ADVERTISEMENT

ಬಲ್ಲಾಳರಾಯನದುರ್ಗ: ಗ್ರಾಮ ಅರಣ್ಯ ಸಮಿತಿ ರಚನೆಗೆ ಆಗ್ರಹ

ಪ್ರವಾಸಿಗರಿಂದ ಶುಲ್ಕ ವಸೂಲಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 6:10 IST
Last Updated 2 ಅಕ್ಟೋಬರ್ 2022, 6:10 IST
ಸುಂಕಸಾಲೆ ಗ್ರಾಮ ಪಂಚಾಯಿತಿ ಗ್ರಾಮಸ್ಥರು ಬಲ್ಲಾಳರಾಯನದುರ್ಗದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಸುಂಕಸಾಲೆ ಗ್ರಾಮ ಪಂಚಾಯಿತಿ ಗ್ರಾಮಸ್ಥರು ಬಲ್ಲಾಳರಾಯನದುರ್ಗದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.   

ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಸುಂಕಸಾಲೆ ಸಮೀಪದ ಬಲ್ಲಾಳರಾಯನದುರ್ಗ ಪ್ರವಾಸಿತಾಣ ನಿರ್ವಹಣೆ ಹಾಗೂ ಪ್ರವೇಶ ಶುಲ್ಕ ಪಡೆಯುವ ಜವಾಬ್ದಾರಿಗೆ ಗ್ರಾಮ ಅರಣ್ಯ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ರಾಣಿ ಝರಿ ಸಾಗುವ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಸುಂಕಸಾಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಜೇಂದ್ರ ಮಾತನಾಡಿ, ‘ಬಲ್ಲಾಳರಾಯನ ದುರ್ಗ ಪ್ರವಾಸಿ ತಾಣದಲ್ಲಿ ಅರಣ್ಯ ಇಲಾಖೆ ಎಕೋ ಟೂರಿಸಂ ಹೆಸರಲ್ಲಿ ಪ್ರವಾಸಿಗರಿಂದ ₹ 304 ಶುಲ್ಕ ವಸೂಲಿ ಮಾಡುತ್ತಿದೆ. ಆದರೆ, ಪ್ರವಾಸಿಗರಿಗೆ ಮೂಲ ಸೌಲಭ್ಯವನ್ನು ನೀಡುತ್ತಿಲ್ಲ. ಅರಣ್ಯ ಇಲಾಖೆಯು ಬಲ್ಲಾಳರಾಯದುರ್ನ ವ್ಯಾಪ್ತಿಯ ಪ್ರವಾಸಿತಾಣದಲ್ಲಿ ಶುಲ್ಕ ವಿಧಿಸಲು ಗ್ರಾಮ ಅರಣ್ಯ ಸಮಿತಿ ರಚನೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಎಂ.ಪಿ ಕುಮಾರಸ್ವಾಮಿ ಮಾತನಾಡಿ, ‘ಅರಣ್ಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ಸಮಸ್ಯೆ ಬಗೆಹರಿಯದೇ ಇದ್ದರೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು’ ಎಂದರು. ಸ್ಥಳದಲ್ಲಿ ಇದ್ದ ಅರಣ್ಯ ಅಧಿಕಾರಿಗಳಿಗೆ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡದಂತೆ ಸೂಚಿಸಿದರು.

ADVERTISEMENT

ವಲಯ ಅರಣ್ಯಾಧಿಕಾರಿ ನಿಶ್ಚಿತ್ ಮಾತನಾಡಿ, ‘ಬಲ್ಲಾಳರಾಯನ ದುರ್ಗದಲ್ಲಿ ಪ್ರವಾಸಿಗರಿಂದ ಶುಲ್ಕ ವಸೂಲಿಯ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬಲ್ಲಾಳ ರಾಯನದುರ್ಗದ ಅಭಿವೃದ್ಧಿಗೆ ₹ 5 ಲಕ್ಷ
ಅನುದಾನ ಮೀಸಲಿಡಲಾ ಗಿದ್ದು, ಶೀಘ್ರದಲ್ಲೆ ಕಾಮಗಾರಿ ಪ್ರಾರಂಭವಾ ಗಲಿದೆ. ಶುಲ್ಕ ವಸೂಲಿಯ ಬಗೆಗಿನ ಗೊಂದಲ ಬಗೆಹರಿಯುವವರೆಗೂ ಶುಲ್ಕ ವಸೂಲಿ ನಿಲ್ಲಿಸಲಾಗುವುದು’ ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಸುಂಕಸಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಸದಸ್ಯರಾದ ಸುರೇಶ್, ನೇತ್ರಾ, ಪ್ರತಿಮಾ, ಮುಖಂಡರಾದ ಬಿ.ಎಂ.ಭರತ್, ಪ್ರವೀಣ್, ಶ್ರೀನಾಥ್ ವಾಟೆಖಾನ್, ಮರ್ಕಲ್ ವಿಜೇಂದ್ರ, ಡಿ.ವೈ ದಿನೇಶ್, ಡಿ.ವೈ. ಮಹೇಶ್, ಅಜಿತ್, ಸಂಜಯಗೌಡ, ಪರೀಕ್ಷಿತ್ ಜಾವಳಿ, ಪ್ರಭಾಕರ್ ಬಿನ್ನಡಿ, ಶಶಿಧರ್, ಶಿವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.