ADVERTISEMENT

ಕೆ.ಬಿ.ಹಾಳ್‌: ಗ್ರಾಮ ಭೇಟಿ ಕಾರ್ಯಕ್ರಮ ಇಂದು

ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಉಪಸ್ಥಿತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 5:09 IST
Last Updated 20 ಫೆಬ್ರುವರಿ 2021, 5:09 IST
ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿಯ ಕೆ.ಬಿ.ಹಾಳ್‌ ಗ್ರಾಮದಲ್ಲಿ ಗ್ರಾಮ ಭೇಟಿ ಕಾರ್ಯಕ್ರಮ ಆಯೋಜಿಸಿರುವ ಸ್ಥಳ.
ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿಯ ಕೆ.ಬಿ.ಹಾಳ್‌ ಗ್ರಾಮದಲ್ಲಿ ಗ್ರಾಮ ಭೇಟಿ ಕಾರ್ಯಕ್ರಮ ಆಯೋಜಿಸಿರುವ ಸ್ಥಳ.   

ಚಿಕ್ಕಮಗಳೂರು: ತಾಲ್ಲೂಕಿನ ಕುರುಬರ ಬೂದಿಹಾಳ್‌ (ಕೆ.ಬಿ.ಹಾಳ್‌) ಗ್ರಾಮದಲ್ಲಿ ಇದೇ 20ರಂದು ‘ಗ್ರಾಮ ಭೇಟಿ’ (ಹಳ್ಳಿ ಕಡೆಗೆ ಜಿಲ್ಲಾಧಿಕಾರಿ ನಡಿಗೆ) ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆವರೆಗೆ ನಡೆಯಲಿದೆ.

ಪ್ರಭಾರ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಪೂವಿತಾ, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌, ತಹಶೀಲ್ದಾರ್‌ ಡಾ.ಕಾಂತರಾಜ್‌, ತಾಲ್ಲೂಕು ಮಟ್ಟದ ಆಧಿಕಾರಿಗಳು ಪಾಲ್ಗೊಳ್ಳುವರು.

ADVERTISEMENT

ಕುರುಬರ ಬೂದಿಹಾಳ್‌ ಮತ್ತು ಸುತ್ತಲಿನ ಊರುಗಳ ಗ್ರಾಮಸ್ಥರು ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿ ಇತ್ಯರ್ಥಪಡಿಸಿಕೊಳ್ಳಬಹುದು. ಪಹಣಿ, ಪೌತಿ ಖಾತೆ, ಪಕ್ಕಾ ಪೋಡಿ, ಸಾಮಾಜಿಕ ಭದ್ರತೆ ಯೋಜನೆಗಳ ಪಿಂಚಣಿ, ಪಡಿತರ ಚೀಟಿ, ಸ್ಮಶಾನ, ಆಶ್ರಯ ವಸತಿ ನಿವೇಶನ, ಮೂಲಸೌಕರ್ಯಗಳು ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸಲಿಸಬಹುದು. ಗ್ರಾಮದಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳ ಗಮನ ಸೆಳೆಯಲು ಅವಕಾಶ ಇದೆ.

ಗ್ರಾಮ ಭೇಟಿ ಕಾರ್ಯಕ್ರಮದ ನಿಮಿತ್ತ ಉಪತಹಶೀಲ್ದಾರ್‌, ಗ್ರಾಮ ಲೆಕ್ಕಿಗರು ಹಲವು ಗ್ರಾಮಸ್ಥರಿಂದ ಅರ್ಜಿಗಳನ್ನು ಪಡೆದುಕೊಂಡಿದ್ದಾರೆ. ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಕ್ರಮ ವಹಿಸಲಿದ್ದಾರೆ.

‘ಗ್ರಾಮ ಭೇಟಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮದ ಶಾಲೆಯ ಆವರಣದಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಬೇಕು. ಮಾಸ್ಕ್‌ ಧರಿಸಬೇಕು ಮತ್ತು ಅಂತರ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ’ ಎಂದು ಕೆ.ಬಿ.ಹಾಳ್‌ ಪಿಡಿಒ

ಜಿಲ್ಲಾಧಿಕಾರಿ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲೆಯ ಗ್ರಾಮವೊಂದಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಬೇಕು ಎಂದು ‘ಹಳ್ಳಿ ಕಡೆಗೆ ಜಿಲ್ಲಾಧಿಕಾರಿ ನಡಿಗೆ’ ಕಾರ್ಯಕ್ರಮ ರೂಪಿಸಿದೆ. ಅದರಂತೆ ಜಿಲ್ಲೆಯಲ್ಲಿ ಮೊದಲ ಕಾರ್ಯಕ್ರಮ ಕೆ.ಬಿ.ಹಾಳ್‌ ಗ್ರಾಮದಲ್ಲಿ ಆಯೋಜನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.