸ್ತೂರಿ ರಂಗನ್‌ ವರದಿಯನ್ನು ಆರು ತಿಂಗಳೊಳಗೆ ಯಥಾವತ್ತಾಗಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನ ಹಸಿರು ಪೀಠ ಸೂಚಿಸಿದೆ. ಮಾಧವ ಗಾಡ್ಗಿಳ್‌ ವರದಿ ಜಾರಿಗೊಳಿಸದಿರುವುದು ಕೊಡಗು, ಕೇರಳದ ಪ್ರಕೃತಿ ವಿಕೋಪಗಳಿಗೆ ಕಾರಣ ಎಂದು ಗೋವಾ ಫೌಂಡೆಷನ್‌ ಸ್ವಯಂ ಸೇವಾಸಂಸ್ಥೆ (ಎನ್‌ಜಿಒ) ಸಲ್ಲಿಸಿರುವ ಅರ್ಜಿ ಪುರಸ್ಕರಿಸಿ ಪೀಠವು ತುರ್ತಾಗಿ ಆದೇಶ ನೀಡಿದೆ. ಕಸ್ತೂರಿ ರಂಗನ್‌ ವರದಿಯು ಮಲೆನಾಡಿಗರಿಗೆ ತೂಗುಕತ್ತಿಯಾಗಿ ಪರಿಣಮಿಸಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಲೆನಾಡಿನ ಕೃಷಿ ಮತ್ತು ರೈತರಿಗೆ ಮಾರಕವಾಗುವ ನಿರ್ಬಂಧಗಳು ವರದಿಯಲ್ಲಿವೆ. ಕೃಷಿಯಲ್ಲಿ ಕೀಟನಾಶಕ, ರಾಸಾಯನಿಕ ಬಳಕೆ ಪೂರ್ಣ ನಿರ್ಬಂಧ ಇದೆ. ಕಾಫಿ, ಅಡಿಕೆ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳು. ಈ ಬೆಳೆಗಳನ್ನು ಕಾಪಾಡಲು ‘ಬೊಡೊ’ ದ್ರಾವಣ ಬಳಸಲಾಗುತ್ತಿದೆ. ರಾಸಾಯನಿಕ ಬಳಕೆ ಬದಲಿಗೆ ಪರ್ಯಾಯಗಳನ್ನು ವರದಿಯಲ್ಲಿ ಸೂಚಿಸಿಲ್ಲ. ಮನೆ ಕಟ್ಟಲು, ಹಳ್ಳದ ನೀರು ಕಟ್ಟಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು ಎಂಬ ಅಂಶಗಳು ವರದಿಯಲ್ಲಿ ಇವೆ’ ಎಂದು ಹೇಳಿದರು.

ADVERTISEMENT

‘ಕೈಗಾರಿಕಾ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಮೂರು ಬಣ್ಣ (ಕೆಂಪು, ಹಳದಿ, ಹಸಿರು) ವಿಂಗಡಣೆ ಮಾಡಿದ್ದಾರೆ. ಸಂಸ್ಕರಣ ಘಟಕಗಳು ಕೆಂಪು ಬಣ್ಣ ವ್ಯಾಪ್ತಿಗೊಳಪಡುತ್ತವೆ. ‘ಕಾಫಿ ಪಲ್ಪಿಂಗ್‌’ ಇದರಲ್ಲಿ ಬರುತ್ತದೆ. ವರದಿ ಅವಾಸ್ತವಿಕವಾಗಿದೆ’ ಎಂದು ದೂಷಿಸಿದರು.

‘ಚಿಕ್ಕಮಗಳೂರು ಮತ್ತು ಮೂಡಿಗೆರೆ ತಾಲ್ಲೂಕಿನ ತಲಾ 27, ಎನ್‌.ಆರ್‌.ಪುರ– 35, ಕೊಪ್ಪ – 32 ಹಾಗೂ ಶೃಂಗೇರಿ ತಾಲ್ಲೂಕಿನ 26 ಗ್ರಾಮಗಳು ವ್ಯಾಪ್ತಿಗೆ ಒಳಪಡುತ್ತವೆ. ಮೂಡಿಗೆರೆ ತಾಲ್ಲೂಕಿನ 104 ಗ್ರಾಮಗಳ ಪೈಕಿ 56ಕ್ಕೂ ಹೆಚ್ಚು ಗ್ರಾಮಗಳು ಒಂದು ಚದುರ ಕಿ.ಮೀ. ವ್ಯಾಪ್ತಿಯಲ್ಲಿ 100ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಪ್ರದೇಶ ಅಧ್ಯಯನ ಮಾಡದೆ ವರದಿ ಸಿದ್ಧಪಡಿಸಲಾಗಿದೆ’ ಎಂದು ದೂರಿದರು.

ಪಶ್ಚಿಮಘಟ್ಟದ ಪ್ರವಾಸೋದ್ಯಮ ಮತ್ತು ಜೀವವೈವಿಧ್ಯಕ್ಕೆ ಪೂರಕವಾಗಿ ಕಸ್ತೂರಿ ರಂಗನ್‌ ಮತ್ತು ಮಾಧವ ಗಾಡ್ಗಿಳ್‌ ವರದಿ ತಯಾರಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿನ ಜನರಿಗೆ ಅನುಕೂಲ ಇಲ್ಲ. ವರದಿಯು ಬಹುರಾಷ್ಟ್ರೀಯ ಕಂಪೆನಿಗಳ ಕೃಪಾ ಪೋಷಿತ ಸ್ವಯಂಸೇವಾ ಸಂಸ್ಥೆಗಳು, ಪ್ರವಾಸೋದ್ಯಮ ನೀತಿಗೆ ಪೂರಕವಾಗಿದೆ’ ಎಂದರು.

‘ಕೇಂದ್ರಸರ್ಕಾರವು ರಾಜ್ಯ ಸರ್ಕಾರಗಳು ಮತ್ತು ಜನರ ಅಹವಾಲು ಪಡೆದು ಪ್ರಬಲ ವಾದ ಮಂಡಿಸಬೇಕಿತ್ತು. ಕಸ್ತೂರಿ ರಂಗನ್‌ ವರದಿ ಜಾರಿ ಮಾಡುವುದಾಗಿ ಕೇಂದ್ರ ಸರ್ಕಾರ ಅಫಿಡವಿಟ್‌ ನೀಡಿದೆ. ಸಂಸದರು ನಿರ್ಣಾಯಕ ಸಭೆಗಳಲ್ಲಿ ಭಾಗವಹಿಸಿಲ್ಲ, ಜನರ ಅಹವಾಲುಗಳನ್ನು ಮಂಡಿಸಲು ವಿಫಲವಾಗಿದ್ದಾರೆ’ ಎಂದು ಆರೋಪಿಸಿದರು.

ಈ ವರದಿ ವಿರೋಧಿಸಿ ಒಗ್ಗೂಡಿ ಹೋರಾಟ ಮಾಡಲಾಗುವುದು. ಜನಪ್ರತಿನಿಧಿಗಳು, ರೈತರು, ಸಂಘಸಂಸ್ಥೆಗಳು ಪ್ರಬಲವಾಗಿ ವಿರೋಧಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಎಚ್‌.ಎಚ್‌.ದೇವರಾಜ್‌, ಕೂದುವಳ್ಳಿ ಮಂಜುನಾಥ್‌, ದುಗ್ಗಪ್ಪಗೌಡ, ದಯಾಕರ್‌, ಸುರೇಶ್‌ ಭಟ್‌ ಇದ್ದರು.


‘ಕುದುರೆಮುಖ ಕಂದಾಯ ಜಾಗ ಹಸ್ತಾಂತರ ಸಲ್ಲದು’

‘ಹುಬ್ಬಳ್ಳಿ– ಅಂಕೋಲ ರೈಲು ಮಾರ್ಗಕ್ಕೆ ಬಳಸುವ ಅರಣ್ಯ ಜಾಗಕ್ಕೆ ಪರ್ಯಾಯವಾಗಿ ಜಿಲ್ಲೆಯ ಕುದುರೆಮುಖದ 1,657 ಎಕರೆ ಕಂದಾಯ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವುದು ಸರಿಯಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಲಭ್ಯ ಇರುವ ಕಂದಾಯ ಜಾಗವನ್ನೇ ಪರ್ಯಾಯವಾಗಿ ನೀಡಲು ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂದು ಕಲ್ಕುಳಿ ವಿಠಲ ಹೆಗ್ಡೆ ಒತ್ತಾಯಿಸಿದರು.

ಸಾರ್ವಜನಿಕ ಪ್ರಕಟಣೆ ಹೊರಡಿಸದೆ, ಸ್ಥಳೀಯರಿಗೆ ಮಾಹಿತಿ ನೀಡದೆ ಈ ಜಿಲ್ಲೆಯ ಕಂದಾಯ ಜಾಗವನ್ನು ಬೇರೊಂದು ಜಿಲ್ಲೆಯ ಅಭಿವೃದ್ಧಿಗಾಗಿ ನೀಡಲಾಗಿದೆ. ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಹೇಳಿದರು.

ಕುದುರೆಮುಖ ಗಣಿಗಾರಿಕೆ ಸಂದರ್ಭದಲ್ಲಿ ನಿರ್ಮಿಸಿದ 1,800 ಕಟ್ಟಡಗಳು ಇವೆ. ಇವೆಲ್ಲವನ್ನೂ ಬಳಸಿಕೊಂಡು ಇಲ್ಲಿ ವಿಶ್ವವಿದ್ಯಾಲಯ, ಆಸ್ಪತ್ರೆ ನಿರ್ಮಿಸಬಹುದು. ಇಲ್ಲಿನ ಕಾರ್ಮಿಕರಿಗೆ, ಬಡವರಿಗೆ ವಸತಿ ಕಲ್ಪಿಸಲು ಈ ಜಾಗ ಬಳಸಿಕೊಳ್ಳಬೇಕು. ಈ ಕಂದಾಯ ಜಾಗ ನಮ್ಮ ಜಿಲ್ಲೆಗೆ ಬಳಕೆಯಾಗಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.