
ತರೀಕೆರೆ: ಖರೀದಿ ಕೇಂದ್ರಗಳಲ್ಲಿ ರೈತರಿಗೆ ಕಿಂಚಿತ್ತಾದರೂ ತೊಂದರೆ ಉಂಟಾದರೆ ಅದನ್ನು ಸಹಿಸುವುದಿಲ್ಲ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ವತಿಯಿಂದ ರಾಗಿ, ಭತ್ತ, ಸಾಮೆ ಮತ್ತು ನವಣೆಗಳ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖರೀದಿ ಪ್ರಕ್ರಿಯೆಯಲ್ಲಿ ದಲ್ಲಾಳಿಗಳ ಹಾವಳಿ, ತೂಕ ಮತ್ತು ಅಳತೆ ವ್ಯತ್ಯಾಸ, ಹಣ ಪಾವತಿ ವಿಳಂಬ ಸೇರಿದಂತೆ ರೈತರಿಗೆ ತೊಂದರೆ ಉಂಟಾದರೆ ಸದನದಲ್ಲಿ ಪ್ರಸ್ತಾಪಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರವು ಭತ್ತಕ್ಕೆ ಸಾಮಾನ್ಯ ದರ್ಜೆಗೆ ₹2,369, ಗ್ರೇಡ್ ‘ಎ’ಗೆ ₹2,389, ರಾಗಿಗೆ ₹4,886 ಹಾಗೂ ಸಾಮೆ ಮತ್ತು ನವಣೆಗೆ ₹4,886 ಬೆಂಬಲ ಬೆಲೆಯನ್ನು ನಿಗದಿ ಮಾಡಿದೆ. ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ರಾಗಿಗೆ ಹೆಚ್ಚುವರಿ ಪ್ರೋತ್ಸಾಹ ನೀಡಲಾಗಿದ್ದು, ರೈತರು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ತರೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಜ್ಜಂಪುರ ಮತ್ತು ತರೀಕೆರೆ ತಾಲ್ಲೂಕುಗಳಲ್ಲಿ ತಲಾ ಒಂದು ಖರೀದಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಶಿವನಿ ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯಲಾಗುತ್ತದೆ. ಮುಂದಿನ ಸಾಲಿನಲ್ಲಿ ಶಿವನಿ ಆರ್.ಎಸ್. ಪ್ರದೇಶದಲ್ಲಿ ಮತ್ತೊಂದು ರಾಗಿ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಯೋಗಾನಂದ್, ಪ್ರಸಕ್ತ ಸಾಲಿನಲ್ಲಿ ತರೀಕೆರೆ ತಾಲ್ಲೂಕಿನಿಂದ 1,266 ರೈತರು 35,640 ಕ್ವಿಂಟಲ್ ಹಾಗೂ ಅಜ್ಜಂಪುರ ತಾಲ್ಲೂಕಿನಿಂದ 4,558 ರೈತರು 1,17,758 ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಾಯಿಸಿದ ಎಫ್.ಐ.ಡಿ. ವಿವರಗಳು ಸರಿಯಾಗಿರಬೇಕು. ಎನ್.ಐ.ಸಿ.-ಎಫ್.ಐ.ಸಿ. ತಂತ್ರಾಂಶದ ಮೂಲಕ ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.
ಪ್ರತಿ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 5 ಎಕರೆವರೆಗೆ 50 ಕ್ವಿಂಟಲ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಖರೀದಿ ಕೇಂದ್ರದಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ರೈತರೊಂದಿಗೆ ಗೌರವದಿಂದ ವರ್ತಿಸಬೇಕೆಂದು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ರೈತರ ಪರವಾಗಿ ಅಜ್ಜಂಪುರ ತಾಲ್ಲೂಕಿನ ನಿರಂಜನ್ ಹಾಗೂ ಕಲ್ಕೇರೆ ರವಿ ಮಾಹಿತಿ ನೀಡಿದರು. ಎಪಿಎಂಸಿ ಕಾರ್ಯದರ್ಶಿ ಮೋಹನ್ ಎಚ್.ಬಿ. ಸ್ವಾಗತಿಸಿದರು. ಟಿ.ಆರ್. ಶ್ರೀಧರ್, ಮಹೇಂದ್ರ, ಕೆ.ಎಫ್.ಸಿ. ಜಿಲ್ಲಾ ವ್ಯವಸ್ಥಾಪಕಿ ಅನುರಾಧ ಹಾಗೂ ರೈತ ಉತ್ಪಾದಕ ಸಂಘದ ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.