ADVERTISEMENT

ಸರ್ವರ ಹಿತಕ್ಕಾಗಿ ದುಡಿದಿದ್ದ ನಾಡಪ್ರಭು ಕೆಂಪೇಗೌಡ: ಜಿಲ್ಲಾಧಿಕಾರಿ ಕೆ.ಎನ್.ರಮೇಶ್

ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 15:27 IST
Last Updated 27 ಜೂನ್ 2023, 15:27 IST
ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿದರು
ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿದರು   

ಚಿಕ್ಕಮಗಳೂರು: ಸಮರ್ಥ ಆಡಳಿತದ ಜತೆಗೆ ದೂರ ದೃಷ್ಟಿಹೊಂದಿ ಸರ್ವರ ಹಿತಕ್ಕಾಗಿ ಕೆರೆಕಟ್ಟೆ, ರಸ್ತೆ, ದೇವಾಲಯ, ಪೇಟೆಗಳನ್ನು ನಿರ್ಮಿಸಿ ಬೆಂಗಳೂರನ್ನು ವಿಶ್ವ ದರ್ಜೆ ನಗರವನ್ನಾಗಿಸುವಲ್ಲಿ ನಾಡಪ್ರಭು ಕೆಂಪೇಗೌಡರ ಹಾಕಿದ ಅಡಿಪಾಯವೇ ಕಾರಣ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್ ಸ್ಮರಿಸಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 514ನೇ ಜಯಂತ್ಯುತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪಾರ ದೂರದೃಷ್ಠಿವುಳ್ಳ ಅವರು ಅಂದಿನ ಕಾಲದಲ್ಲೇ ಕುಲಕಸುಬಿಗೆ ಅನುಗುಣವಾಗಿ ಮಾರುಕಟ್ಟೆ ಪೇಟೆಗಳನ್ನು ನಿರ್ಮಿಸಿದ್ದರು. ಕುಡಿಯುವ ನೀರು, ಕೃಷಿಗಾಗಿ ನೂರಾರು ಕೆರೆಗಳನ್ನು ಕಟ್ಟಿ ಅಭಿವೃದ್ಧಿಪಡಿಸಿದ್ದರು. ಬೆಂಗಳೂರನ್ನು ಬ್ರ್ಯಾಂಡ್ ಆಗಿಸಿ ವಿಶ್ವಕ್ಕೆ ಪರಿಚಯಿಸುವಲ್ಲಿ ಅವರ ಕೊಡುಗೆ ಅಗ್ರಮಾನ್ಯ. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಇಂದಿಗೂ ಪ್ರಸ್ತುತ ಎಂದರು.

ADVERTISEMENT

ಬೆಂಗಳೂರು ಇಂದು ‘ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ’ ಎಂದು ಹೆಸರಾಗಿದೆ. ದೇಶದಲ್ಲಿ ಶೇ40 ರಷ್ಟು ಸಾಫ್ಟವೇರ್ ಹಾಗೂ ಶೇ 80 ರಷ್ಟು ಗ್ಲೋಬಲ್ ಐಟಿ ಉತ್ಪನ್ನಗಳು ಬೆಂಗಳೂರಿನಿಂದಲೇ ರಫ್ತಾಗುತ್ತಿವೆ. ಸುಮಾರು 13 ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಸೃಷ್ಟಿಯಾಗಿದೆ. ಇದೆಲ್ಲ ಕೆಂಪೇಗೌಡರ ದೂರದೃಷ್ಠಿಯ ಫಲ ಎಂದು ಬಣ್ಣಿಸಿದರು.

ಉಪನ್ಯಾಸ ನೀಡಿದ ಕನ್ನಡ ಪ್ರಾಧ್ಯಾಪಕ ಡಾ. ಎಚ್‌.ಎಂ.ಮಹೇಶ್, ‘ಕೆಂಪೇಗೌಡರು ನ್ಯಾಯ, ನಿಷ್ಠೆ, ಧರ್ಮದಿಂದ ಆಡಳಿತ ನಡೆಸಿದ ಸಮರ್ಥ ಪಾಳೇಗಾರ. ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕು ಎಂಬ ಸದಾಶಯ ಹೊಂದಿದ್ದರು. ಸಾಂಸ್ಕೃತಿಕ, ಸಾಮಾಜಿಕ ಕಳಕಳಿಹೊಂದಿದ್ದ ಅವರು ದೇವಾಲಯ, ಕೆರೆಗಳು, ಉದ್ಯಾನಗಳನ್ನು ನಿರ್ಮಾಣ ಮಾಡುವ ಜತೆಗೆ ಸಾಲುಮರಗಳನ್ನು ನೆಟ್ಟು ಪೋಷಿಸಿದರು. ಕುಲಕಸುಬಿಗೆ ಅನುಗುಣವಾಗಿ ಚಿಕ್ಕಪೇಟೆ, ದೊಡ್ಡಪೇಟೆ, ಮಂಡಿಪೇಟೆ, ತರಗಿನಪೇಟೆ ಸಹಿತ 64 ಪೇಟೆಗಳನ್ನು ನಿರ್ಮಿಸಿದರು. ರಾಜ್ಯದ ಬೊಕ್ಕಸಕ್ಕೆ ಇಂದಿಗೂ ಅಲ್ಲಿಂದಲೇ ಆದಾಯ ಬರುತ್ತಿದೆ’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್‌, ಉಪಾಧ್ಯಕ್ಷ ಲಕ್ಷ್ಮಣ್‌, ಎಐಟಿ ಕಾಲೇಜು ಪ್ರಾಂಶುಪಾಲ ಸಿ.ಟಿ.ಜಯದೇವ, ಸವಿತಾ ರಮೇಶ್, ಪ್ರಕಾಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.