
ನರಸಿಂಹರಾಜಪುರ: 2025–26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಕಾಯಕ ಗ್ರಾಮ ಯೋಜನೆಗೆ ತಾಲ್ಲೂಕಿನ 4 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ.
ತಾಲ್ಲೂಕಿನ ಕರ್ಕೇಶ್ವರ, ಸೀತೂರು, ಕಾನೂರು, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗಳು ಕಾಯಕ ಗ್ರಾಮ ಕಾರ್ಯಕ್ರಮಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ–ಆಡಳಿತ ವಿಭಾಗವು ಸಿದ್ಧಪಡಿಸಿರುವ ಗ್ರಾಮ ಪಂಚಾಯತ್ ಪರ್ಫಾರ್ಮೆನ್ಸ್ ರ‍್ಯಾಂಕಿಂಗ್‌ನಂತೆ ಹಿಂದುಳಿದಿರುವ ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಪಂಚಾಯಿತಿ ಕಾರ್ಯ ನಿರ್ವಹಣೆ, ನಿಯಮಿತವಾಗಿ ವಿವಿಧ ಸಭೆಗಳ ಆಯೋಜನೆ, ತೆರಿಗೆ ವಸೂಲಾತಿ ಸೇರಿ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
2025ರ ಏಪ್ರಿಲ್ ತಿಂಗಳ ರ‍್ಯಾಂಕಿಂಗ್ ವರದಿಯಂತೆ ಆಯಾ ತಾಲ್ಲೂಕಿನಲ್ಲಿ ಕೊನೆಯ ಸ್ಥಾನದಲ್ಲಿರುವ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ತಾಲ್ಲೂಕಿನ ಕರ್ಕೇಶ್ವರ ಮತ್ತು ಸೀತೂರು ಗ್ರಾಮ ಪಂಚಾಯಿತಿಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾನೂರು ಮತ್ತು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯನ್ನು ಸಹಾಯಕ ನಿರ್ದೇಶಕರು (ನರೇಗಾ) ಆಯ್ಕೆ ಮಾಡಿಕೊಂಡಿದ್ದಾರೆ.
ಆಯ್ಕೆ ಮಾಡಿಕೊಂಡ ಗ್ರಾಮ ಪಂಚಾಯಿತಿಯನ್ನು ಸಮಗ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜನವಸತಿ ಸಭೆ, ವಾರ್ಡ್ ಸಭೆ, ಗ್ರಾಮಸಭೆ, ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ, ಸಾಮಾನ್ಯ ಸಭೆ ಹಾಗೂ ವಿವಿಧ ಸಮಿತಿ ಸಭೆಗಳನ್ನು ಆಯೋಜಿಸುವುದು. ದೂರದೃಷ್ಟಿ ಯೋಜನೆಯನ್ನು 5 ವರ್ಷದ ಅವಧಿಗಾಗಿ ಸಿದ್ಧಪಡಿಸುವುದು. ಮನರೇಗಾ, 15ನೇ ಹಣಕಾಸು ಆಯೋಗದ ಅನುದಾನ, ಸರ್ಕಾರದ ವಿವಿಧ ಯೋಜನೆಗಳ ಅನುದಾನ ಬಳಸಿಕೊಂಡು ರಸ್ತೆ, ಚರಂಡಿ, ಸ್ಮಶಾನ ಅಭಿವೃದ್ದಿ, ಬಸ್ ನಿಲ್ದಾಣ ಇತ್ಯಾದಿ ಮೂಲ ಸೌಕರ್ಯ ಒದಗಿಸುವುದು. ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ, ಶೇ 100ರಷ್ಟು ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವುದು ಮತ್ತು ವಸೂಲು ಮಾಡುವುದು. ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್, ಶೌಚಾಲಯ, ಅಡುಗೆ ಕೋಣೆ, ಆಟದ ಮೈದಾನ, ಪೌಷ್ಟಿಕ ತೋಟ ನಿರ್ಮಿಸುವುದು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮರಳಿ ಕರೆತರುವುದು. ಪರೀಕ್ಷಾ ಫಲಿತಾಂಶ ಸುಧಾರಣೆ, ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ಗ್ರಂಥಾಲಯ ವ್ಯವಸ್ಥೆ ಕಲ್ಪಿಸುವುದು. ಮಕ್ಕಳ ವಯಸ್ಸಿಗನುಗುಣವಾಗಿ ಅಂಗನವಾಡಿ, ಶಾಲೆಗಳಿಗೆ ದಾಖಲಿಸುವುದು. ಅಪೌಷ್ಟಿಕತೆ ಹೊಂದಿರುವ ಮಕ್ಕಳನ್ನು ಗುರುತಿಸುವುದು. ಬಾಲಕಾರ್ಮಿಕ ಪದ್ಧತಿ ನಿಯಂತ್ರಣ, ಮಕ್ಕಳ ಮರಣ ಪ್ರಮಾಣ ಶೂನ್ಯಕ್ಕಿಳಿಸುವುದು. ಬಾಲ್ಯವಿವಾಹ ನಿರ್ಮೂಲನೆ, ಮಹಿಳೆಯರು ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಲು ಕೌಶಲಭಿವೃದ್ಧಿ ತರಬೇತಿ, ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವುದು. ಎಲ್ಲಾ ಮನೆಗಳಿಗೆ ಶೇ 100ರಷ್ಟು ಶೌಚಾಲಯ ನಿರ್ಮಿಸುವುದು. ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ, ಅಂಗವಿಕಲರಿಗೆ ಶೇ 5, ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಕಡ್ಡಾಯವಾಗಿ ಶೇ 25ರಷ್ಟು ಅನುದಾನ ಮೀಸಲಿಡುವುದು ಸೇರಿದಂತೆ ಇತರೆ ಜವಾಬ್ದಾರಿಗಳನ್ನು ವಹಿಸಲಾಗಿದೆ.
ಕಾಯಕ ಗ್ರಾಮ ಯೋಜನೆಯಡಿ ತಾಲ್ಲೂಕಿನ 4 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಈಗಾಗಲೇ ಅಲ್ಲಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಚ್.ಡಿ.ನವೀನ್ ಕುಮಾರ್ ತಾಲ್ಲೂಕು ಪಂಚಾಯಿತಿ ಇಒ ನರಸಿಂಹರಾಜಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.