ADVERTISEMENT

ಕೊಟ್ಟಿಗೆಹಾರ: ಭೂಕುಸಿತ ಪ್ರದೇಶಕ್ಕೆ ಆಶೀಸರ ಭೇಟಿ

ಆಶೀಸರ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 17:15 IST
Last Updated 6 ಜೂನ್ 2020, 17:15 IST
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮಧುಗುಂಡಿಯ ಭೂಕುಸಿತ ಪ್ರದೇಶದಲ್ಲಿ ಉನ್ನತ ಮಟ್ಟದ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಪರಿಶೀಲನೆ ನಡೆಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಚ್‌. ಜಗನ್ನಾಥ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ ಇದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮಧುಗುಂಡಿಯ ಭೂಕುಸಿತ ಪ್ರದೇಶದಲ್ಲಿ ಉನ್ನತ ಮಟ್ಟದ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಪರಿಶೀಲನೆ ನಡೆಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಚ್‌. ಜಗನ್ನಾಥ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ ಇದ್ದಾರೆ.   

ಕೊಟ್ಟಿಗೆಹಾರ: ಹೋದ ವರ್ಷ ಅತಿವೃಷ್ಟಿಯಿಂದ ಮಲೆನಾಡಿನಲ್ಲಿ ಭೂಕುಸಿತ ಸಂಭವಿಸಿದ್ದ ಚೆನ್ನಹಡ್ಲು, ದೇವನಗೂಲ್ ಗುಡ್ಡ, ಸುಂದರಬೈಲ್, ಬಾಳೂರು ಹೊರಟ್ಟಿ, ಮಲೆಮನೆ, ಮಧುಗುಂಡಿ ಗ್ರಾಮಗಳಿಗೆ ಉನ್ನತ ಮಟ್ಟದ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಶನಿವಾರ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ‘ಭೂಕುಸಿತವಾದ ಪ್ರದೇಶದ ಬಗ್ಗೆ ಅಧ್ಯಯನಕ್ಕೆ ಸಮಿತಿಯನ್ನು ಸರ್ಕಾರ ನಿಯುಕ್ತಿ ಮಾಡಿದೆ. ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ, ಪಾರಿಸಾರಿಕ ದುಷ್ಪರಿಣಾಮಗಳನ್ನು ಕಂಡು ಹಿಡಿದು, ಮುಂದೆ ತಡೆಯುವ ಬಗ್ಗೆ ಸಮಾ ಲೋಚನೆ ಮಾಡಲಾಗುತ್ತದೆ. ಈ ಹಿಂದೆ ನಡೆದಿರುವ ಅಧ್ಯಯನದ ಬಗ್ಗೆಯೂ ಮಾಹಿತಿ ಕಲೆ ಹಾಕಿ, ಈ ಪ್ರದೇಶದ ಸ್ಥಾನಿಕ ವಿಭಾಗೀಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದರು.

ಮಲೆಮನೆ ಗ್ರಾಮದ ಸಂತ್ರಸ್ತ ಎಂ.ಎನ್.ಅಶ್ವತ್ಥ್‌ ಮಾತನಾಡಿ, ‘6 ಕುಟುಂಬಗಳು ಭೂಕುಸಿತದಿಂದ ಮನೆ ಮಠ ಕಳೆದುಕೊಂಡಿವೆ. ಮುಖ್ಯಮಂತ್ರಿಯಿಂದ ಹಿಡಿದು ಸಚಿವರಾದಿವರೆಗೆ ಎಲ್ಲರೂ ಬಂದು ಕೇವಲ ಆಶ್ವಾಸನೆ ನೀಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಾವು ಬಾಡಿಗೆ ಮನೆಗೆ ಬಂದು 10 ತಿಂಗಳು ಕಳೆದಿದ್ದು, ಐದು ತಿಂಗಳ ಬಾಡಿಗೆ ಹಣವನ್ನು ಮಾತ್ರ ಸರ್ಕಾರ ನೀಡಿದೆ. ಈಗ ನಾವು ಅತಂತ್ರರಾಗಿದ್ದೇವೆ. ನಮಗೆ ಪರ್ಯಾಯ ಜಮೀನು ಸಿಗದೇ ಸಂಕಷ್ಟಕ್ಕೀಡಾಗಿದ್ದೇವೆ’ ಎಂದು ಅಳಲು ತೋಡಿಕೊಂಡರು.

ADVERTISEMENT

‘ಪರ್ಯಾಯ ಜಮೀನಿಗೆ ಮಲೆ ನಾಡು ಭಾಗದಲ್ಲಿ ಜಾಗದ ಸಮಸ್ಯೆ ಯಿದೆ. ಬಯಲುಸೀಮೆ ಕಡೂರು ಸುತ್ತಮುತ್ತ ಪ್ರದೇಶಗಳಲ್ಲಿ ಜಮೀನು ಇದೆ. ಆದರೆ, ಅಲ್ಲಿಗೆ ಹೋಗಲು ಒಪ್ಪಿದರೆ ನಾವು ಶಿಫಾರಸು ಮಾಡುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ವಿವಿಧ ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಆಶೀಸರ ಹೇಳಿದರು.

ಭೂಕುಸಿತ ಪ್ರದೇಶಗಳಲ್ಲಿ ಒಂದೊಂದು ಗಿಡ ನೆಡುವ ಮೂಲಕ ಪರಿಸರ ಉಳಿಸುವ ಜಾಗೃತಿ ಮೂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.