ADVERTISEMENT

ಇಂದು ಕೋಡಿ ಕಿನಾರೆಯಲ್ಲಿ ‘ಗಾಳಿಪಟ ಉತ್ಸವ’

ದಿ. ರಾಮಚಂದ್ರ ಭಟ್ ಹಾಗೂ ದಿ. ಅಹಲ್ಯ ಆರ್. ಭಟ್ ಅವರ ಸ್ಮರಣಾರ್ಥ ಟೀಂ ಪಾರಿಜಾತ ಆಯೋಜನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:34 IST
Last Updated 18 ಜನವರಿ 2026, 6:34 IST
ಕುಂದಾಪುರ ಕೋಡಿ ಕಿನಾರೆಯಲ್ಲಿ ಹರೀಶ್ ಸಾಗಾ ಮತ್ತು ತಂಡದವರು ರಚಿಸಿದ ಮರಳು ಶಿಲ್ಪ
ಕುಂದಾಪುರ ಕೋಡಿ ಕಿನಾರೆಯಲ್ಲಿ ಹರೀಶ್ ಸಾಗಾ ಮತ್ತು ತಂಡದವರು ರಚಿಸಿದ ಮರಳು ಶಿಲ್ಪ   

ಕುಂದಾಪುರ: 1969ರಿಂದ ತಾಲ್ಲೂಕಿನ ಜನರಿಗೆ ಸಸ್ಯಾಹಾರ ಉಪಹಾರ ಹಾಗೂ ಖಾದ್ಯಗಳನ್ನು ಒದಗಿಸುತ್ತಿದ್ದ ಪಾರಿಜಾತ ಸಂಸ್ಥೆಯ ಸ್ಥಾಪಕರಾದ ದಿ. ರಾಮಚಂದ್ರ ಭಟ್ ಹಾಗೂ ದಿ. ಅಹಲ್ಯ ಆರ್. ಭಟ್ ಅವರ ಸ್ಮರಣಾರ್ಥವಾಗಿ, ಅವರ ಪುತ್ರ ಗಣೇಶ್ ಆರ್. ಭಟ್ ನೇತೃತ್ವದಲ್ಲಿ ‘ಟೀಂ ಪಾರಿಜಾತ’ ಜ. 18ರಂದು ಕೋಡಿಯ ಚಕ್ರಮ್ಮ ದೇವಸ್ಥಾನದ ಬಳಿಯ ಕೋಡಿ ಕಡಲ ಕಿನಾರೆಯಲ್ಲಿ ‘ಗಾಳಿಪಟ ಉತ್ಸವ–2026’ ಆಯೋಜನೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಸೃಜನಶೀಲತೆ, ಬೌದ್ಧಿಕ ಬೆಳವಣಿಗೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳನ್ನು ಹೊರಾಂಗಣ ಚಟುವಟಿಕೆಗಳತ್ತ ಆಕರ್ಷಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಗಣೇಶ್ ಭಟ್ ತಿಳಿಸಿದ್ದಾರೆ.

ಉತ್ಸವದ ಪೂರ್ವಭಾವಿಯಾಗಿ ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ 3ರಿಂದ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಗಾಳಿಪಟ ರಚನಾ ಸ್ಪರ್ಧೆಯನ್ನು ‘ಟೀಂ ಪಾರಿಜಾತ’ ಯಶಸ್ವಿಯಾಗಿ ಆಯೋಜಿಸಿತ್ತು. ಪ್ರತಿಯೊಂದು ಶಾಲೆಯಿಂದ ಓರ್ವ ಬಾಲಕ ಮತ್ತು ಓರ್ವ ಬಾಲಕಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಗಾಳಿಪಟ ಉತ್ಸವ: ಅಂತರರಾಷ್ಟ್ರೀಯ ಗಾಳಿಪಟ ದಿನದ ಅಂಗವಾಗಿ ಇಂದು (ಭಾನುವಾರ) ಸಂಜೆ 4ರಿಂದ 6ರವರೆಗೆ ನಡೆಯುವ ಗಾಳಿಪಟ ಉತ್ಸವದಲ್ಲಿ ಭಾಗವಹಿಸುವ ಮಕ್ಕಳಿಗೆ ಉಚಿತವಾಗಿ ಗಾಳಿಪಟ ಹಾಗೂ ಉಡುಗೊರೆಗಳನ್ನು ವಿತರಿಸಲಾಗುತ್ತದೆ.

ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೆ, ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ ಸಂಗೀತ ರಸಸಂಜೆ ಆಯೋಜಿಸಲಾಗಿದೆ. ಝೀ ಟಿವಿ ಕನ್ನಡ ‘ಸರಿಗಮಪ’ ರಿಯಾಲಿಟಿ ಶೋ ಖ್ಯಾತಿಯ ಶ್ರೀಹರ್ಷ, ಪೃಥ್ವಿ ಭಟ್ ಸೇರಿದಂತೆ ಇತರ ಕಲಾವಿದರು ಭಾಗವಹಿಸಲಿದ್ದು, ವಾಮನ ಕೆ. ಹಾಗೂ ಸಂಗಡಿಗರು ಹಿನ್ನಲೆ ಸಂಗೀತ ನೀಡಲಿದ್ದಾರೆ.

ಮರಳು ಶಿಲ್ಪ ರಚನೆ: ಉತ್ಸವದ ಪೂರಕವಾಗಿ ಶನಿವಾರ ಮರಳು ಶಿಲ್ಪಕಲಾವಿದ ಹರೀಶ್ ಸಾಗ ಹಾಗೂ ತಂಡದವರು ರಚಿಸಿದ ಮರಳು ಶಿಲ್ಪ ನೋಡುಗರ ಕಣ್ಮನ ಸೆಳೆಯಿತು.

ಗಾಳಿಪಟ ಉತ್ಸವದಲ್ಲಿ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ‘ಟೀಂ ಪಾರಿಜಾತ’ ಪರವಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆ. ಪ್ರೇಮಾನಂದ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.