ಬೀರೂರು: ಸಣ್ಣ ರೈತರು ದುಬಾರಿ ಬಾಡಿಗೆ ತೆತ್ತು ಕೃಷಿ ಸೇವೆಗಳನ್ನು ಪಡೆಯುವುದನ್ನು ತಪ್ಪಿಸಿ ಕೈಗೆಟಕುವ ದರದಲ್ಲಿ ಸೌಲಭ್ಯ ಒದಗಿಸುವುದಕ್ಕಾಗಿ ಜಾರಿಗೆ ತಂದಿರುವ ‘ಕೃಷಿ ಯಂತ್ರಧಾರೆ’ ಯೋಜನೆಯ ಫಲ ಬೀರೂರು ಹೋಬಳಿಯಲ್ಲಿ ರೈತರಿಗೆ ಸಿಗುತ್ತಿಲ್ಲ.
2015ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ಫೂರ್ತಿಗೊಂಡು ಪ್ರತಿ ಹೋಬಳಿಯಲ್ಲಿ ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿತ್ತು. ಬಿತ್ತನೆಯಿಂದ ಕೊಯ್ಲಿನ ವರೆಗೆ ಅಗತ್ಯವಿರುವ ಸಲಕರಣೆಗಳು ಇದರಲ್ಲಿ ಲಭ್ಯವಾಗುತ್ತಿವೆ. ಸೇವಾಕೇಂದ್ರಗಳನ್ನು ಏಜೆನ್ಸಿಗಳ ಮೂಲಕ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿತ್ತು. ಕಡೂರು ತಾಲ್ಲೂಕಿನ 8 ಹೋಬಳಿಗಳಲ್ಲಿ ಸೇವಾ ಕೇಂದ್ರಗಳಿವೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ರೈತರ ಸಭೆ ನಡೆಸಿ ಬಾಡಿಗೆ ದರ ನಿಗದಿಪಡಿಸಲಾಗಿದೆ. ಬೀರೂರು ಹೋಬಳಿಯಲ್ಲಿ ಚಿತ್ರದುರ್ಗ ಮೂಲದ ವರ್ಷಾ ಅಗ್ರಿ ಬಿಸಿನೆಸ್ ಸೆಂಟರ್ ಸೇವಾಕೇಂದ್ರ ಸ್ಥಾಪಿಸಿದೆ. ಆದರೆ ಈ ಕೇಂದ್ರ ಸದಾ ಮುಚ್ಚಿರುತ್ತದೆ ಎನ್ನುವುದು ರೈತರ ಆರೋಪ.
‘ಸೇವಾಕೇಂದ್ರಗಳಲ್ಲಿ ಜೇಷ್ಠತೆ ಆಧಾರದಲ್ಲಿ ಸೇವೆ ನೀಡಲಾಗುತ್ತದೆ. ಅಗತ್ಯ ಇರುವ ಸಲಕರಣೆಯನ್ನು ರೈತರು ಖುದ್ದಾಗಿ ಅಥವಾ ದೂರವಾಣಿ ಮೂಲಕ ನೋಂದಾಯಿಸಿ ಬಳಸಿಕೊಳ್ಳಬಹುದು. ಪ್ರಚಾರದ ಕೊರತೆ ಮತ್ತು ಕೇಂದ್ರ ಯಾವಾಗಲೂ ಬಾಗಿಲು ಮುಚ್ಚಿರುವುದರಿಂದ ರೈತರಿಗೆ ಇದರ ಉಪಯೋಗ ಸಿಗುತ್ತಿಲ್ಲ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋವಿಂದಸ್ವಾಮಿ.
‘ಬೀರೂರು ಹೋಬಳಿಯ ಸೇವಾಕೇಂದ್ರ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಏಜೆನ್ಸಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಳ್ಳುವ ಮೊದಲು ಪರಿಹಾರ ಕಲ್ಪಿಸಲಾಗುವುದು ಎಂದು ಸಹಾಯಕ ನಿರ್ದೇಶಕ ತಿಮ್ಮನಗೌಡ ಎಸ್.ಪಾಟೀಲ್ ಹೇಳಿದರು.
ಏಜೆನ್ಸಿಯ ನಿರ್ವಾಹಕರು ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.