ADVERTISEMENT

ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ: ತಪ್ಪಿತಸ್ಥರ ವಿರುದ್ಧ ಕ್ರಮ

ಮೃತ ಮಹಿಳೆಯರ ಮನೆಗೆ ಭೇಟಿ ನೀಡಿದ ಕೇಂದ್ರ ಸಚಿವೆ ಶೋಭಾ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 2:56 IST
Last Updated 13 ಆಗಸ್ಟ್ 2022, 2:56 IST
ಬಾಳೂರು ಹೋಬಳಿಯ ಗಬ್ಗಲ್ ಸಮೀಪದ ಕೆ.ತಲಗೂರು ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು ಮೃತರಾದ ಸರಿತಾ ಹಾಗೂ ಚಂದ್ರಮ್ಮ ಅವರ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಶಾಸಕ ಎಂ.ಪಿ.ಕುಮಾರಸ್ವಾಮಿ ಇದ್ದರು.
ಬಾಳೂರು ಹೋಬಳಿಯ ಗಬ್ಗಲ್ ಸಮೀಪದ ಕೆ.ತಲಗೂರು ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು ಮೃತರಾದ ಸರಿತಾ ಹಾಗೂ ಚಂದ್ರಮ್ಮ ಅವರ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಶಾಸಕ ಎಂ.ಪಿ.ಕುಮಾರಸ್ವಾಮಿ ಇದ್ದರು.   

ಕೊಟ್ಟಿಗೆಹಾರ: ‘ಮನೆಯ ಮೇಲೆ ಮರ ಬೀಳುವ ಸ್ಥಿತಿಯಲ್ಲಿದ್ದರೂ ಕೂಡ ಮರ ತೆರವುಗೊಳಿಸದೇ ನಿರ್ಲಕ್ಷ್ಯ ತೋರಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕೆಲ ದಿನಗಳ ಹಿಂದೆ ಮನೆಯ ಮೇಲೆ ಮರ ಬಿದ್ದು ಮೃತಪಟ್ಟಿರುವ ಸರಿತಾ ಮತ್ತು ಚಂದ್ರಮ್ಮ ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ,ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಭಾರಿ ಮಳೆಯಿಂದಾಗಿ ರಸ್ತೆ, ಚರಂಡಿ, ಸೇತುವೆ, ಮನೆಗಳಿಗೆ ಹಾನಿಯಾಗಿದೆ. ಅತಿಯಾದ ಗಾಳಿಯಿಂದ ಮರಗಳು ಧರೆಗುರುಳಿವೆ. ಮನೆ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಮನೆಗಳ ಹತ್ತಿರ ಇರುವ ಮರಗಳ ರೆಂಬೆಗಳನ್ನು ಕಡಿಯಬೇಕು, ಮನೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂಬ ಸೂಚನೆಯನ್ನು ಜಿಲ್ಲಾಧಿಕಾರಿ ನಡೆಸಿದ ಸಭೆಯಲ್ಲಿ ಅರಣ್ಯ ಇಲಾಖೆಗೆ ಸೂಚಿಸಲಾಗಿತ್ತು. ಆದರೆ. ಇಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಮನೆ ಮನೆಯಲ್ಲಿ ತಿರಂಗಾವನ್ನು ಹಾರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಹಲವಾರು ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾತ್ರಿ ಕೂಡ ತಿರಂಗಾವನ್ನು ಹಾರಿಸಬಹುದಾಗಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವವರ ಸ್ಮರಣೆ ಮಾಡಬೇಕು. ಪ್ರತಿ ಮನೆಯಲ್ಲೂ ದೇಶಭಕ್ತಿಯ ಭಾವ ಮೂಡಬೇಕು ಎಂಬ ಕಾರಣಕ್ಕಾಗಿ ಮನೆ– ಮನೆಯಲ್ಲಿ ತಿರಂಗಾವನ್ನು ಹಾರಿಸಲು ಕೇಂದ್ರ ಸರ್ಕಾರ ಕರೆ ನೀಡಿದೆ’ ಎಂದರು.

ಮೃತ ಸರಿತಾ ಮತ್ತು ಚಂದ್ರಮ್ಮ ಅವರ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಮೊರಾರ್ಜಿ ಶಾಲೆಯಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವಂತೆ ಮತ್ತು ಪಾತ್ರೆ, ಬೆಡ್ ಶೀಟ್ ಮುಂತಾದ ದಿನಬಳಕೆ ವಸ್ತುಗಳನ್ನು ಅವರ ಕುಟುಂಬಕ್ಕೆ ನೀಡುವಂತೆ ತಹಶೀಲ್ದಾರ್ ಎಂ.ಎ. ನಾಗರಾಜ್ ಅವರಿಗೆ ಸೂಚಿಸಿದರು.
ಮೃತರ ಕುಟುಂಬಕ್ಕೆ ತಲಾ ₹ 5 ಲಕ್ಷದ ಚೆಕ್ ಅನ್ನು ವಿತರಿಸಲಾಯಿತು.

ಶಾಸಕ ಎಂ.ಪಿ.ಕುಮಾರಸ್ವಾಮಿ, ತಹಶೀಲ್ದಾರ್ ಎಂ.ಎ. ನಾಗರಾಜ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಘು ಜನ್ನಾಪುರ, ಹೋಬಳಿ ಅಧ್ಯಕ್ಷ ಎಂ.ಎಲ್.ವಿಜೇಂದ್ರ, ಗಬ್ಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ದಿನೇಶ್, ಉಪಾಧ್ಯಕ್ಷೆ ಉಮಾ ದಿನೇಶ್, ಉಮಾ ಅಶೋಕ್, ಸದಸ್ಯರಾದ ಶಿವರಾಜ್, ರಾಜೇಶ್, ದಿನಕರ್ ಪೂಜಾರಿ, ಶಶಿಧರ್, ನವೀನ್ ಹಾವಳಿ, ಬಿಜೆಪಿ ಮುಖಂಡರಾದ ಬಿ.ಎಂ. ಭರತ್ , ಶಶಿಕುಮಾರ್, ಶಿವರಾಜ್, ಪರೀಕ್ಷಿತ್ ಜಾವಳಿ, ಸಂಜಯ್ ಕೊಟ್ಟಿಗೆಹಾರ, ರಾಜಸ್ವ ನಿರೀಕ್ಷಕ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.