ADVERTISEMENT

ಮೈ ಜುಮ್ಮೆನಿಸಿದ 4*4 ಆಫ್ ರೋಡ್ ರ್‍ಯಾಲಿ

ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ರ್‍ಯಾಲಿಗೆ ನೋಡುಗರು ಫಿದಾ; ಸಾಹಸ ಮೆರೆದ ಚಾಲಕರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 4:47 IST
Last Updated 12 ಅಕ್ಟೋಬರ್ 2025, 4:47 IST
ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ರ್‍ಯಾಲಿಯಲ್ಲಿ ಜಿಪ್ಸಿ ಹಳ್ಳದಲ್ಲಿ ಸಾಗಿದ ಪರಿ
ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ರ್‍ಯಾಲಿಯಲ್ಲಿ ಜಿಪ್ಸಿ ಹಳ್ಳದಲ್ಲಿ ಸಾಗಿದ ಪರಿ   

ಕೊಪ್ಪ: ಇಲ್ಲಿನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 8ನೇ ವರ್ಷದ ‘ಮಲ್ನಾಡ್ ಇಕೊ ಡ್ರೈವ್ 2025’ 4*4 ಆಫ್ ರೋಡ್ ರ್‍ಯಾಲಿ ನೋಡುಗರ ಮೈ ಜುಮ್ಮೆನಿಸಿತು.

ತಾಲ್ಲೂಕಿನ ಹಿರೇಕೊಡಿಗೆ ಗ್ರಾಮದ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ರ್‍ಯಾಲಿಗೆ ಚಾಲನೆ ನೀಡಲಾಯಿತು.

ಶೆಟ್ಟಿಹಡ್ಲು, ಅಬ್ಬಿಗುಂಡಿ, ಅಸೂಡಿ, ಬಿಳುವಿನಕೊಪ್ಪ, ದೋರಗಲ್, ಅಲಿಗೆ ಭಾಗದಲ್ಲಿ ಹಳ್ಳ, ಅಡಿಕೆ ತೋಟ, ಗದ್ದೆಗಳಲ್ಲಿ ಚಾಲಕರು ಹರಸಾಹಸಪಟ್ಟು ವಾಹನ ಚಲಾಯಿಸಿದರು. ಮಹಿಳೆಯರು ವಾಹನ ಚಲಾಯಿಸಿ, ಸಾಹಸ ಮೆರೆದರು.

ADVERTISEMENT

ಏರು, ತಗ್ಗು–ದಿಣ್ಣೆ, ಕಡಿದಾದ ರಸ್ತೆಯಲ್ಲಿ ವಾಹನ ಚಲಾಯಿಸಿದ ಪರಿ ನೋಡುಗರನ್ನು ಆಕರ್ಶಿಸಿತು. ಕೆಲವು ಕಡೆಗಳಲ್ಲಿ ಟ್ರ್ಯಾಕ್ ಮಧ್ಯೆ ವಾಹನ ಸಿಲುಕಿಕೊಂಡಾಗ ಅದನ್ನು ಮೇಲೆ ಎಳೆದು ತರಲು 4*4 ಟ್ರ್ಯಾಕ್ಟರ್ ಬಳಸಲಾಯಿತು. ಮಳೆ ಬಂದಿದ್ದ ಕಾರಣಕ್ಕೆ ಟ್ರ್ಯಾಕ್ ಕೆಸರುಮಯವಾಗಿತ್ತು. ಅಕ್ಕ ಪಕ್ಕದಲ್ಲಿ ನೋಡುತ್ತಾ ಮೂಕವಿಸ್ಮಿತರಾಗಿ ನಿಂತಿದ್ದವರ ಮೈಗೆ ಕೆಸರು ರಾಚಿತು. 

ಜೀಪ್, ಜಿಪ್ಸಿ, ಥಾರ್, ಜಿಮ್ಮಿ, ಫಾರ್ಚುನರ್ ಸೇರಿದಂತೆ 150ಕ್ಕೂ ಹೆಚ್ಚು ವಾಹನಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದವು. ಬೆಳಿಗ್ಗೆ ರ್‍ಯಾಲಿಗೆ ಉದ್ಯಮಿ ವಿಶ್ವನಾಥ್ ಗದ್ದೆಮನೆ ಚಾಲನೆ ನೀಡಿದರು.

ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಚಿನ್ ನಂದಿಗೋಡು, ಕಾರ್ಯದರ್ಶಿ ರೋಹಿತ್ ಬಾಳೆಗದ್ದೆ, ಪದಾಧಿಕಾರಿಗಳಾದ ಪೃಥ್ವಿರಾಜ್ ಕೌರಿ, ಸುನಿಲ್, ಮಂಜುನಾಥ್ ತನೂಡಿ, ಇಂದ್ರೇಶ್ ಕೆ.ಎನ್., ಅನೂಪ್ ನಾರ್ವೆ, ಹಿರೇಕೊಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ಇದ್ದರು.

ಆಫ್ ಟ್ರ್ಯಾಕ್‌ನಲ್ಲಿ ಜೀಪ್ ಝಲಕ್
ಕೆಸರಲ್ಲಿ ಸಿಲುಕಿದ್ದ ಥಾರ್
ಗದ್ದೆಯಲ್ಲಿ ದಿಣ್ಣೆ ಏರಿದ ಫಾರ್ಚುನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.