ADVERTISEMENT

ಕೊಪ್ಪ: ನೇಪಾಳದ ಮೂವರು ಮನೆಗಳ್ಳರ ಬಂಧನ

₹ 1.75 ಕೋಟಿ ಮೌಲ್ಯದ ಸ್ವತ್ತು ವಶ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 6:21 IST
Last Updated 24 ಆಗಸ್ಟ್ 2025, 6:21 IST
ಕೊಪ್ಪದಲ್ಲಿ ಮನೆಗಳ್ಳತನ ಮಾಡಿದ ಮೂವರು ಆರೋಪಿಗಳನ್ನು ಸ್ವತ್ತು ಸಹಿತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಬಾಲಾಜಿ ಸಿಂಗ್, ಪಿಎಸ್ಐ ಬಸವರಾಜ್ ಜಿ.ಕೆ ಭಾಗವಹಿಸಿದ್ದರು
ಕೊಪ್ಪದಲ್ಲಿ ಮನೆಗಳ್ಳತನ ಮಾಡಿದ ಮೂವರು ಆರೋಪಿಗಳನ್ನು ಸ್ವತ್ತು ಸಹಿತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಬಾಲಾಜಿ ಸಿಂಗ್, ಪಿಎಸ್ಐ ಬಸವರಾಜ್ ಜಿ.ಕೆ ಭಾಗವಹಿಸಿದ್ದರು   

ಕೊಪ್ಪ: ಮನೆಗಳ್ಳತನ ಪ್ರಕರಣದಲ್ಲಿ ಮೂವರು ನೇಪಾಳಿ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ಅಂದಾಜು ಮೊತ್ತ ₹1.50 ಕೋಟಿ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಎರಡು ಕಾರು ಸೇರಿದಂತೆ ಒಟ್ಟು ₹ 1.75 ಕೋಟಿ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೈಲಾಲಿ ಜಿಲ್ಲೆಯ ಧನಗೇಡಿಯ ರಾಜೇಂದ್ರ ಶೇರ್‌ಬಾಯ್ (30), ಏಕೇಂದ್ರ ಕುಟಲ್ ಬದ್ವಾಲ್ (31), ದಾಮಡಿ ಕರಂಸಿಂಗ್ ಬಹದ್ದೂರ್ ಬಂಧಿತರು.

ಪಟ್ಟಣ ಸಮೀಪದ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್‌ನಲ್ಲಿರುವ ಜೆಡಿಎಸ್ ಮುಖಂಡ ಎಚ್.ಜಿ.ವೆಂಕಟೇಶ್ ಅವರ ಮನೆಯಲ್ಲಿ ಗುರುವಾರ (ಆ.21) ₹6 ಲಕ್ಷ ನಗದು, ₹37.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಆಗಿರುವ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಅವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಜಯಕುಮಾರ್ ಅವರ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡ ರಚಿಸಿದ್ದರು. 

ADVERTISEMENT

ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಶುಕ್ರವಾರ ರಾತ್ರಿ ಮೂವರು ನೇಪಾಳದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಅಂದಾಜು ₹1.50 ಕೋಟಿ ಮೌಲ್ಯದ 1.8 ಕೆ.ಜಿ ಚಿನ್ನ, 1.2 ಕೆ.ಜಿ.ಬೆಳ್ಳಿಯ ಆಭರಣ, ಕೃತ್ಯಕ್ಕೆ ಬಳಸಿದ ಎರಡು ಕಾರುಗಳು (₹25 ಲಕ್ಷ) ಸೇರಿ ಒಟ್ಟು ₹1.75 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿದ್ದಾರೆ.

ಮನೆ ಕಳ್ಳತನ ಪ್ರಕರಣದಲ್ಲಿ ಯಶಸ್ವಿಯಾಗಿ ಆರೋಪಿತರನ್ನು ಸ್ವತ್ತು ಸಹಿತ ವಶಕ್ಕೆ ಪಡೆಯುವಲ್ಲಿ ಶ್ರಮಿಸಿದ ಅಪರಾಧ ಪತ್ತೆ ತಂಡದ ಕಾರ್ಯವನ್ನು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ. ಚಿಕ್ಕಮಗಳೂರು ಸೆನ್ ಡಿವೈಎಸ್ಪಿ ತಿಪ್ಪೇಸ್ವಾಮಿ, ಪಿಎಸ್‌ಐ ಖಾದರ್, ಕಾನ್‌ಸ್ಟೆಬಲ್ ಹರೀಶ್, ರಮೇಶ ಅವರನ್ನು ಒಳಗೊಂಡ ತಂಡ ಹಾಗೂ ಕೊಪ್ಪ ಡಿವೈಎಸ್ಪಿ ಬಾಲಾಜಿಸಿಂಗ್,  ಪಿಎಸ್ಐ ಬಸವರಾಜ ಜಿ.ಕೆ., ಹೆಡ್‌ ಕಾನ್‌ಸ್ಟೆಬಲ್ ತಿಪ್ಪೇಶ, ಕಾನ್‌ಸ್ಟೆಬಲ್ ಯುವರಾಜ, ಪ್ರಕಾಶ ಅವರನ್ನು ಒಳಗೊಂಡ ಇನ್ನೊಂದು ತಂಡ ಕಾರ್ಯಾಚರಣೆಗೆ ಇಳಿದಿತ್ತು.

ಕೃತ್ಯದಲ್ಲಿ ಭಾಗಿಯಾದ ದಂಪತಿ ಪರಾರಿ

ಮಣಿಪುರ ಎಸ್ಟೇಟ್ ಮನೆಯಲ್ಲಿ ಕಳೆದ 10 ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ನೇಪಾಳ ಮೂಲದ ದಂಪತಿ ಯೋಜನೆ ರೂಪಿಸಿ ಬೇರೆ ಕಡೆಯಿಂದ ತಂಡವನ್ನು ಕರೆಸಿ ಕೃತ್ಯವೆಸಗಿದ್ದಾರೆ.

ಈಗ ಆ ದಂಪತಿ ತಲೆಮರೆಸಿಕೊಂಡಿದ್ದಾರೆ. ತನಿಖೆ ಪ್ರಕಾರ ಕೃತ್ಯದಲ್ಲಿ ಭಾಗಿಯಾದ ಇನ್ನೂ ಎರಡು ತಂಡಗಳಿದ್ದು ಬೇರೆ ಬೇರೆ ರಾಜ್ಯದ ಪೊಲೀಸರ ಸಹಕಾರದೊಂದಿಗೆ ಆ ತಂಡವನ್ನು ಬಂಧಿಸಲು ಕ್ರಮ ವಹಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆಗಾಗಿ ಮತ್ತೆ ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.

ಸಾರ್ವಜನಿಕರಲ್ಲಿ ಮನವಿ: ಸಾರ್ವಜನಿಕರು ಮನೆಯಲ್ಲಿ ಹೆಚ್ಚು ಚಿನ್ನಾಭರಣ ಮತ್ತು ನಗದನ್ನು ಇಡದೆ ಬ್ಯಾಂಕ್‌ಗಳಲ್ಲಿ ಇಡುವುದು ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಉತ್ತಮ. ಸಾರ್ವಜನಿಕರು ಮನೆ ಬಿಟ್ಟು ಹೊರಗಡೆ ಹೋಗುವಾಗ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು. ಅಪರಿಚಿತ ಅನುಮಾನಾಸ್ಪದ ವ್ಯಕ್ತಿಗಳನ್ನು ಹೊರರಾಜ್ಯ ಹೊರ ದೇಶದವರನ್ನು ಮನೆ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಅವರ ಪೂರ್ವಾಪರ ಪರಿಶೀಲಿಸಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುವುದರಿಂದ ಅಪರಾಧ ಕೃತ್ಯ ತಡೆಗಟ್ಟಲು ಸಾಧ್ಯ ಎಂದು ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.