ADVERTISEMENT

ವಿದ್ಯಾರ್ಥಿಗಳಿಗೆ ಕಾದಿರುವ ಕೇಂದ್ರೀಯ ವಿದ್ಯಾಲಯ

ಕಾಮಗಾರಿ ಪೂರ್ಣಗೊಂಡ ನಾಲ್ಕು ತಿಂಗಳಾದರೂ ಹಸ್ತಾಂತರವಾಗದ ಕಟ್ಟಡ

ಪ್ರಜಾವಾಣಿ ವಿಶೇಷ
Published 3 ಅಕ್ಟೋಬರ್ 2023, 5:09 IST
Last Updated 3 ಅಕ್ಟೋಬರ್ 2023, 5:09 IST
ಚಿಕ್ಕಮಗಳೂರು ನಗರದ ಹೊರ ವಲಯದಲ್ಲಿ ನಿರ್ಮಾಣವಾಗಿರುವ ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡ
ಚಿಕ್ಕಮಗಳೂರು ನಗರದ ಹೊರ ವಲಯದಲ್ಲಿ ನಿರ್ಮಾಣವಾಗಿರುವ ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡ   

–ವಿಜಯಕುಮಾರ್ ಎಸ್.ಕೆ.

ಚಿಕ್ಕಮಗಳೂರು: ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಗುತ್ತಿಗೆದಾರರಿಂದ ಹಸ್ತಾಂತರ ಮಾಡಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳ್ಳದೆ ಹೊಸ ಕಟ್ಟಡ ನಾಲ್ಕು ತಿಂಗಳಿಂದ ವಿದ್ಯಾರ್ಥಿಗಳಿಗೆ ಕಾದಿದೆ.

ದೇಶದಲ್ಲಿ ಕೇಂದ್ರೀಯ ವಿದ್ಯಾಲಯಗಳ ಪರಿಕಲ್ಪನೆ 1965ರಿಂದಲೇ ಆರಂಭವಾಗಿದೆ. ಆದರೆ, ಚಿಕ್ಕಮಗಳೂರಿಗೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದು 2018ರಲ್ಲಿ. ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿದ್ದು, 400 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ADVERTISEMENT

₹26 ಕೋಟಿ ವೆಚ್ಚದಲ್ಲಿ ನಗರದ ಹೊರ ವಲಯದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಮೂರು ಅಂತಸ್ತಿನ ಕಟ್ಟಡ, ವಿಶಾಲವಾದ ಆಟದ ಮೈದಾನ, ಪ್ರಾಂಶುಪಾಲರು ಮತ್ತು ಬೋಧಕ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣವಾಗಿದೆ. ಎಲ್ಲವೂ ಸುಸಜ್ಜಿತವಾಗಿದೆ.

ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಕಟ್ಟಡ ವೀಕ್ಷಣೆ ಮಾಡಿ ಕೂಡಲೇ ಕಾರ್ಯಾರಂಭ ಮಾಡಿಸಲು ಸೂಚನೆ ನೀಡಿದ್ದರು. ಇದಾಗಿ ಮೂರು ತಿಂಗಳಾದರೂ ಉದ್ಘಾಟನೆಯೂ ಆಗಿಲ್ಲ, ಸ್ಥಳಾಂತರವೂ ಆಗಿಲ್ಲ. ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರು ವಿದ್ಯಾಲಯಕ್ಕೆ ಹಸ್ತಾಂತರ ಮಾಡಲು ಕಾದಿದ್ದಾರೆ.

ಕಾಯಂ ಪ್ರಾಂಶುಪಾಲರೇ ಇಲ್ಲದಿರುವುದು, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗಿರುವ ವಿಳಂಬವೇ ಹೊಸ ಕಟ್ಟಡ ಸ್ಥಳಾಂತರಕ್ಕೆ ತೊಡಕಾಗಿದೆ ಎಂಬುದು ಪೋಷಕರ ಅಭಿಪ್ರಾಯ.

ಕಾಯಂ ಪ್ರಾಂಶುಪಾಲರನ್ನು ನಿಯೋಜನೆ ಮಾಡದೆ ಹಂಗಾಮಿಯಾಗಿ ಜವಾಬ್ದಾರಿ ವಹಿಸಿಕೊಳ್ಳುವ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಅವರು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ವಿದ್ಯಾರ್ಥಿಗಳು ಮತ್ತು ಪೋಷಕರು ಪರಿತಪಿಸುವಂತಾಗಿದೆ.

ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿ ಮೂರು ವರ್ಷಗಳು ಕಳೆದಿವೆ. ಕಾಮಗಾರಿ ಆರಂಭಿಸಿ ಎರಡು ವರ್ಷವಾಗಿದೆ. ನೀರಿನ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆಲೋಚನೆ ಮಾಡಿದ್ದರೆ ಈಗ ಪರದಾಡುವ ಸಂದರ್ಭ ಬರುತ್ತಿರಲಿಲ್ಲ ಎಂದು ಪೋಷಕರು ಹೇಳುತ್ತಾರೆ.

ಸಿಬ್ಬಂದಿ ಕೊರತೆಯೂ ಕೇಂದ್ರೀಯ ವಿದ್ಯಾಲಯವನ್ನು ಕಾಡುತ್ತಿದೆ. ಶೇ 50ರಷ್ಟು ಕಾಯಂ ಸಿಬ್ಬಂದಿ ಇದ್ದು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪೋಷಕರು ಆಲೋಚಿಸುವಂತಾಗಿದೆ. ಹೊಸ ಕಟ್ಟಡಕ್ಕೆ ಶಾಲೆ ಸ್ಥಳಾಂತರ ಮಾಡಿ ಕಾಯಂ ಪ್ರಾಂಶುಪಾಲರು ಮತ್ತು ಬೋಧಕ ಸಿಬ್ಬಂದಿಯನ್ನು ನಿಯೋಜಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ ಎಂಬುದು ಪೋಷಕರ ಅಭಿಪ್ರಾಯ.

ಚಿಕ್ಕಮಗಳೂರು ನಗರದ ಹೊರ ವಲಯದಲ್ಲಿ ನಿರ್ಮಾಣವಾಗಿರುವ ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡ

ಕೂಡಲೇ ಸ್ಥಳಾಂತರಕ್ಕೆ ಒತ್ತಾಯ

ಶಾಲೆ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ವಿಳಂಬವಾಗುತ್ತಿದೆ ಎಂದು ಕೇಂದ್ರೀಯ ವಿದ್ಯಾಲಯ ಪೋಷಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ರಾಜ್ ಅರಸ್ ತಿಳಿಸಿದರು. ಜಿಲ್ಲಾಧಿಕಾರಿ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಕಾಯಂ ಶಿಕ್ಷಕರು ಪ್ರಾಂಶುಪಾಲರನ್ನು ನಿಯೋಜಿಸಿ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿದರೆ ಎಲ್ಲಾ ಸಮಸ್ಯೆಯೂ ಪರಿಹಾರ ಆಗಲಿದೆ ಎಂದರು. ಈಗ 400 ವಿದ್ಯಾರ್ಥಿಗಳಿಗೆ ಅವಕಾಶ ಇದ್ದು ಈ ಸಂಖ್ಯೆಯನ್ನು 800ಕ್ಕೆ ಹೆಚ್ಚಿಸಲು ಹೊಸ ಕಟ್ಟಡದಲ್ಲಿ ಅವಕಾಶ ಇದೆ. ಚಿಕ್ಕಮಗಳೂರಿನ ಜನರಿಗೆ ಇದರಿಂದ ಅನುಕೂಲ ಆಗಲಿದೆ. ಕೂಡಲೇ ಕಟ್ಟಡ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿ ಶಾಲೆಯನ್ನು ಸ್ಥಳಾಂತರ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಶೀಘ್ರವೇ ಸಭೆ

ಜಿಲ್ಲಾಧಿಕಾರಿ ಕಟ್ಟಡ ಮೇಲ್ವಿಚಾರಣಾ ಸಮಿತಿ ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕಿದ್ದು ಶೀಘ್ರವೇ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು. ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆತ ಕೂಡಲೇ ಹೊಸ ಕಟ್ಟಡದಲ್ಲಿ ತರಗತಿ ಆರಂಭಿಸಲಾಗುವುದು. ಈಗಿರುವ ಮಕ್ಕಳ ಸಂಖ್ಯೆಗೆ ಸಾಕಾಗುವಷ್ಟು ನೀರಿನ ಸೌಕರ್ಯ ಇದೆ. ಜೆಜೆಎಂ ಯೋಜನೆಯಡಿಯೂ ನೀರಿನ ಸಂಪರ್ಕ ಕಲ್ಪಿಸಲು ಯೋಚಿಸಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.